ADVERTISEMENT

ಶಾಲೆಗಳಲ್ಲಿ ಕುಡುಕರ ಕಾಟ: ವಿದ್ಯಾರ್ಥಿನಿ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 4:59 IST
Last Updated 23 ಡಿಸೆಂಬರ್ 2025, 4:59 IST
ಬಸವಕಲ್ಯಾಣದಲ್ಲಿ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನಡೆದ ಮಕ್ಕಳೊಂದಿಗೆ ಸಂವಾದ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿನ ಕುಡುಕರ ಕಾಟದ ಬಗ್ಗೆ ಹೇಳಿ ಕಣ್ಣೀರು ಹಾಕಿದಳು
ಬಸವಕಲ್ಯಾಣದಲ್ಲಿ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನಡೆದ ಮಕ್ಕಳೊಂದಿಗೆ ಸಂವಾದ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿನ ಕುಡುಕರ ಕಾಟದ ಬಗ್ಗೆ ಹೇಳಿ ಕಣ್ಣೀರು ಹಾಕಿದಳು   

ಬಸವಕಲ್ಯಾಣ: ತಾಲ್ಲೂಕಿನ ವಿವಿಧ ಶಾಲೆಗಳ ಆವರಣದಲ್ಲಿ ಕುಡುಕರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸೋಮವಾರ ವಿದ್ಯಾರ್ಥಿಗಳು, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ನೇತೃತ್ವದಲ್ಲಿ ನಡೆದ ಮಕ್ಕಳೊಂದಿಗೆ ಸಂವಾದ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಮನವಿ ಮಾಡಿದರು.

ನಗರದ ತಾ.ಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬೇಲೂರಿನ ವಿದ್ಯಾರ್ಥಿನಿಯೊಬ್ಬಳು, ಕುಡುಕರ ಕಾಟದ ಬಗ್ಗೆ ಹೇಳುತ್ತ ಭಾವೋದ್ವೇಗಕ್ಕೆ ಒಳಗಾಗಿ, ಕಣ್ಣೀರಾದಳು. ಇದೇ ಶಾಲೆಯಲ್ಲಿ ವಿಜ್ಞಾನ ವಿಷಯವನ್ನು ಸರಿಯಾಗಿ ಬೋಧಿಸುವುದಿಲ್ಲ. ಈ ಬಗ್ಗೆ ಕೇಳಿದರೆ ನಮ್ಮನ್ನೇ ಹೆದರಿಸುತ್ತಾರೆ ಎಂದು ಇಬ್ಬರು ವಿದ್ಯಾರ್ಥಿಗಳು ದೂರಿದರು.

ಸಸ್ತಾಪುರ ಸರ್ಕಾರಿ ಶಾಲೆಯ ಆವರಣದಲ್ಲಿ ಸಾರಾಯಿ ಕುಡಿದು ಬಾಟಲಿಗಳನ್ನು ಒಡೆದು ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಗಾಜುಗಳಿಂದ ಕಾಲುಗಳಿಗೆ ಗಾಯಗಳಾಗುತ್ತಿವೆ. ಈ ಬಗ್ಗೆ ಸಂಬಂಧಿತರಿಗೆ ಸಾಕಷ್ಟು ಸಲ ಹೇಳಿದರೂ ಪ್ರಯೋಜನ ಆಗಿಲ್ಲ. ಪ್ರತಾಪುರ ತಾಂಡಾ, ಮೈಸಲಗಾ ಶಾಲೆ ಎದುರಲ್ಲಿ ಕೆಲ ಹುಡುಗರು
ದ್ವಿಚಕ್ರ ವಾಹನದ ಮೇಲೆ ಬಂದು ಕಾಟ ಕೊಡುತ್ತಾರೆ ಎಂದೂ ಹೇಳಿದರು. ನಗರದ ಕೆಲ ಶಾಲೆಗಳ ಎದುರು ವಾಹನ ದಟ್ಟಣೆಯಿಂದಾಗಿ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು.

ADVERTISEMENT

ಖಾನಾಪುರ, ಸಸ್ತಾಪುರ, ಪ್ರತಾಪುರ, ಪ್ರತಾಪುರ ತಾಂಡಾ, ಉಮಾಪುರ, ಜಾನಾಪುರ, ನೀಲಕಂಠವಾಡಿ ಮುಂತಾದ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ಸಂಚಾರವಿಲ್ಲ. ಬಸವಕಲ್ಯಾಣದ ಶಾಲಾ ಕಾಲೇಜುಗಳಿಗೆ ಬರುವವರು ಸಂಕಟ ಅನುಭವಿಸುತ್ತಿದ್ದಾರೆ. ಈ ಕಾರಣ ನಾಲ್ಕೈದು ಗಂಟೆಗಳವರೆಗೆ ಅಲ್ಲಿ ಇಲ್ಲಿ ಸುಮ್ಮನೆ ಕುಳಿತು ಕಾಲ ಕಳೆಯಬೇಕಾಗುತ್ತಿದೆ. ಓದುವುದಕ್ಕೂ ಆಗುತ್ತಿಲ್ಲ ಎಂದು ಕೆಲವರು ಹೇಳಿದರು.

ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಮಾತನಾಡಿ, ‘ವಿದ್ಯಾರ್ಥಿಗಳ ಎಲ್ಲ ಸಮಸ್ಯೆಗಳನ್ನು ವಾರದಲ್ಲಿ ಬಗೆಹರಿಸಿ, ಸಂಬಂಧಿತ ಅಧಿಕಾರಿಗಳು ಆಯೋಗಕ್ಕೆ ವರದಿ ಸಲ್ಲಿಸಬೇಕು. ಶಾಲಾ ಕಾಲೇಜುಗಳ ಆವರಣದಲ್ಲಿದ ಕುಡುಕಟ ಕಾಟ ನಡೆಗೆ ಪೊಲೀಸ್ ಗಸ್ತು ಹೆಚ್ಚಿಸಬೇಕು’ ಎಂದು ಸೂಚಿಸಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಹಶೀಲ್ದಾರ್ ದತ್ತಾತ್ರೇಯ ಗಾದಾ, ಇಒ ರಮೇಶ ಸುಲ್ಫಿ, ಸಿಡಿಪಿಒ ಗೌತಮ ಶಿಂಧೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪ ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರು, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ, ಅಕ್ಷರ ದಾಸೋಹ ಯೋಜನಾಧಿಕಾರಿ ಸಂಜಯಕುಮಾರ ಕಾಂಗೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬಸವಕಲ್ಯಾಣದಲ್ಲಿ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನಡೆದ ಮಕ್ಕಳೊಂದಿಗಿನ ಸಂವಾದ ಸಭೆಯಲ್ಲಿ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ತಹಶೀಲ್ದಾರ್ ದತ್ತಾತ್ರೇಯ ಗಾದಾ ಪಟ್ಟಣ ಠಾಣೆ ಸಿಪಿಐ ಅಲಿಸಾಬ್ ಇದ್ದರು
ಬಸವಕಲ್ಯಾಣದಲ್ಲಿ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನಡೆದ ಮಕ್ಕಳೊಂದಿಗೆ ಸಂವಾದ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಸಮಸ್ಯೆ ಹೇಳಿದಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.