ADVERTISEMENT

ಬಸವಕಲ್ಯಾಣ: ಶಾಲೆ ಬಳಿ ನೀರು ಸಂಗ್ರಹದಿಂದ ತೊಂದರೆ

ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಗೆ ಸ್ವಂತ ಕಟ್ಟಡವಿಲ್ಲ, ಶೌಚಾಲಯವಿಲ್ಲ

ಮಾಣಿಕ ಆರ್ ಭುರೆ
Published 12 ಸೆಪ್ಟೆಂಬರ್ 2025, 5:35 IST
Last Updated 12 ಸೆಪ್ಟೆಂಬರ್ 2025, 5:35 IST
<div class="paragraphs"><p>ಬಸವಕಲ್ಯಾಣದ ಮೌಲಾನಾ ಅಬುಲ್‌ ಕಲಾಂ ಆಜಾದ್ ಶಾಲೆ ಎದುರಲ್ಲಿ ನೀರು ಸಂಗ್ರಹಗೊಂಡಿರುವ ಕಾರಣ ವಿದ್ಯಾರ್ಥಿನಿಯೊಬ್ಬರು ಗೋಡೆ ಪಕ್ಕದ ಇಕ್ಕಟ್ಟಾದ ಜಾಗದಿಂದ ಕೊಠಡಿಗಳಿಗೆ ಹೋಗುತ್ತಿರುವುದು</p></div>

ಬಸವಕಲ್ಯಾಣದ ಮೌಲಾನಾ ಅಬುಲ್‌ ಕಲಾಂ ಆಜಾದ್ ಶಾಲೆ ಎದುರಲ್ಲಿ ನೀರು ಸಂಗ್ರಹಗೊಂಡಿರುವ ಕಾರಣ ವಿದ್ಯಾರ್ಥಿನಿಯೊಬ್ಬರು ಗೋಡೆ ಪಕ್ಕದ ಇಕ್ಕಟ್ಟಾದ ಜಾಗದಿಂದ ಕೊಠಡಿಗಳಿಗೆ ಹೋಗುತ್ತಿರುವುದು

   

ಬಸವಕಲ್ಯಾಣ: ನಗರದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಯ ಕೊಠಡಿಗಳ ಎದುರಲ್ಲೇ ನೀರು ಸಂಗ್ರಹ ಆಗಿದ್ದರಿಂದ ವಿದ್ಯಾರ್ಥಿಗಳಿಗೆ ಹೋಗುವುದಕ್ಕೆ ದಾರಿ ಇಲ್ಲದಂತಾಗಿ ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.

ಮಳೆ ಸುರಿದಾಗಲೆಲ್ಲ ಇಲ್ಲಿ ನೀರು ನಿಂತು ಕೆಲ ದಿನ ಹಾಗೆಯೇ ಇರುತ್ತದೆ. ಕೆಸರು ಆಗುತ್ತದೆ. ಹೀಗಾಗಿ ಬೆಳಿಗ್ಗೆಯ ಪ್ರಾರ್ಥನೆಗೆ ಸ್ಥಳವೇ ಇರುವುದಿಲ್ಲ. ವಿದ್ಯಾರ್ಥಿಗಳು ಒಳಗೆ ಹೋಗಿಬರುವಾಗ ಅನೇಕ ಸಲ ಕಾಲುಜಾರಿ ಬಿದ್ದಿದ್ದಾರೆ. ಹಲವಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ನೀರು ಬೇರೆಡೆ ಸಾಗುವುದಕ್ಕೆ ದಾರಿ ಮಾಡಿಕೊಟ್ಟಿಲ್ಲ.

ADVERTISEMENT

ಸಾರ್ವಜನಿಕ ಆಸ್ಪತ್ರೆಯ ರಸ್ತೆಯಿಂದ ಮತ್ತು ಬಿಆರ್‌ಸಿ ಕಚೇರಿ ಕಡೆಯಿಂದ ಬರುವ ನೀರು ಇಲ್ಲಿ ಸಂಗ್ರಹಗೊಳ್ಳುವ ಕಾರಣ ಕೆಲವು ಸಲ ಈ ಸ್ಥಳ ಮಿನಿ ಕೆರೆಯಂತಾಗುತ್ತದೆ. ಅಂಥದರಲ್ಲಿಯೇ ಮಕ್ಕಳು ನಡೆದುಕೊಂಡು ಹೋಗುತ್ತಾರೆ. ಆದರೂ, ಈ ಸಮಸ್ಯೆ ಬಗೆಹರಿಸುವುದಕ್ಕೆ ಇದುವರೆಗೆ ಯಾರೂ ಪ್ರಯತ್ನಿಸಿಲ್ಲ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಈ ಶಾಲೆಯಲ್ಲಿ 6ನೇ ತರಗತಿಯಿಂದ 10ನೇವರೆಗೆ ತರಗತಿಗಳು ನಡೆಯುತ್ತವೆ. 250ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಕುಳಿತುಕೊಳ್ಳುವುದಕ್ಕೆ ಸಮರ್ಪಕ ಜಾಗವೂ ಇಲ್ಲ. ಶೌಚಾಲಯವಿಲ್ಲ. ಮೂರು ಚಿಕ್ಕ ಚಿಕ್ಕ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತವೆ. ಇಲ್ಲಿ ಅವ್ಯವಸ್ಥೆ ಇರುವುದರಿಂದ ಬೇರೆಡೆ ಕಟ್ಟಡದಲ್ಲಿ ಶಾಲೆ ನಡೆಸಬೇಕು. ಎದುರಿಗೆ ನೀರು ಸಂಗ್ರಹಗೊಳ್ಳದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಕರು ಅನೇಕ ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ.

‘ಈಗಿರುವ ಸ್ಥಳದಲ್ಲಿ ಮಕ್ಕಳಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಹೊಸ ಕಟ್ಟಡದ ಕಾಮಗಾರಿ ಭರದಿಂದ ನಡೆಸಲಾಗುತ್ತಿದೆ. ಅದರ ಉದ್ಘಾಟನೆಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಇತರೆ ಅಗತ್ಯ ವ್ಯವಸ್ಥೆ ಒದಗಿಸಲಾಗುವುದು’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ತಿಳಿಸಿದ್ದಾರೆ.

ಶಾಲೆಯ ಹೊಸ ಕಟ್ಟಡದ ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿದೆ. ಅದನ್ನು ಶೀಘ್ರ ಉದ್ಘಾಟಿಸಿ ಅಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಅನುಕೂಲತೆ ಒದಗಿಸಬೇಕು.
ತಹಶೀನಅಲಿ ಜಮಾದಾರ ಮುಖಂಡ ಬಸವಕಲ್ಯಾಣ
ಹೊಸ ಕಟ್ಟಡ ಕಟ್ಟಲಾಗುತ್ತಿದೆ ಎಂದು ಕೆಲ ವರ್ಷಗಳಿಂದ ಹೇಳಲಾಗುತ್ತಿದ್ದರೂ ಆ ಕೆಲಸ ಆಗಿಲ್ಲ. ಅದಕ್ಕಿಂತ ಮೊದಲು ಈಗಿರುವ ಸ್ಥಳದಲ್ಲಿ ಸುಧಾರಣೆ ನಡೆಯಲಿ
ಎಂ.ಡಿ.ಕುತ್ಬುದ್ದೀನ್ ಸಾಮಾಜಿಕ ಕಾರ್ಯಕರ್ತ

ಆವರಣದಲ್ಲಿ ಬಿಇಒ ಬಿಆರ್‌ಸಿ ಕಚೇರಿಗಳಿದ್ದರೂ ಲಕ್ಷ್ಯವಿಲ್ಲ

ಆವರಣದಲ್ಲಿಯೇ ಬಿಇಒ ಮತ್ತು ಬಿಆರ್‌ಸಿ ಕಚೇರಿಗಳು ಇದ್ದರೂ ಶಾಲೆಯ ಅವ್ಯವಸ್ಥೆಯ ಕಡೆಗೆ ಯಾರೂ ಲಕ್ಷ್ಯ ನೀಡಿಲ್ಲ. ಸಾರ್ವಜನಿಕ ಆಸ್ಪತ್ರೆಯ ಗೇಟ್‌ನಿಂದ ಬಿಆರ್‌ಸಿ ಕಚೇರಿಗೆ ಹೋಗುವ ದಾರಿ ಪಕ್ಕದಲ್ಲಿ ಅಲ್ಲಲ್ಲಿ ಕಸವೂ ಸಂಗ್ರಹಗೊಂಡಿದೆ. ಆವರಣದ ಮಧ್ಯದಲ್ಲಿನ ದೊಡ್ಡ ಕಟ್ಟಡದಲ್ಲಿ ಸರ್ಕಾರಿ ಪದವಿ ಕಾಲೇಜು ಬಿಇಒ ಕಚೇರಿ ಇದೆ. ಸುತ್ತಲಿನ ಚಿಕ್ಕ ಕೊಠಡಿಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಸಂಘದ ಕಚೇರಿಯೂ ಇವೆ. ಇವುಗಳೆಲ್ಲದರ ಎದುರಲ್ಲಿ ಹುಲ್ಲು ಮತ್ತು ಮುಳ್ಳು ಕಂಟಿಗಳು ಬೆಳೆದಿದ್ದು ಮಕ್ಕಳಿಗೆ ಹಾವು ಚೇಳಿನ ಭಯವೂ ಕಾಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.