ADVERTISEMENT

ಬಸವಕಲ್ಯಾಣ: ಸ್ಕೌಟ್‌, ಗೈಡ್ಸ್‌ನಿಂದ ಮಾಸ್ಕ್ ಸಿದ್ಧ

ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ವಿತರಿಸಲು ಮಾಸ್ಕ್ ತಯಾರಿಕೆ

ಮಾಣಿಕ ಆರ್ ಭುರೆ
Published 7 ಮೇ 2020, 10:11 IST
Last Updated 7 ಮೇ 2020, 10:11 IST
ಬಸವಕಲ್ಯಾಣ ತಾಲ್ಲೂಕು ಭಾರತ ಸ್ಕೌಟ್‌ ಮತ್ತು ಗೈಡ್ಸ್ ಸಂಸ್ಥೆ ಕಾರ್ಯದರ್ಶಿ ಅನಿಲ ಶಾಸ್ತ್ರಿ ಮಾಸ್ಕ್‌ಗಳನ್ನು ಹೊಲಿಯುತ್ತಿರುವುದು
ಬಸವಕಲ್ಯಾಣ ತಾಲ್ಲೂಕು ಭಾರತ ಸ್ಕೌಟ್‌ ಮತ್ತು ಗೈಡ್ಸ್ ಸಂಸ್ಥೆ ಕಾರ್ಯದರ್ಶಿ ಅನಿಲ ಶಾಸ್ತ್ರಿ ಮಾಸ್ಕ್‌ಗಳನ್ನು ಹೊಲಿಯುತ್ತಿರುವುದು   

ಬಸವಕಲ್ಯಾಣ: ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಆಯೋಜಿಸುವ ನಿರ್ಧಾರ ಪ್ರಕಟಿಸಿರುವ ಬೆನ್ನಲ್ಲೇ ಇಲ್ಲಿನ ತಾಲ್ಲೂಕು ಸ್ಕೌಟ್‌ ಮತ್ತು ಗೈಡ್ಸ್ ಸಂಸ್ಥೆ ಪರೀಕ್ಷೆಗೆ ಹಾಜರಾಗುವವರಿಗಾಗಿ ಸದ್ದುಗದ್ದಲವಿಲ್ಲದೆ ಮಾಸ್ಕ್ ತಯಾರಿಸುವಲ್ಲಿ ನಿರತವಾಗಿದೆ.

ಕೊರೊನಾ ವೈರಾಣು ಹರಡುವಿಕೆಗೆ ಎಲ್ಲೆಡೆ ಲಾಕ್ ಡೌನ್ ಇರುವುದರಿಂದ ಹಾಗೂ ದೇಶ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ಕಾರಣ ಇಲ್ಲಿನ ಸ್ಕೌಟ್‌ ಮತ್ತು ಗೈಡ್ಸ್ ಸಂಸ್ಥೆಯ ಕೆಡೆಟ್‌ಗಳು ಹಾಗೂ ಇತರೆ ಪ್ರತಿನಿಧಿಗಳು ಒಟ್ಟು ₹18350 ಸಂಗ್ರಹಿಸಿದ್ದಾರೆ. ಇದರಲ್ಲಿ ಕೆಲ ದೇಣಿಗೆದಾರರಿಂದ ಪಡೆದ ಹಣವೂ ಸೇರಿದೆ.

ಸಂಗ್ರಹಣೆಯಾದ ಒಟ್ಟು ಹಣದಲ್ಲಿ ₹14000 ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಿ ಇನ್ನುಳಿದ ಹಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಮಾಸ್ಕ್ ಗಳನ್ನು ಸಿದ್ಧಪಡಿಸಲಾಗುತ್ತಿದೆ. ಸಂಸ್ಥೆ ತಾಲ್ಲೂಕು ಕಾರ್ಯದರ್ಶಿ ಅನಿಲ ಶಾಸ್ತ್ರೀಯವರು ಈ ಹಣದ ಚೆಕ್ ನ್ನು ಈಚೆಗೆ ಇಲ್ಲಿನ ಉಪ ವಿಭಾಗಾಧಿಕಾರಿ ಭಂವರಸಿಂಗ್ ಮೀನಾ ಹಾಗೂ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಸಲ್ಲಿಸಿದ್ದಾರೆ.

ADVERTISEMENT

ಅನಿಲ ಶಾಸ್ತ್ರೀ, ಕೆಡೆಟ್‌ಗಳಾದ ವೈಷ್ಣವಿ ಖಾನಾಪುರ, ಅಮೀತ್ ಎಸ್.ಬಿ.ಆರ್.ಶಾಲೆ ಬಸವಕಲ್ಯಾಣ, ಅಮೂಲ್ ಜ್ಞಾನಪ್ರಿಯಾ ಶಾಲೆ ಬಸವಕಲ್ಯಾಣ ಮತ್ತಿತರರು ಮಾಸ್ಕ್ ತಯಾರಿಸುವಲ್ಲಿ ನಿರತರಾಗಿದ್ದಾರೆ. ಸಂಸ್ಥೆಯಿಂದ ವಿವಿಧ ಆಪತ್ತುಗಳಲ್ಲಿ ವಿವಿಧ ರೀತಿಯ ಸೇವೆ ಸಲ್ಲಿಸಿರುವುದು ಎಲ್ಲರಿಗೂ ಗೊತ್ತಿದ್ದು ಈಗ ಮಾಸ್ಕ್ ತಯಾರಿಸಿ ವಿತರಿಸುವ ಸಿದ್ಧತೆ ಕೈಗೊಂಡು ಸಂಸ್ಥೆಯ ಕೆಡೆಟ್‌ಗಳು ಜನಪರ ಸೇವೆಗೆ ಯಾವಾಗಲೂ ಸಿದ್ಧರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿರುವ ಕಾರಣ ಮಾಸ್ಕ್ ತಯಾರಿಸುವ ನಿರ್ಣಯಕ್ಕೆ ಬರಲಾಯಿತು. ಇದಕ್ಕೆ ಕೆಡೆಟ್‌ಗಳು ಕೂಡ ಸಹಕರಿಸಲು ಸಮ್ಮತಿ ಸೂಚಿಸಿದರು. ಇದುವರೆಗೆ 500 ಮಾಸ್ಕ್ ಗಳನ್ನು ಸಿದ್ಧಪಡಿಸಲಾಗಿದ್ದು ಇನ್ನೂ ಹೆಚ್ಚಿನ ಮಾಸ್ಕ್ ತಯಾರಿಸಿ ಗ್ರಾಮೀಣ ಭಾಗದಲ್ಲಿನ ಪರೀಕ್ಷಾ ಕೇಂದ್ರಕ್ಕೆ ಮಾಸ್ಕ್ ಇಲ್ಲದೆ ಬರುವವರಿಗೆ ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ತಾಲ್ಲೂಕು ಘಟಕದ ಕಾರ್ಯದರ್ಶಿ ಅನಿಲ ಶಾಸ್ತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.