ADVERTISEMENT

ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:20 IST
Last Updated 10 ಫೆಬ್ರುವರಿ 2026, 7:20 IST
ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ಕೆರೆ ದಂಡೆಯಲ್ಲಿ ದೊರೆತ ಮಕರ ತೋರಣದ ಶಿಲ್ಪ
ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ಕೆರೆ ದಂಡೆಯಲ್ಲಿ ದೊರೆತ ಮಕರ ತೋರಣದ ಶಿಲ್ಪ    

ಬಸವಕಲ್ಯಾಣ(ಬೀದರ್‌ ಜಿಲ್ಲೆ): ಶಿಲ್ಪವೈಭವದ ಶಿವಮಂದಿರಕ್ಕೆ ಹೆಸರಾದ ತಾಲ್ಲೂಕಿನ ನಾರಾಯಣಪುರದಲ್ಲಿ ಚಾಲುಕ್ಯರ ಕಾಲದ ವಿಶಿಷ್ಟ ಶಿಲಾಶಾಸನ ದೊರೆತಿದೆ.

ಕಲ್ಯಾಣವನ್ನು 11ನೇ ಶತಮಾನದಲ್ಲಿ ರಾಜಧಾನಿಯನ್ನಾಗಿಸಿ ಚಾಲುಕ್ಯರು ಆಳ್ವಿಕೆ ಆರಂಭಿಸಿದ್ದರು. ಆಗ ಅಲ್ಲಿ ಅನೇಕ ಗುಡಿ ಗುಂಡಾರಗಳು ನಿರ್ಮಾಣವಾದವು. ನಗರಕ್ಕೆ ಹತ್ತಿಕೊಂಡಿರುವ ನಾರಾಯಣಪುರ ಭಾಗದಲ್ಲಿ ಹೆಚ್ಚಿನ ಕಟ್ಟಡಗಳ ಕುರುಹುಗಳು ಇವೆ. ಹೀಗಾಗಿ ಈಗಲೂ ಇಲ್ಲಿ ನೆಲ ಅಗೆಯುವಾಗ ಹಳೆಯ ಅವಶೇಷಗಳು ಪತ್ತೆ ಆಗುತ್ತಿವೆ. ಕಳೆದ 10 ವರ್ಷಗಳಲ್ಲಿ ಹತ್ತಾರು ಶಿಲ್ಪಗಳು ದೊರೆತಿವೆ.

ಕಾರ್ಯಕ್ರಮವೊಂದರ ಆಯೋಜನೆಗಾಗಿ ಸ್ವಚ್ಛತೆ ಕೈಗೊಳ್ಳುತ್ತಿದ್ದಾಗ ಅವಶೇಷಗಳು ಪತ್ತೆ ಆಗಿವೆ. ಗ್ರಾಮದ ಐತಿಹಾಸಿಕ ಕೆರೆ ದಂಡೆಯಲ್ಲಿನ ಭವಾನಿ ಮಂದಿರದ ಪಕ್ಕ ಇವು ಸಿಕ್ಕಿದ್ದು ಶಿಲಾ ಶಾಸನದ ಮೇಲಿನ ಪಟ್ಟಿಯಲ್ಲಿಯೂ ಕೈಯಲ್ಲಿ ಆಯುಧಗಳಿರುವ ದೇವತೆಯ ಚಿತ್ರವಿದೆ. ಇನ್ನುಳಿದಂತೆ ಸೂರ್ಯ, ಚಂದ್ರ, ಹಸು, ಮಕರ, ನಾಗದೇವತೆಯ ಕೆತ್ತನೆಗಳಿರುವ ಶಿಲ್ಪಗಳಿವೆ. 

ADVERTISEMENT

ಎರಡು ಅಡಿ ಎತ್ತರದ ಶಾಸನದಲ್ಲಿ ಹಳೆಗನ್ನಡದಲ್ಲಿ ಬರೆಯಲಾಗಿದ್ದು ಓದಲು ಬರುವಂತಿದೆ. ಆದರೆ, ಏನು ಬರೆಯಲಾಗಿದೆ ಎಂಬುದು ಮಾತ್ರ ತಜ್ಞರಿಂದ ಮಾತ್ರ ಗೊತ್ತಾಗಬೇಕಿದೆ. ಮಕರ ತೋರಣ ಹಾಗೂ ಹಾವಿನ ಹೆಡೆಯಿರುವ ಶಿಲ್ಪಗಳು, ಲಿಂಗ ಸಹ ಸಿಕ್ಕಿವೆ. ಶಿವ ಮಂದಿರ ಒಳಗೊಂಡು ಅನ್ಯ ಕಡೆಯೂ ಇಂಥ ಶಿಲಾ ಶಾಸನಗಳಿವೆ. ಅಲ್ಲದೆ ಅಲ್ಲಲ್ಲಿ ಅನೇಕ ಶಿಲ್ಪಗಳು ಚದುರಿವೆ. ಊರಲ್ಲೆಲ್ಲ ಕಲ್ಲಿನ ಗುಡಿಗಳು ಸಹ ಇವೆ. ಇವುಗಳ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕು. ಉತ್ಖನನ ಮಾಡಿದರೆ ಇನ್ನೂ ಹೆಚ್ಚಿನ ಮಾಹಿತಿ ದೊರಕಬಲ್ಲದು ಎಂಬುದು ಗ್ರಾಮಸ್ಥರಾದ ಶಂಕರಲಿಂಗ ಮತ್ತು ರಾಜಪ್ಪ ಅವರ ಅನಿಸಿಕೆ.

ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ಕೆರೆ ದಂಡೆಯಲ್ಲಿ ದೊರೆತ ವಿಶಿಷ್ಟ ಶಿಲಾ ಶಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.