ADVERTISEMENT

51 ಜನರಿಂದ ಸ್ವಯಂ ಪ್ರೇರಿತ ರಕ್ತದಾನ

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯಕ್ಕೆ ಬೆಲ್ದಾಳೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 15:50 IST
Last Updated 27 ಜನವರಿ 2021, 15:50 IST
ಬೀದರ್‌ನ ಮೈ ಡೆಂಟಿಸ್ಟ್ ಕ್ಲಿನಿಕ್‍ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು
ಬೀದರ್‌ನ ಮೈ ಡೆಂಟಿಸ್ಟ್ ಕ್ಲಿನಿಕ್‍ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು   

ಬೀದರ್: ಇಲ್ಲಿಯ ಕೆ.ಇ.ಬಿ. ರಸ್ತೆಯಲ್ಲಿ ಇರುವ ಪತಂಜಲಿ ಸ್ಟೋರ್ ಎದುರಿನ ಮೈ ಡೆಂಟಿಸ್ಟ್ ಕ್ಲಿನಿಕ್‍ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 51 ಜನ ರಕ್ತದಾನ ಮಾಡಿದರು.

ರೋಟರಿ ಕ್ಲಬ್ ಸದಸ್ಯರು, ಎನ್‍ಸಿಸಿ ಕೆಡೆಟ್‍ಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಸಾಮಾಜಿಕ ಹೊಣೆಗಾರಿಕೆ ಮೆರೆದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ತುರ್ತು ಅವಶ್ಯಕತೆ ಇರುವವರಿಗೆ ನೆರವಾಗಲು ರಕ್ತದಾನ ಶಿಬಿರ ಸಂಘಟಿಸಿರುವುದು ಶ್ಲಾಘನೀಯ ಎಂದು ಶಿಬಿರಕ್ಕೆ ಚಾಲನೆ ನೀಡಿದ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ADVERTISEMENT

ಕ್ಲಬ್ ಪದಾಧಿಕಾರಿಗಳು ಸೇನಾ ಮಾಹಿತಿ ಕಾರ್ಯಾಗಾರ, ಐತಿಹಾಸಿಕ ಪಾಪನಾಶ ಕೆರೆ ಸ್ವಚ್ಛತೆ, ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡುವ ಉಡಾನ್ ಮೊದಲಾದ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದಾರೆ ಎಂದು ನುಡಿದರು.

ರಕ್ತದಾನ ಎಲ್ಲ ದಾನಗಳಲ್ಲೇ ಶ್ರೇಷ್ಠವಾಗಿದೆ. ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕು ಎಂದು ಬಿ.ವಿ.ಭೂಮರೆಡ್ಡಿ ಕಾಲೇಜಿನ ಎನ್‍ಸಿಸಿ ಅಧಿಕಾರಿ ಮೇಜರ್ ಡಾ. ಪಿ. ವಿಠ್ಠಲ ರೆಡ್ಡಿ ತಿಳಿಸಿದರು.

ರಕ್ತದಾನ ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಸಹಕಾರಿಯಾಗುತ್ತದೆ. ಹೀಗಾಗಿ ಪ್ರತಿ ವರ್ಷ ರಕ್ತದಾನ ಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತ ಬರಲಾಗುತ್ತಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಹೇಳಿದರು.

ಕ್ಲಬ್ ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಚಟುವಟಿಕೆಗಳಲ್ಲಿ ನಿರತವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಬ್ರಿಮ್ಸ್ ಪ್ರಾಚಾರ್ಯ ಡಾ. ರಾಜೇಶ ಪಾರಾ, ರೋಟರಿ ಕಲ್ಯಾಣ ಝೋನ್ ನಿಯೋಜಿತ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಕರ್ನಾಟಕ ಕಾಲೇಜು ಎನ್‍ಸಿಸಿ ಅಧಿಕಾರಿ ಅಶ್ವಿನ್ ಎಲ್. ಚವಾಣ್, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಉಪಾಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಖಜಾಂಚಿ ಡಾ. ರಿತೇಶ ಸುಲೆಗಾಂವ, ಸದಸ್ಯರಾದ ಶಿವಕುಮಾರ ಪಾಖಲ್, ಸತೀಶ್ ಸ್ವಾಮಿ, ರಿಷಿಕೇಶ ಪಾಟೀಲ, ರಾಜಕುಮಾರ ಅಳ್ಳೆ, ಭದ್ರಪ್ಪ ಮಿರಕಲ್, ಸಚ್ಚಿದಾನಂದ ಸ್ವಾಮಿ ಉಪಸ್ಥಿತರಿದ್ದರು. ನಿತೇಶಕುಮಾರ ಬಿರಾದಾರ ನಿರೂಪಿಸಿದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ, ಮೈ ಡೆಂಟಿಸ್ಟ್ ಕ್ಲಿನಿಕ್, ಬಿ.ವಿ. ಭೂಮರಡ್ಡಿ ಕಾಲೇಜು ಹಾಗೂ ಕರ್ನಾಟಕ ಕಾಲೇಜಿನ ಎನ್‍ಸಿಸಿ ಘಟಕಗಳ ವತಿಯಿಂದ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.