ADVERTISEMENT

ಶರಣರದ್ದು ಸತ್ಯ, ಶುದ್ಧ ಕಾಯಕ: ಉಸ್ತುರಿ ಕೋರಣೇಶ್ವರ ಸ್ವಾಮೀಜಿ

ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 13:31 IST
Last Updated 27 ನವೆಂಬರ್ 2019, 13:31 IST
ಹುಲಸೂರನ ಅಲ್ಲಮಪ್ರಭು ಪೀಠ ಅನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಸ್ತುರಿ ಕೋರಣೇಶ್ವರ ಸ್ವಾಮಿ ಭಾವಚಿತ್ರದ ಪೂಜೆ ನೆರವೇರಿಸಿದರು
ಹುಲಸೂರನ ಅಲ್ಲಮಪ್ರಭು ಪೀಠ ಅನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಸ್ತುರಿ ಕೋರಣೇಶ್ವರ ಸ್ವಾಮಿ ಭಾವಚಿತ್ರದ ಪೂಜೆ ನೆರವೇರಿಸಿದರು   

ಹುಲಸೂರ: ‘ಬಸವಾದಿ ಶರಣರು ಸತ್ಯಶುದ್ಧ ಕಾಯಕ ಕೈಗೊಂಡಿದ್ದರು. ಅವರ ತತ್ವದ ಪಾಲನೆ ಅಗತ್ಯ’ ಎಂದು ಉಸ್ತುರಿ ಕೋರಣೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ಅಲ್ಲಮಪ್ರಭು ಪೀಠ ಅನುಭವ ಮಂಟಪದಲ್ಲಿ ಮಂಗಳವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಐದು ದಿನಗಳ ಪ್ರವಚನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಯಕ, ದಾಸೋಹಕ್ಕೆ ಮಹತ್ವ ನೀಡಿದಂತೆ ಜನಸಾಮಾನ್ಯರಲ್ಲಿನ ಮೂಢನಂಬಿಕೆ, ಕಂದಾಚಾರ ಹೊಡೆದೋಡಿಸಲು ಶರಣರು ವಚನಗಳನ್ನು ರಚಿಸಿದರು. ಈ ಮೂಲಕ ಅರಿವು ಮೂಡಿಸಿ ಸಮಾಜದಲ್ಲಿ ಪರಿವರ್ತನೆ ತರಲು ಪ್ರಯತ್ನಿಸಿದರು. ಸಮಾನತೆ, ಸೌಹಾರ್ದತೆ ತರುವುದೇ ಅವರ ಉದ್ದೇಶವಾಗಿತ್ತು ಎಂದರು.

ADVERTISEMENT

ದೇವರು ಮಠ ಮಂದಿರಗಳಲ್ಲಿ ಇಲ್ಲ. ದಲಿತರು, ಹಿಂದುಳಿದವರಿಗೆ ದೇವಸ್ಥಾನಗಳ ಪ್ರವೇಶ ನಿಷೇಧಿಸಲಾಗಿತ್ತು. ಆದ್ದರಿಂದ ದೇವರು ತನ್ನಲ್ಲಿಯೇ ಇದ್ದಾನೆಂದು ಹೇಳಿ ಇಷ್ಟಲಿಂಗವನ್ನು ಅಂಗೈಗೆ ನೀಡಿದರು. ಲಿಂಗದಲ್ಲಿಯೇ ಮಹಾದೇವನನ್ನು ಕಾಣಬೇಕು ಎಂದು ಸಾರಿದರು ಎಂದರು.

ಸಾಯಗಾಂವ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಮಠಾಧಿಪತಿಗಳಾದ ಡಾ.ಶಿವಾನಂದ ಸ್ವಾಮೀಜಿಯವರು ಬಸವ ಜಯಂತಿಯಿಂದ ದೇಶದಾದ್ಯಂತ ಬಸವತತ್ವದ ಪ್ರಚಾರಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದಾರೆ. ಅವರು ಇನ್ನು ಮೂರು ತಿಂಗಳು ಯಾತ್ರೆ ಕೈಗೊಂಡು ಹಿಂದಿರುಗಲಿದ್ದಾರೆ. ಅಲ್ಲಿಯವರೆಗೆ ಭಕ್ತರೇ ಎಲ್ಲವನ್ನು ನೋಡಿಕೊಳ್ಳಬೇಕಾಗಿದೆ. ಶರಣ ಸಂಸ್ಕೃತಿ ಉತ್ಸವವನ್ನು ಎಲ್ಲರ ಸಹಕಾರದಿಂದ ಅದ್ಧೂರಿಯಾಗಿ ನಡೆಸಬೇಕಾಗಿದೆ’ ಎಂದರು.

ಪಿಕೆಪಿಎಸ್ ಅಧ್ಯಕ್ಷ ಕಾಶಿನಾಥ ಬೀರಗೆ ಉದ್ಘಾಟನೆ ನೆರವೇರಿಸಿದರು.ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಶಿನಾಥ ಪಾರಶೆಟ್ಟಿ, ಟ್ರಸ್ಟ್ ಅಧ್ಯಕ್ಷ ಬಸವರಾಜ ಮುಕ್ತಾ, ಚಂದ್ರಶೇಖರ ಕಾಡಾದಿ, ಶಂಕರಯ್ಯ ಧಾನೂರೆ, ಅಪ್ಪಾರಾವ್ ಖಂಡಾಳೆ, ಗುರುನಾಥ ಬಾಲ್ಕುಂದೆ, ವೀರಪ್ಪ ಬಾಲ್ಕುಂದೆ ಪಾಲ್ಗೊಂಡಿದ್ದರು.

ಆಕಾಶ ಖಂಡಾಳೆ ಸ್ವಾಗತಿಸಿದರು. ರಾಜಕುಮಾರ ತೊಂಡಾರೆ ನಿರೂಪಿಸಿದರು. ಬೂದಯ್ಯ ಹಿರೇಮಠ ಮತ್ತು ಮಲ್ಲಿಕಾರ್ಜುನ ಶಹಾಪುರ ಸಂಗೀತ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.