ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಸೋಮವಾರ ಅನ್ನದಾತರು ಸಂಭ್ರಮದಿಂದ ಎಳ್ಳಮವಾಸ್ಯೆ ಹಬ್ಬವನ್ನು ಆಚರಿಸಿದರು.
ಹಬ್ಬದ ಸಂಪ್ರದಾಯದಂತೆ ತರಹೇವಾರಿ ಭಕ್ಷ, ಭೋಜನದ ಬುತ್ತಿಯೊಂದಿಗೆ ಎತ್ತಿನ ಬಂಡಿ, ಕಾರು, ಬೈಕ್‌ಗಳಲ್ಲಿ ಜಮೀನುಗಳಿಗೆ ತೆರಳಿದ ರೈತರು ಲಕ್ಷ್ಮಿ ಹಾಗೂ ಪಾಂಡವರ ಪೂಜೆ ಸಲ್ಲಿಸಿ, ಹೊಲದಲ್ಲಿ 'ಓಲಗ್ಯಾ, ಓಲಗ್ಯಾ ಚೆಲ್ಲಂ ಪೋಲಗ್ಯಾ' ಎಂದು ಕೂಗುತ್ತಾ ಚರಗಾ ಚೆಲ್ಲಿದರು. ಬಳಿಕ, ನೆಂಟರು, ಸ್ನೇಹಿತರೊಡಗೂಡಿ ಹಸಿರು ಪರಿಸರದಲ್ಲಿ ಹಬ್ಬದ ವಿಶೇಷ ಖಾದ್ಯವಾದ ಭಜ್ಜಿ, ಕಡಬು, ಹೋಳಿಗೆ, ಹುಗ್ಗಿ, ಅಂಬಲಿ, ಸಜ್ಜೆ ರೊಟ್ಟಿ, ಬಿಳಿ ಜೋಳದ ರೊಟ್ಟಿ, ಅನ್ನ, ಸಾರು, ಹೀಗೆ ವಿವಿಧ ನಮೂನೆಯ ಭೋಜನ ಸವಿದರು.
ಊಟದ ಬಳಿಕ ಕೆಲ ಕಡೆ ಮಹಿಳೆಯರು, ಯುವತಿಯರು, ಮಕ್ಕಳು ಜೋಕಾಲಿಯಾಡಿದರೆ, ಗಂಡಸರು ವಿವಿಧ ಆಟವಾಡಿ ಗಮನ ಸೆಳೆದರು. ಜಿಲ್ಲೆಯ ಕೆಲವೆಡೆ ಯುವಕರು ಗಾಳಿಪಟವನ್ನೂ ಹಾರಿಸಿ ಸಂಭ್ರಮಿಸಿದರು. ಗ್ರಾಮೀಣ ಭಾಗದ ಅನೇಕರ ಜಮೀನುಗಳಲ್ಲಿ ಟೆಂಟ್ ಹಾಕಿ ಸಂಬಂಧಿಗಳಿಗೆ ಊಟ ಹಾಕುವುದು ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.