ಕಮಲನಗರ: ರಸ್ತೆ ತುಂಬೆಲ್ಲ ಹರಿಯುವ ಚರಂಡಿ ನೀರು, ದುರ್ನಾತ, ಅನೈರ್ಮಲ್ಯ ಉಂಟಾಗಿ ಸಾಂಕ್ರಾಮಿಕ ರೋಗಗಳ ಭೀತಿ, ವಿದ್ಯುತ್ ದೀಪದ ಸಮಸ್ಯೆ...
ಇದು, ತಾಲ್ಲೂಕಿನ ಡಿಗ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚ್ಯಾಂಡೇಶ್ವರ ಗ್ರಾಮದಲ್ಲಿ ನಿತ್ಯ ಕಂಡು ಸಮಸ್ಯೆಗಳಾಗಿವೆ. ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಚರಂಡಿಗಳಲ್ಲಿ ಹೂಳು ತುಂಬಿಕೊಂಡು, ನೀರು ಸರಾಗವಾಗಿ ಹರಿದು ಹೋಗದೇ ರಸ್ತೆ ಮೇಲೆಯೇ ಹರಿಯುತ್ತಿದೆ.
ಗ್ರಾಮದ ಚಾಂದ್‌ಬಿಲೇಶ್ವರ ಮಂದಿರದ ಪಕ್ಕದಲ್ಲಿ ಚರಂಡಿ ನೀರು ರಸ್ತೆಯ ಮೇಲೆ ನಿಂತಿದ್ದು, ಭಕ್ತರು ಮೂಗು ಮುಚ್ಚಿಕೊಂಡು ದೇವರ ದರ್ಶನಕ್ಕೆ ಹೋಗಬೇಕಾದ ಸ್ಥಿತಿಯಿದೆ. ಗ್ರಾಮಕ್ಕೆ ಬರುವ ಜನರಿಗೆ ಚರಂಡಿ ನೀರಿನ ದುರ್ವಾಸನಯೇ ಸ್ವಾಗತಿಸುತ್ತದೆ.
‘ಪ್ರಮುಖ ರಸ್ತೆ ಬದಿ ಇರುವ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ರಸ್ತೆಯ ಮೇಲೆ ಓಡಾಡುವ ಜನರು ಚರಂಡಿ ಕೊಳಚೆ ನೀರಿನ ಮೇಲೆ ತಿರುಗಾಡುವಂತಾಗಿದೆ. ಅಲ್ಲದೇ ಚರಂಡಿ ನೀರು ರಸ್ತೆಗೆ ತುಂಬಿಕೊಂಡಿದ್ದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಕೆಟ್ಟುನಿಂತ ವಿದ್ಯುತ್ ದೀಪಗಳು: ಗ್ರಾಮದಲ್ಲಿ ವಿದ್ಯುತ್ ಕಂಬಗಳಲ್ಲಿ ದೀಪಗಳು ಇದ್ದರೂ ಕೆಟ್ಟು ಹೋಗಿವೆ. ಇದರಿಂದ ಗ್ರಾಮಸ್ಥರು ಕತ್ತಲೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೂಡಲೇ ಸಂಬಂಧಿತ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳು ಚರಂಡಿಯಲ್ಲಿ ತುಂಬಿದ ಹೂಳನ್ನು ಎತ್ತಿಸಿ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮದ ಶರಣು ಕುಶನೂರೆ, ಮಹೇಶ ಪಟ್ನೆ, ಈಶ್ವರ ಧಬಾಲೆ, ರಾಜಶೇಖರ ಧಬಾಲೆ, ಮಿಥುನ ಕುಶನೂರೆ, ಮಹಾದೇವ ಧಬಾಲೆ, ನವನಾಥ ಬಿರಾದಾರ ಅವರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.