ADVERTISEMENT

ದೇಶದ್ರೋಹ ಪ್ರಕರಣದ ನಂತರ ನೆಂಟರೆಲ್ಲ ‘ಮಾಯ’: ನೋವು ಅನುಭವಿಸುತ್ತಿರುವ ಮಕ್ಕಳು

ಕುಗ್ಗಿ ಹೋಗಿರುವ ಮುಖ್ಯಶಿಕ್ಷಕಿ; ಭೇಟಿಗೆ ಅವಕಾಶ ನೀಡದ ಜೈಲು ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 9:35 IST
Last Updated 13 ಫೆಬ್ರುವರಿ 2020, 9:35 IST
   

ಬೀದರ್: ಶಾಹೀನ್‌ ಶಾಲೆಯಲ್ಲಿ ಮಗಳು ಪ್ರದರ್ಶಿಸಿದ ನಾಟಕಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣದಡಿಜೈಲು ಸೇರಿರುವ ಪಾಲಕಿ ನಜಮುನ್ನೀಸಾ ಇದೀಗ ಒಂಟಿಯಾಗಿದ್ದಾರೆ.

ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ನಜಮುನ್ನೀಸಾ ಅವರ ಪತಿ ಮೃತಪಟ್ಟಿದ್ದಾರೆ. ಊರಲ್ಲಿ ಒಂದಿಷ್ಟು ಕೃಷಿ ಜಮೀನು ಇದೆ. ಅದನ್ನು ಸಾಗುವಳಿ ಮಾಡಲು ಸಾಧ್ಯವಾಗದ್ದಕ್ಕೆ ಕಳೆದ ಬೇಸಿಗೆಯಲ್ಲಿ ಬೀದರ್‌ಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಬೀದರ್‌ ನಗರದಲ್ಲಿಯೇ ಉಳಿದು ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಜಮುನ್ನೀಸಾ ಅವರ ಉದ್ದೇಶವಾಗಿತ್ತು. ಬಡ ಕುಟಂಬದವಳೆಂದು ಪರಿಗಣಿಸಿ ಶಾಹೀನ್‌ ಶಾಲೆಯವರು ಬಾಲಕಿಗೆ ಉಚಿತ ಪ್ರವೇಶ ನೀಡಿದ್ದಾರೆ.

ADVERTISEMENT

‘ನಜಮುನ್ನೀಸಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾದ ನಂತರ ಯಾರೊಬ್ಬರೂ ಅವರನ್ನು ತಮ್ಮ ಸಂಬಂಧಿ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ತಮ್ಮವಳೆಂದರೆ ಬೇಡದ ವಿವಾದ ತಮ್ಮನ್ನೂ ಸುತ್ತಿಕೊಳ್ಳಲಿದೆ ಎನ್ನುವ ಆತಂಕದಲ್ಲಿದ್ದಾರೆ. ಅದಕ್ಕೆ ಬಂಧನದ ದಿನದಿಂದ ಈವರೆಗೂ ಯಾರೊಬ್ಬ ಸಂಬಂಧಿಯೂ ಭೇಟಿಯಾಗಲು ಜೈಲಿಗೆ ಹೋಗಿಲ್ಲ’ ಎನ್ನುವುದು ಮೂಲಗಳ ಮಾಹಿತಿ.

ಕುಗ್ಗಿ ಹೋಗಿರುವ ಮುಖ್ಯಶಿಕ್ಷಕಿ:ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಅವರು 29 ವರ್ಷಗಳಿಂದ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯ ಜವಾಬ್ದಾರಿ ಫರೀದಾ ಅವರ ಮೇಲಿದೆ. ಅವರಿಗೆ ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತಿ ವೆಲ್ಡಿಂಗ್‌ ಮೊದಲಾದ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ.

ಫರೀದಾ ಬಂಧನದ ನಂತರ ಅವರ ಕುಟುಂಬದ ಮೇಲೆ ಬರಸಿಡಿಲು ಬಡಿದಂತಾಗಿದೆ. ಘಟನೆಯ ನಂತರ ಫರೀದಾ ಬೇಗಂ ಬಹಳ ನೊಂದುಕೊಂಡಿದ್ದು, ಜೈಲಿನಲ್ಲಿ ನಾಲ್ಕು ಹೊತ್ತು ಪ್ರಾರ್ಥನೆ ಮಾಡುತ್ತ ಕುಳಿತುಕೊಳ್ಳುತ್ತಿದ್ದಾರೆ. ಜೈಲಿನಲ್ಲಿರುವ ಇಬ್ಬರನ್ನೂ ರಾಜಕಾರಣಿಗಳು ಭೇಟಿಯಾಗಿದ್ದಾರೆ. ಬುಧವಾರದಿಂದ ರಾಜಕಾರಣಿಗಳ ಭೇಟಿಗೂ ಅವಕಾಶ ನಿರಾಕರಿಸಲಾಗುತ್ತಿದೆ.

ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ನಜಮುನ್ನೀಸಾ ಬಂಧನದ ಅವಧಿಯನ್ನು 2ನೇ ಹೆಚ್ಚುವರಿ ಸಿವಿಲ್‌ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಫೆಬ್ರುವರಿ 24ರವರೆಗೆ ವಿಸ್ತರಿಸಿದೆ. ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ಫೆ 14ಕ್ಕೆ ಮುಂದೂಡಿದೆ. ಪ್ರಕರಣದ ತನಿಖಾ ಹಂತದ ಮಾಹಿತಿಯನ್ನು ಹಂಚಿಕೊಳ್ಳಲು ಪೊಲೀಸರು ನಿರಾಕರಿಸುತ್ತಿದ್ದಾರೆ. ಆದರೆ, ವಿವಾದ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ.

‘ಆರೋಪಿಯ ಬಂಧನದ ನಂತರ ದೋಷಾರೋಪ ಪಟ್ಟಿ ಸಲ್ಲಿಸಲು 60 ದಿನಗಳ ವರೆಗೆ ಅವಕಾಶ ಇದೆ. ಶಾಲೆಯ ಆಡಳಿತ ಮಂಡಳಿಯ ಮೇಲೆ ಗಂಭೀರ ಆರೋಪ ಇರುವ ಕಾರಣ ಪ್ರತಿಯೊಂದು ಅಂಶವನ್ನೂ ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಶಾಹೀನ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ ಪತ್ರಕರ್ತ ಯುಸೂಫ್‌ ರಹೀಂ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ಫೆ.17ಕ್ಕೆ ಮುಂದೂಡಲಾಗಿದೆ.

ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ದಿನದಿಂದ ಯುಸೂಫ್‌ ರಹೀಂ ತಲೆಮರೆಸಿಕೊಂಡಿದ್ದಾರೆ.

ಮುಖ್ಯಾಂಶಗಳು

ತನಿಖೆ ಮುಂದುವರಿಸಿರುವ ಪೊಲೀಸ್‌ ಅಧಿಕಾರಿಗಳು

ಜಾಮೀನು ಪಡೆಯಲು ಆರೋಪಿಗಳ ನಿರಂತರ ಪ್ರಯತ್ನ

ತಾಯಂದಿರ ಬಂಧನ; ನೋವು ಅನುಭವಿಸುತ್ತಿರುವ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.