ADVERTISEMENT

ಶಾಹೀನ್ ಶಾಲೆ: ಪ್ರಕರಣ ವಾಪಸ್‌ಗೆ ಬೃಂದಾ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 14:43 IST
Last Updated 13 ಫೆಬ್ರುವರಿ 2020, 14:43 IST
ಬೃಂದಾ ಕಾರಟ್‌
ಬೃಂದಾ ಕಾರಟ್‌   

ಕಲಬುರ್ಗಿ: ‘ಸಿಎಎ, ಎನ್ಆರ್‌ಸಿ ಟೀಕಿಸುವ ಕಥಾನಕವುಳ್ಳ ನಾಟಕ ಪ್ರದರ್ಶಿಸಿದ್ದಾರೆ ಎಂಬ ಕಾರಣಕ್ಕೆ ಬೀದರ್‌ನ ಶಾಹೀನ್‌ ಶಾಲೆಯ ಮುಖ್ಯಶಿಕ್ಷಕಿ, ಪೋಷಕಿ ಹಾಗೂ ಆಡಳಿತ ಮಂಡಳಿವಿರುದ್ಧ ದಾಖಲಿಸಿರುವ ಪ್ರಕರಣವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು’ ಎಂದು ಸಿಪಿಐ (ಎಂ) ಪಾಲಿಟ್‌ ಬ್ಯೂರೊಸದಸ್ಯೆ ಬೃಂದಾ ಕಾರಟ್‌ ಒತ್ತಾಯಿಸಿದರು.

ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಉದ್ಯೋಗ ಖಾತ್ರಿ ಹಣ ಬಿಡುಗಡೆ ಮಾಡಬೇಕು, ಸಿಎಎ, ಎನ್‌ಆರ್‌ಸಿಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆಯು ನಗರದಲ್ಲಿ ಗುರುವಾರಏರ್ಪಡಿಸಿದ್ದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾಟಕ ಅಡಿದ್ದನ್ನೇ ನೆಪವಾಗಿಟ್ಟುಕೊಂಡು ಪ್ರಕರಣ ದಾಖಲಿಸಿ ಮಗು ಮತ್ತು ತಾಯಿಯನ್ನು ಬೇರ್ಪಡಿಸಿದ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಯಾವ ನೈತಿಕತೆ ಇಟ್ಟುಕೊಂಡು ಯಡಿಯೂರಪ್ಪ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ? ಕೂಡಲೇ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು. ಪ್ರಕರಣವನ್ನು ಹಿಂದಕ್ಕೆ ಪಡೆದು ಶಾಲಾ ಬಾಲಕಿಯ ತಾಯಿ ಹಾಗೂ ಶಿಕ್ಷಕಿಯನ್ನು ಬಂಧನದಿಂದ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

‘ಕಾರ್ಪೊರೇಟ್‌ ಉದ್ಯಮಿಗಳ ₹2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ನರೇಂದ್ರ ಮೋದಿ ಸರ್ಕಾರ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ನಿಗದಿ ಮಾಡಬೇಕಿದ್ದ ಹಣದಲ್ಲಿ ₹ 9,500 ಕೋಟಿಯನ್ನು ಕಡಿತಗೊಳಿಸಿದೆ. ಮಾತೆತ್ತಿದರೆ ಭಾರತ್ ಮಾತಾ ಕಿ ಜೈ ಎಂದು ಹುಸಿ ದೇಶಭಕ್ತಿ ತೋರಿಸುವ ಮೋದಿ ಅವರು ಭಾರತ ಮಾತೆಯ ಹೆಣ್ಣುಮಕ್ಕಳ ದುಡಿಮೆಯನ್ನೂ ಕಸಿದುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.