ADVERTISEMENT

ಬಸವಕಲ್ಯಾಣ: ದಾಸೋಹಗೈದು ದಾನಮ್ಮಳಾದ ಶರಣೆಯ ಗವಿ ಅಜ್ಞಾತ

ಏಪ್ರಿಲ್ 5ಕ್ಕೆ ದಾನಮ್ಮ ಉತ್ಸವ, 14 ನೇ ಜ್ಯೋತಿ ಯಾತ್ರೆಯ ಸಮಾರೋಪ

ಮಾಣಿಕ ಆರ್ ಭುರೆ
Published 25 ಮಾರ್ಚ್ 2025, 5:16 IST
Last Updated 25 ಮಾರ್ಚ್ 2025, 5:16 IST
ಬಸವಪ್ರಭು ಸ್ವಾಮೀಜಿ
ಬಸವಪ್ರಭು ಸ್ವಾಮೀಜಿ   

ಬಸವಕಲ್ಯಾಣ: ದಾಸೋಹ, ದಾನಗೈದಿದ್ದರಿಂದ ಸ್ವತಃ ಬಸವಣ್ಣನವರೇ ಭೇಟಿನೀಡಿ ದಾನಮ್ಮ ಎಂದು ನಾಮಕರಣ ಮಾಡಿದ್ದ ಶರಣೆಯ ಗವಿ ತಾಲ್ಲೂಕಿನ ಗುಣತೀರ್ಥದಲ್ಲಿದ್ದು ಅಜ್ಞಾತವಾಗುಳಿದಿದೆ. ಕಲ್ಯಾಣ ಮಹಾಮನೆ ಮಹಾಮಠದಿಂದ ಹಮ್ಮಿಕೊಳ್ಳುವ ದಾನಮ್ಮ ಉತ್ಸವ ಏಪ್ರಿಲ್ 5ರಂದು ಇದೆ. ಅಂದು ಮಹಾರಾಷ್ಟ್ರ, ಕರ್ನಾಟಕದಲ್ಲಿ ಸಂಚರಿಸಿದ 14ನೇ ದಾನಮ್ಮ ಜ್ಯೋತಿ ಯಾತ್ರೆಯ ಸಮಾರೋಪವೂ ನಡೆಯಲಿದೆ.

ಗುಡ್ಡಾಪುರ ದಾನಮ್ಮನವರ ಐಕ್ಯಕ್ಷೇತ್ರ. ಕಲ್ಯಾಣ ಅವರ ಕಾಯಕಭೂಮಿ. ಅವರ ತಪೋತಾಣ ಎಂದೇ ಗುರುತಿಸಿರುವ ಗುಣತೀರ್ಥವಾಡಿಯ ಕಾಡಿನಲ್ಲಿ ಗವಿಯಿದೆ. ನಗರದಲ್ಲಿನ ಎಲ್ಲ ಶರಣರ ಗವಿಗಳಕ್ಕಿಂತಲೂ ಇದು ಅತಿ ದೊಡ್ಡದಾಗಿದೆ. ಬಸವಕಲ್ಯಾಣದಿಂದ ಗುಣತೀರ್ಥವಾಡಿ ಮಾರ್ಗವಾಗಿ ಗವಿಗೆ ಹೋಗಬಹುದು. ಕಲ್ಯಾಣ ಮಹಾಮನೆಯ ಹಿಂದುಗಡೆ ಸ್ವಲ್ಪ ಅಂತರದಲ್ಲಿ ಈ ಜಾಗವಿದೆ. ಆದರೆ, ನಾಮಫಲಕ ಹಾಗೂ ಇತರೆ ವ್ಯವಸ್ಥೆ ಇಲ್ಲದ್ದರಿಂದ ಈ ಕಡೆ ಯಾರೂ ಬರದಂತಾಗಿದೆ.

ಹಸಿರಿನಿಂದ ಕಂಗೊಳಿಸುವ ಕಾಡಿನ ಗುಡ್ಡದ ತಪ್ಪಲಿನಲ್ಲಿ ಪೂರ್ವಾಭಿಮುಖವಾಗಿ ಗವಿಯಿದೆ. ದಾಖಲೆಗಳು ಮತ್ತು ವಚನಗಳ ಆಧಾರದಲ್ಲಿ ಬಸವಪ್ರಭು ಸ್ವಾಮೀಜಿಯವರು ಗವಿ ಪತ್ತೆ ಹಚ್ಚಿದ್ದಾರೆ. ಇತಿಹಾಸಕಾರರು, ಸಾಹಿತಿ, ಸಂಶೋಧಕರನ್ನು ಸ್ಥಳಕ್ಕೆ ಕರೆದೊಯ್ದು ಈ ಜಾಗ ದಾನಮ್ಮನವರ ತಪಸ್ಸುಗೈದ ಪುಣ್ಯಭೂಮಿಯೇ ಆಗಿರುವುದನ್ನು ಖಚಿತಪಡಿಸಿದ್ದಾರೆ. ನಂತರದಲ್ಲಿ ಬಸವಣ್ಣನವರು ಇದೇ ಸ್ಥಳದಲ್ಲಿ ಅವರನ್ನು ಭೇಟಿ ನೀಡಿದ್ದ ವಿಷಯವೂ ಬೆಳಕಿಗೆ ಬಂದಿದೆ.

ADVERTISEMENT

ಕಾಡಿನಲ್ಲಿನ ಗಿಡಿಮರಗಳ ತೊಗಟೆ, ಬೇರು, ಎಲೆಗಳನ್ನು ಉಪಯೋಗಿಸಿ ಆಯುರ್ವೇದ ಚಿಕಿತ್ಸೆ ಸಹ ದಾನಮ್ಮನವರು ನೀಡುತ್ತಿದ್ದರು. ಇಲ್ಲಿಗೆ ಸಮೀಪದ ನಾರಾಯಣಪುರ ಗ್ರಾಮದ ಪೂರ್ವದಿಕ್ಕಿನ ಹೊಲವೊಂದರಲ್ಲಿಯೂ ದಾನಮ್ಮನವರ ಸ್ಮಾರಕ ಎನ್ನಲಾಗುವ ಸ್ಥಾವರಲಿಂಗ ಇಟ್ಟಿರುವ ಕಟ್ಟೆ ಇದೆ. ಸುತ್ತಲಿನಲ್ಲಿ ಕಟ್ಟಡದ ಅವಶೇಷಗಳು ಸಹ ಇವೆ. ಈ ಬಗ್ಗೆಯೂ ಸಂಶೋಧನೆ ಕೈಗೊಳ್ಳುವ ಅಗತ್ಯವಿದೆ.

ಗುಣತೀರ್ಥವಾಡಿ ಗವಿ ಸ್ಥಳದಲ್ಲಿ ಆಯುರ್ವೇದ ಉದ್ಯಾನ ಸ್ಥಾಪಿಸಬೇಕು. ದಾನಮ್ಮನವರ ಮೂರ್ತಿ ಪ್ರತಿಷ್ಠಾಪಿಸಬೇಕು. ಗವಿಯೊಳಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಬೇಕು. ಅಲ್ಲಿಗೆ ಹೋಗುವುದಕ್ಕೆ ಉತ್ತಮ ರಸ್ತೆ ವ್ಯವಸ್ಥೆಗೈಯಬೇಕು. ಅವರ ಪರಿಚಯದ ಫಲಕ ಮತ್ತು ಪ್ರಮುಖ ಸ್ಥಳಗಳಲ್ಲಿ ಗವಿ ಮಾರ್ಗ ಸೂಚಿಸುವ ಫಲಕಗಳನ್ನು ಅಳವಡಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ಬಸವಕಲ್ಯಾಣಕ್ಕೆ ಸಮೀಪದ ಗುಣತೀರ್ಥವಾಡಿಯಲ್ಲಿನ ಶರಣೆ ದಾನಮ್ಮನವರ ಗವಿಗೆ ಹೋಗಲು ದಾರಿ ಇಲ್ಲ
ಬಸವಕಲ್ಯಾಣಕ್ಕೆ ಸಮೀಪದ ಗುಣತೀರ್ಥವಾಡಿಯ ಶರಣೆ ದಾನಮ್ಮನವರ ಗವಿ
ದಾನಮ್ಮನವರ ತಪೋಕ್ಷೇತ್ರದ ವಿಕಾಸಕ್ಕೆ ಸಂಕಲ್ಪ ತೊಟ್ಟಿದ್ದು ಅದಕ್ಕಾಗಿ 14 ವರ್ಷಗಳಿಂದ ಜ್ಯೋತಿ ಯಾತ್ರೆ ಕೈಗೊಂಡಿದ್ದೇನೆ. ಸರ್ಕಾರಕ್ಕೂ ಸಹಾಯ ಕೇಳುತ್ತೇನೆ
ಬಸವಪ್ರಭು ಸ್ವಾಮೀಜಿ, ಕಲ್ಯಾಣ ಮಹಾಮನೆ ಗುಣತೀರ್ಥವಾಡಿ
ದಾನಮ್ಮನವರ ಗುಹೆಗೆ ಮಠಾಧೀಶರು ಒಳಗೊಂಡು ಅನೇಕರು ಭೇಟಿ ನೀಡಿದ್ದಾರೆ. ಅದೊಂದು ಪ್ರೇರಣಾ ಸ್ಥಾನ ಆಗುವುದಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿದೆ
ಸುಮಿತ್ರಾ ದಾವಣಗಾವೆ, ಅಧ್ಯಕ್ಷೆ ದಾನಮ್ಮನ ಬಳಗ ಬಸವಕಲ್ಯಾಣ
ಗುಣತೀರ್ಥವಾಡಿ ಮತ್ತು ನಾರಾಯಣಪುರದಲ್ಲಿನ ಶರಣೆ ದಾನಮ್ಮನವರ ಗವಿ ಮತ್ತಿತರೆ ಕುರುಹುಗಳನ್ನು ಸಂರಕ್ಷಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿ
ರೂಪಾ ಶ್ರೀಕಾಂತ ಬಡದಾಳೆ, ಸಾಮಾಜಿಕ ಕಾರ್ಯಕರ್ತೆ
ಬಸವಕಲ್ಯಾಣದ ಸುತ್ತಲಿನಲ್ಲಿ ಅನೇಕ ಶರಣರ ಸ್ಮಾರಕಗಳು ಅಜ್ಞಾತವಾಗುಳಿದಿವೆ. ಸಂಶೋಧನೆ ಮತ್ತು ಉತ್ಖನನದ ಮೂಲಕ ಅವನ್ನು ಬೆಳಕಿಗೆ ತರುವ ಅಗತ್ಯವಿದೆ
ಸಂಗಮೇಶ ತೊಗರಖೇಡೆ, ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.