
ಬೀದರ್: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಸೋಮವಾರ ಶಾಲೆ, ಹಾಸ್ಟೆಲ್ ಹಾಗೂ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ನೌಬಾದ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ ಭೇಟಿ ನೀಡಿದ ಅವರು, ಶಾಲಾ ಮಕ್ಕಳ ಕಲಿಕೆ ಗುಣಮಟ್ಟ ಮತ್ತು ಬಿಸಿಯೂಟ ಪರಿಶೀಲಿಸಿದರು. ಈ ವೇಳೆ ತೊಗರಿ ಬೇಳೆ ಕಳಪೆ ಇರುವುದು ಕಂಡು ಬಂದಿತು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಮಾಡಬಾರದು. ಬಿಸಿಯೂಟಕ್ಕೆ ಸರಬರಾಜು ಮಾಡಿದ ತೊಗರಿ ಬೇಳೆ ಕಳಪೆ ಮಟ್ಟದಿಂದ ಕೂಡಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಸಂಖ್ಯೆಯಲ್ಲೂ ಭಾರಿ ವ್ಯತ್ಯಾಸ ಕಂಡಿ ಬಂದಿದೆ. ಗೈರು ಹಾಜರಾತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಪ್ರತಾಪ್ ನಗರದಲ್ಲಿರುವ ಮೆಟ್ರಿಕ್ ನಂತರ ಮತ್ತು ಮೆಟ್ರಿಕ್ ಪೂರ್ವ ವಸತಿ ಶಾಲೆಗೆ ತೆರಳಿದರು. ಒಂದು ಕೋಣೆಯಲ್ಲಿ 13 ಮಕ್ಕಳು ವಾಸ್ತವ್ಯ ಮಾಡುತ್ತಿದ್ದು, ಕೂಡಲೇ ವಾರ್ಡನ್‌ಗೆ ಕಾರಣ ಕೇಳಿ ನೋಟಿಸ್ ನೀಡಬೇಕೆಂದು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆನಂತರ ನಗರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಕೋಸಂಬೆ, ಮಹಿಳೆ ಮತ್ತು ಪುರುಷ ಕೈದಿಗಳನ್ನು ಭೇಟಿ ಮಾಡಿ, ಮಾಹಿತಿ ಪಡೆದರು. ತಾಲ್ಲೂಕಿನ ಹಮಿಲಾಪೂರ ಹತ್ತಿರ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ವೀಕ್ಷಣಾಲಯಕ್ಕೆ ಭೇಟಿ ನೀಡಿದರು.
ನಂತರ ಮೀರಾಗಂಜ್‌ನಲ್ಲಿರುವ ಮೊರಾರ್ಜಿ ಪಿಯು ವಸತಿ ಕಾಲೇಜಿಗೆ ಭೇಟಿ ನೀಡಿದರು. ಹೊರಗಿನವರು ಪ್ರವೇಶ ಪಡೆಯುತ್ತಿರುವ ಮಾಹಿತಿ ಇದ್ದು, ಈ ಬಗ್ಗೆ ತನಿಖೆ ನಡೆಸಿ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು.
ತಾಲ್ಲೂಕಿನ ಕಪಲಾಪುರ ಹತ್ತಿರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತೆರಳಿದರು. ಮಕ್ಕಳಿಗೆ ನೀಡುವ ಉಪಾಹಾರದ ಉಪ್ಪಿಟ್ಟಿನಲ್ಲಿ ಹುಳು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯೋಗೇಶ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸುನೀತಾ ಪಟವಾಡಿ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಬಳಿರಾಮ, ರೂಪಾ, ದಶರಥ, ಪ್ರಶಾಂತ, ಗೌರಿಶಂಕರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.