
ಬೀದರ್: 24ನೇ ವಚನ ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಬುಧವಾರ ಮಹಾ ಕಾರು ರ್‍ಯಾಲಿ ನಡೆಯಿತು.
ನಗರದ ಮನ್ನಳ್ಳಿ ರಸ್ತೆಯ ಗುಂಪಾ ಸಿದ್ಧಾರೂಢ ವೃತ್ತದ ಬಳಿ ಬಸವೇಶ್ವರರ ಭಾವಚಿತ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈನಿ ಪ್ರದೀಪ್ ಗುಂಟಿ ಅವರು ಪೂಜೆ ನೆರವೇರಿಸಿ, ಕಾರುಗಳ ರ್‍ಯಾಲಿಗೆ ಚಾಲನೆ ನೀಡಿದರು.
ಆನಂತರ ಸ್ವತಃ ಅವರು ಕಾರಿನೊಳಗೆ ಷಟಸ್ಥಲ ಧ್ವಜ ಹಿಡಿದುಕೊಂಡು ರ್‍ಯಾಲಿಯಲ್ಲಿ ಪಾಲ್ಗೊಂಡರು. ಗುಂಪಾದಿಂದ ಆರಂಭಗೊಂಡ ಕಾರುಗಳ ರ್‍ಯಾಲಿಯು ಕುಂಬಾರವಾಡ ಕ್ರಾಸ್, ಮೈಲೂರ್ ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಮಡಿವಾಳೇಶ್ವರ ವೃತ್ತ, ಶಿವನಗರ, ಪಾಪನಾಶ ಮಹಾದ್ವಾರದ ಮೂಲಕ ಬಸವಗಿರಿ ತನಕ ನಡೆಯಿತು.
ರ್‍ಯಾಲಿಯುದ್ದಕ್ಕೂ ಧ್ವಜ ಬೀಸುತ್ತ, 24ನೇ ವಚನ ವಿಜಯೋತ್ಸವ, ಬಸವಾದಿ ಶರಣರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕಿದರು.
‘ಇದಕ್ಕೂ ಮುನ್ನ ಮಾತನಾಡಿದ ಶೈನಿ ಪ್ರದೀಪ್ ಗುಂಟಿ, ವಚನ ವಿಜಯೋತ್ಸವ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದುದು. ಹೋದ ವರ್ಷವೂ ನಾನು ಪಾಲ್ಗೊಂಡಿದ್ದೆ. ಸಾಮಾಜಿಕ ನ್ಯಾಯ, ಸಮಾನತೆಗೆ ಶ್ರಮಿಸಿ, ವಚನ ಸಾಹಿತ್ಯದ ಸಂರಕ್ಷಣೆಗೆ ಜೀವತೆತ್ತ ಬಸವಾದಿ ಶರಣರನ್ನು ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ. ಆ ನಿಟ್ಟಿನಲ್ಲಿ ವಚನ ವಿಜಯೋತ್ಸವ ಏರ್ಪಡಿಸಿರುವುದು ಉತ್ತಮ ಕೆಲಸ’ ಎಂದು ಹೇಳಿದರು.
ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಮಾತನಾಡಿ, ಕಳೆದ 24 ವರ್ಷಗಳಿಂದ ವಚನ ವಿಜಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಯೋಜಿಸುತ್ತ ಬರಲಾಗಿದೆ. ಈ ವರ್ಷವೂ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜ. 30ರಿಂದ ಫೆ. 1ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು ಎಂದರು.
ನೀತಾ ಎಸ್. ಬೆಲ್ದಾಳೆ, ಮಹಾನಗರ ಪಾಲಿಕೆ ಸದಸ್ಯೆ ಸಂತೋಷಿ ಹೊತಪೇಟ, ಸವಿತಾ ಶಶಿಧರ ಹೊಸಳ್ಳಿ, ಭುವನೇಶ್ವರಿ ರಾಜಾರಾಮ ಚಿಟ್ಟಾ, ವಿಜಯಲಕ್ಷ್ಮಿ ಪಾಟೀಲ, ಜಯದೇವಿ ಯದಲಾಪೂರೆ, ರೇಣುಕಾ ಮಂಗಲಗಿ, ಮಲ್ಲಮ್ಮ ರಾಚಪ್ಪ ಪಾಟೀಲ, ಪ್ರತಿಭಾ ವೀರಪ್ಪ ಜೀರಗೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.