ADVERTISEMENT

ಬೀದರ್‌: ನಿತ್ಯ 3 ಸಾವಿರ ಕೋವಿಡ್‌ ಪರೀಕ್ಷೆಗೆ ಜಿಲ್ಲಾಡಳಿತ ನಿರ್ಧಾರ

ಲಾಕ್‌ಡೌನ್‌: ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಜನರ ಹಿಂದೇಟು

ಚಂದ್ರಕಾಂತ ಮಸಾನಿ
Published 21 ಮೇ 2021, 15:04 IST
Last Updated 21 ಮೇ 2021, 15:04 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ಕೋವಿಡ್‌ ವಾರ್‌ ರೂಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ಕೋವಿಡ್‌ ವಾರ್‌ ರೂಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ   

ಬೀದರ್‌: ಪೊಲೀಸರ ಭಯದಿಂದಾಗಿ ಗ್ರಾಮೀಣ ಪ್ರದೇಶದ ಜನ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕಾಗಿ ಬ್ರಿಮ್ಸ್‌ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯಲ್ಲಿ ಇಳಿಮುಖವಾಗಿ ಕೋವಿಡ್‌ ಸೋಂಕಿತರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಜಿಲ್ಲಾಡಳಿತ ಗ್ರಾಮೀಣ ಪ್ರದೇಶದಲ್ಲೇ ಕೋವಿಡ್‌ ಪರೀಕ್ಷೆ ನಡೆಸಲು ಮುಂದಾಗಿದೆ.

ಮೊದಲು ನಗರ ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿತರು ಪತ್ತೆಯಾಗುತ್ತಿದ್ದರು. ಈಗ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿತರು ಪತ್ತೆಯಾಗುತ್ತಿರುವ ಕಾರಣ ಕೋವಿಡ್‌ ನಿಯಂತ್ರಿಸಲು ಜಿಲ್ಲಾಡಳಿತ ಇನ್ನಷ್ಟು ಕ್ರಮ ಕೈಗೊಂಡಿದೆ.

ಆರೋಗ್ಯ ಸಹಾಯಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ತಂಡಗಳನ್ನು ರಚಿಸಲಾಗಿದೆ. ಆಯಾ ತಂಡಗಳಿಗೆ ಕಿಟ್‌ ಕೊಟ್ಟು ಪ್ರತಿ ಹಳ್ಳಿಗೆ ಕಳಿಸಲಾಗುತ್ತಿದೆ. ಈ ತಂಡಗಳು ಗ್ರಾಮದ ಪ್ರಮುಖರನ್ನು ಸಂಪರ್ಕಿಸಿ ಗ್ರಾಮದ ಕೇಂದ್ರ ಸ್ಥಾನದಲ್ಲಿ ಸೋಂಕು ಶಂಕಿತರ ಗಂಟಲು ದ್ರವ ಮಾದರಿ ಪಡೆದು ಬ್ರಿಮ್ಸ್‌ಗೆ ಕಳಿಸುತ್ತಿವೆ.

ADVERTISEMENT

ಕೋವಿಡ್‌ ಲಕ್ಷಣವಿರುವ ಹಾಗೂ ಕೋವಿಡ್‌ ಹೊಂದಿರುವ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಮಾಹಿತಿ ಪಡೆದು ನಿತ್ಯ ಮೂರು ಸಾವಿರ ಕೋವಿಡ್‌ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆರ್‌ಟಿಪಿಸಿಆರ್‌ ಮಾದರಿ ದ್ರವ ಪರೀಕ್ಷೆಯನ್ನು ಬ್ರಿಮ್ಸ್‌ ವೈರೋಲಾಜಿ ಲ್ಯಾಬ್‌ಗೆ ಕಳಿಸಬೇಕು. ಫಲಿತಾಂಶವನ್ನು 24 ಗಂಟೆಯೊಳಗೆ ಐಸಿಎಂಆರ್ ಪೋರ್ಟಲ್‌ಗೆ ಅಪ್‌ಡೇಟ್‌ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಹೋಮ್‌ ಐಸೋಲೇಷನ್‌ ತಂಡದಲ್ಲಿರುವ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಹೋಮ್‌ ಐಸೋಲೇಷನ್‌ನಲ್ಲಿ ಇರುವ ರೋಗಿಗಳ ಮನೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪ್ರತ್ಯೇಕವಾಗಿ ಇರಲು ನಿರಾಕರಿಸಿದ ಅಥವಾ ಅಸಹಕಾರ ತೋರಿಸಿದ ರೋಗಿಗಳ ಮನವೊಲಿಸಿ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸಿದ್ದಾರೆ.

ವಾರ್‌ ರೂಮ್‌ ಸಹಾಯವಾಣಿ ಸಂಖ್ಯೆಗಳ ವಿಸ್ತರಣೆ

ಬೀದರ್‌: ಜಿಲ್ಲಾ ಕೋವಿಡ್‌ ವಾರ್‌ ರೂಮ್‌ಗೆ ಮತ್ತೆ ಎರಡು ದೂರವಾಣಿ ಸಂಖ್ಯೆಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ. ಈಗ ಒಟ್ಟು ಆರು ದೂರವಾಣಿ ಸಂಖ್ಯೆಗಳು ಕಾರ್ಯನಿರ್ವಹಿಸುತ್ತಿವೆ.

ವಾರ್‌ ರೂಮ್‌ನಲ್ಲಿ 08482–224315, 224316, 224317, 224318, 224319, 224320 ಸಂಖ್ಯೆಯ ದೂರವಾಣಿಗಳು ಚಾಲ್ತಿಯಲ್ಲಿವೆ. ವಾರ್‌ ರೂಮ್‌ಗೆ ನಿತ್ಯ 25 ರಿಂದ 30 ಕರೆಗಳು ಬರುತ್ತಿವೆ. ಏಪ್ರಿಲ್‌ 20ರಿಂದ ಈವರೆಗೆ 350 ಕರೆಗಳು ಬಂದಿವೆ. ಆರು ಜನರ ತಂಡ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜನ ಆರೋಗ್ಯ ಸೇವೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಳುತ್ತಿದ್ದಾರೆ. ಜನರ ಬೇಕು, ಬೇಡಿಕೆಗಳನ್ನು ಅರಿತು ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ಒದಗಿಸುವ ಹಾಗೂ ಜನರಿಗೂ ಸಕಾಲದಲ್ಲಿ ಅಗತ್ಯ ಮಾಹಿತಿ ಪೂರೈಸುವ ಕಾರ್ಯ ಮಾಡಲಾಗುತ್ತಿದೆ ಎಂದು ಜಿಲ್ಲಾ ಕೋವಿಡ್ ವಾರ್‌ ರೂಮ್‌ ನೋಡೆಲ್‌ ಅಧಿಕಾರಿ ಡಾ.ಗೌತಮ ಅರಳಿ ತಿಳಿಸಿದ್ದಾರೆ.

www.bidar.nic.in ನಲ್ಲಿ ಕೆಲ ಮಾಹಿತಿಗಳನ್ನು ನಿತ್ಯ ಅಪ್‌ಡೇಟ್‌ ಮಾಡಲಾಗುತ್ತಿದೆ. ಸಾರ್ವಜನಿಕರು bidarcovidwarroom @gmail.comಗೆ ಮೇಲ್‌ ಮಾಡಿ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.