ಬೀದರ್: ಪ್ರತಿ ವರ್ಷ ಗಣೇಶ ಉತ್ಸವದಲ್ಲಿ ವಿನೂತನ ಪ್ರಯೋಗದ ಮೂಲಕ ಗಮನ ಸೆಳೆಯುತ್ತಿರುವ ನಗರದ ದೇವಿ ಕಾಲೊನಿಯ ಗಣೇಶ ಮಂಡಳ ಈ ಸಲವೂ ಅಂತಹುದೇ ಕೆಲಸ ಮಾಡಿದೆ.
ಶೌರ್ಯ ಮತ್ತು ಸಾಹಸಕ್ಕೆ ಹೆಸರಾಗಿದ್ದ ಛತ್ರಪತಿ ಸಂಭಾಜಿ ಮಹಾರಾಜರನ್ನು ಹೋಲುವ ರೀತಿಯಲ್ಲಿ ಗಣಪನನ್ನು ಈ ಸಲ ಪ್ರತಿಷ್ಠಾಪಿಸಿದೆ. ಥೇಟ್ ರಾಜನ ಭಂಗಿಯಲ್ಲಿ ಗಣೇಶ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ. ಛತ್ರಪತಿ ಶಿವಾಜಿ ಮಹಾರಾಜರ ಮಗ ಸಂಭಾಜಿ ಧರಿಸುತ್ತಿದ್ದ ದಿರಿಸು, ಕಿರೀಟ ಧರಿಸಿರುವ ಗಣೇಶನ ನೋಡಬಹುದು. ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಸುಮಾರು 16ರಿಂದ 17 ಅಡಿ ಎತ್ತರದ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ.
ಇದು ಇಷ್ಟಕ್ಕೆ ಸೀಮಿತವಾಗಿಲ್ಲ, ವಿಘ್ನ ನಿವಾರಕನನ್ನು ಪ್ರತಿಷ್ಠಾಪಿಸಿರುವ ಪೆಂಡಾಲ್‌ಗೆ ಹೊಂದಿಕೊಂಡಿರುವ ದೇಗುಲದ ಆವರಣದಲ್ಲಿ ಶಿವಾಜಿ ಮಹಾರಾಜರ ಕಾಲದ ವಿವಿಧ ರಾಜಮನೆತನಗಳು, ಬ್ರಿಟಿಷರು ಯುದ್ಧದ ಸಂದರ್ಭದಲ್ಲಿ ಹಾಗೂ ಆತ್ಮರಕ್ಷಣೆಗೆ ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಇದು ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದು, ಮಕ್ಕಳಿಂದ ಹಿರಿಯರ ವರೆಗೆ ಎಲ್ಲರೂ ಶಸ್ತ್ರಾಸ್ತ್ರಗಳನ್ನು ಕಣ್ತುಂಬಿಕೊಂಡು ಹುಬ್ಬೇರಿಸುತ್ತಿದ್ದಾರೆ.
ತೋಪ್, ಧನುಷ್ ಬಾಣ, ಬಾಜು ಬಂದ್, ಕತ್ತಿ, ಭರ್ಚಿ, ಮರಾಠ ಕಟಾರ್, ಬುಂದೇಲ್‌ಖಂಡದ ಕಟಾರ್, ರಜಪೂತ್ ಕಟಾರ್, ಮೊಘಲ್ ಕಟಾರ್, ಪಟ್ಟಾಪಾನ್ ತಲ್ವಾರ್, ಬಂದೂಕು, ಕೋಟೆಯ ದಾಂಡಪಟ್ಟಾ, ತೇಜಾ ತಲ್ವಾರ್, ನಾಯರ್ ತಲ್ವಾರ್, ಖಂಡಾ ತಲ್ವಾರ್ ಪ್ರಮುಖ ಆಕರ್ಷಣೆ.
ನಾಂದೇಡ್‌ನ ಮಹಾಬಲಿ ಶಹಾಜಿರಾಜೇ ಭೋಸ್ಲೆ ಟ್ರಸ್ಟ್‌ನಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ. ಮುಂಬೈ, ಪುಣೆ, ಸಂಭಾಜಿನಗರ, ನಾಗಪುರ ಸೇರಿದಂತೆ ಹಲವೆಡೆಗಳಲ್ಲಿ ಈ ರೀತಿಯ ಪ್ರದರ್ಶನ ಆಯೋಜಿಸಿದ್ದಾರೆ.
‘ನಮ್ಮಲ್ಲಿ ಸಂಭಾಜಿ ಮಹಾರಾಜರನ್ನು ಹೋಲುವ ರೀತಿಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅದರೊಂದಿಗೆ ಶಿವಾಜಿ ಮಹಾರಾಜರು, ಸಂಭಾಜಿ ಮಹಾರಾಜರ ಕಾಲ ಹಾಗೂ ಇತರೆ ರಾಜಮನೆತನದವರು, ಬ್ರಿಟಿಷರು ಬಳಸುತ್ತಿದ್ದ ಶಸ್ತ್ರಾಸ್ತ್ರ ಪ್ರದರ್ಶನ ಏರ್ಪಡಿಸಬೇಕೆಂದು ದೇವಿ ಕಾಲೊನಿ ಗಣೇಶ ಮಂಡಳದವರು ಕೋರಿದ್ದರು. ಅದರಂತೆ ಇಲ್ಲಿ ಪ್ರದರ್ಶನ ಆಯೋಜಿಸಲಾಗಿದ್ದು, ಸಾರ್ವಜನಿಕರು ನೋಡಿ ಖುಷಿಪಡುತ್ತಿದ್ದಾರೆ. ನಮ್ಮ ಇತಿಹಾಸದ ಪರಿಚಯ ಮಾಡಿಕೊಡುವುದು ಇದರ ಉದ್ದೇಶ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಲ್ಲಿ ನಮ್ಮ ಟ್ರಸ್ಟ್ ಅಧಿಕೃತವಾಗಿ ನೋಂದಣಿಯಾಗಿದೆ’ ಎಂದು ಮಹಾಬಲಿ ಶಹಾಜಿರಾಜೇ ಭೋಸ್ಲೆ ಟ್ರಸ್ಟ್ ಅಧ್ಯಕ್ಷ ಬಾಜಿ ಪ್ರತಾಪ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಈ ರೀತಿಯ ಶಸ್ತ್ರಾಸ್ತ್ರಗಳನ್ನು ಕೇವಲ ಸಿನಿಮಾಗಳಲ್ಲಿ ನೋಡುತ್ತಿದ್ದೆವು. ಈಗ ಕಣ್ಣೆದುರೇ ನೋಡುತ್ತಿದ್ದೇವೆ. ಬಗೆಬಗೆಯ ಶಸ್ತ್ರಾಸ್ತ್ರಗಳನ್ನು ನೋಡಿ ಖುಷಿಯಾಗುತ್ತಿದೆ. ಸಂಭಾಜಿ ಗಣಪ ಕೂಡ ಅಷ್ಟೇ ಸುಂದರವಾಗಿ ಪ್ರತಿಷ್ಠಾಪಿಸಿದ್ದಾರೆ. ಗಣೇಶ ಉತ್ಸವದೊಂದಿಗೆ ಪ್ರದರ್ಶನ ಏರ್ಪಡಿಸಿರುವುದು ಉತ್ತಮ ಕೆಲಸ’ ಎಂದು ಪ್ರದರ್ಶನ ವೀಕ್ಷಿಸಿದ ಯುವಕರಾದ ಯಲ್ಲೇಶ್, ವಿನಾಯಕ ಹೇಳಿದ್ದಾರೆ.
ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದ ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳು
ಅನೇಕರಿಗೆ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಟ್ಟು ಅಪರೂಪದ ಹಳೆಯ ಶಸ್ತ್ರಾಸ್ತ್ರಗಳನ್ನು ನೋಡಲು ಆಗುವುದಿಲ್ಲ. ಅಂತಹವರ ಅನುಕೂಲಕ್ಕಾಗಿ ದೇಶದ ಬೇರೆ ಬೇರೆ ಕಡೆಗಳಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಆಯೋಜಿಸಲಾಗುತ್ತದೆ.ಬಾಜಿ ಪ್ರತಾಪ್ ಪಾಟೀಲ ಅಧ್ಯಕ್ಷ ಮಹಾಬಲಿ ಶಹಾಜಿರಾಜೇ ಭೋಸ್ಲೆ ಟ್ರಸ್ಟ್ ನಾಂದೇಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.