
ಬೀದರ್: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಅವರು ಶಿವಾಜಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಬಳಿಕ ಶಿವಾಜಿ ವೃತ್ತದಲ್ಲಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಶಿವಾಜಿ ವೃತ್ತದಿಂದ ಪ್ರಮುಖ ಮಾರ್ಗಗಳ ಮೂಲಕ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ವರೆಗೆ ಮೆರವಣಿಗೆ ನಡೆಯಿತು.
ಯುವತಿಯರು, ಮಹಿಳೆಯರು ಸಾಂಪ್ರದಾಯಿಕ ಧಿರಿಸಿನಲ್ಲಿ ಕೋಲಾಟವಾಡಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಶಿವಾಜಿ ಭಾವಚಿತ್ರ, ಭಗವಾ ಧ್ವಜಗಳು ರಾರಾಜಿಸಿದವು. ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮತ್ತಿತರರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಮಧ್ಯಾಹ್ನ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಸಚಿವ ರಹೀಂ ಖಾನ್ ಉದ್ಘಾಟಿಸಿ, ಶಿವಾಜಿ ಮಹಾರಾಜರ ಧೈರ್ಯ, ದೇಶಪ್ರೇಮ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ ಎಂದು ಹೇಳಿದರು.
ಶಿವಾಜಿ ಮಹಾರಾಜರು ಭಾರತದ ಇತಿಹಾಸದಲ್ಲಿ ಅಪ್ರತಿಮ ವೀರ ಮತ್ತು ದಕ್ಷ ಆಡಳಿತಗಾರರಾಗಿ ಚಿರಸ್ಥಾಯಿಯಾಗಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವರಾಜ್ಯದ ಕನಸನ್ನು ಕಂಡು ಅದನ್ನು ನನಸು ಮಾಡಿದರು. ಶಿವಾಜಿ ಮಹಾರಾಜರು ಕೇವಲ ಯುದ್ಧವಲ್ಲ, ಸ್ತ್ರೀಯರಿಗೆ ಗೌರವ ನೀಡುವುದು, ರೈತರ ಹಿತರಕ್ಷಣೆ ಮತ್ತು ಸಮರ್ಥ ನೌಕಾಪಡೆಯನ್ನು ನಿರ್ಮಿಸುವ ಮೂಲಕ ಅವರು ಒಬ್ಬ ಜನಪರ ರಾಜರಾಗಿ ಗುರುತಿಸಿಕೊಂಡಿದ್ದರು ಎಂದರು.
ಸಂಸದ ಸಾಗರ್ ಖಂಡ್ರೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಅನ್ಯಾಯ, ಅತ್ಯಾಚಾರದ ವಿರುದ್ಧ ಕೆಚ್ಚೆದೆಯಿಂದ ಹೋರಾಟ ನಡೆಸುತ್ತಿದ್ದರು. ಅವರಂತೆ ತಾವೆಲ್ಲರೂ ಸಮಾಜದಲ್ಲಿ ನಡೆಯುವ ಅನ್ಯಾಯ– ಅತ್ಯಾಚಾರದ ವಿರುದ್ಧ ಧ್ವನಿ ಎತ್ತಬೇಕು. ಮಹಾಪುರುಷರನ್ನು ಕೇವಲ ಜಯಂತಿಗೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ. ಅವರ ತತ್ವಾರ್ದಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಮರಾಠ ಸಮುದಾಯ ಭವನ ನಿರ್ಮಾಣಕ್ಕಾಗಿ ₹50 ಲಕ್ಷ ಮೀಸಲಿಡಲಾಗಿದೆ. ಮುಂದೆ ಕೂಡಾ ಸಮಾಜದ ಪರ ನಿಲ್ಲುವುದಾಗಿ ಆಶ್ವಾಸನೆ ನೀಡಿದರು.
ಬೀದರ್ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ಛತ್ರಪತಿ ಶಿವಾಜಿ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಘುನಾಥರಾವ್ ಜಾಧವ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಅನ್ಯ ಧರ್ಮೀಯರ ವಿರುದ್ಧ ಎತ್ತಿ ಕಟ್ಟುವ ಕೆಲಸ
‘ಛತ್ರಪತಿ ಶಿವಾಜಿ ಮಹಾರಾಜರನ್ನು ಮರಾಠರಿಗೆ ಹಿಂದೂ ಧರ್ಮಕ್ಕೆ ಸೀಮಿತಗೊಳಿಸಿ ಅನ್ಯ ಧರ್ಮೀಯರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ’ ಎಂದು ಪುಣೆಯ ಮರಾಠ ಸೇವಾ ಸಂಘದ ಪ್ರಮುಖ ಗಂಗಾಧರ್ ಬನಬಾರೆ ವಿಶೇಷ ಉಪನ್ಯಾಸ ನೀಡಿದರು. ಯಾವುದೇ ಮಹಾಪುರುಷರನ್ನು ಒಂದು ಜಾತಿ ಧರ್ಮದ ಹಣೆಪಟ್ಟಿ ಕಟ್ಟಬಾರದು. ಮಹಾಪುರುಷರು ಈ ಸಮಾಜದ ಆಸ್ತಿ. ಶಿವಾಜಿ ಬಗ್ಗೆ ಶತ್ರುಗಳು ಸಹ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ. ಅಂಥ ಮಹಾನ್ ವ್ಯಕ್ತಿ ಶಿವಾಜಿ ಮಹಾರಾಜರಾಗಿದ್ದರು. ಕನ್ನಡ ಹಾಗೂ ಮರಾಠಿ ಭಾಷೆಯ ನಡುವೆ ನಡೆಯುತ್ತಿರುವ ಹೋರಾಟ ವ್ಯರ್ಥವಾದದ್ದು. ಶಿವಾಜಿ ಮಹಾರಾಜರು ಕರ್ನಾಟಕದ ಬೆಂಗಳೂರಿನಲ್ಲಿಯೇ ಪೋಷಕರಿಂದ ಸ್ವರಾಜ್ಯದ ಶಿಕ್ಷಣ ಪಡೆದಿದ್ದರು. ಕನ್ನಡಿಗರು ಹಾಗೂ ಮರಾಠಿಗರ ಮಧ್ಯ ಅವಿನಾಭಾವ ಸಂಬಂಧವಿದೆ ಎಂದರು.
ಶಿವಾಜಿ ಸೈನ್ಯದಲ್ಲಿ ಮುಸ್ಲಿಮರು
ಛತ್ರಪತಿ ಶಿವಾಜಿ ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಅವರ ಸೈನ್ಯದಲ್ಲಿ ಸಾಕಷ್ಟು ಮುಸ್ಲಿಮರಿದ್ದರು. ಆದರೆ ಅವರ ಇತಿಹಾಸವನ್ನು ತಪ್ಪಾಗಿ ಹೇಳಲಾಗುತ್ತಿದೆ. ಅದರ ಸತ್ಯಾಂಶವನ್ನು ಹೊರತರುವ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ. ಮರಾಠ ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ರಹೀಂ ಖಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.