ADVERTISEMENT

ಕೃಷಿಕನ ಪುತ್ರಿ ಶ್ವೇತಾ ಐದು ಹುದ್ದೆಗಳಿಗೆ ಆಯ್ಕೆ

ಜನಸೇವೆಗೆ ಪಿಎಸ್ಐ ಹುದ್ದೆ ಆಯ್ಕೆ ಮಾಡಿಕೊಂಡ ರಾಜೇಶ್ವರದ ಯುವತಿ

ಮಾಣಿಕ ಆರ್ ಭುರೆ
Published 27 ನವೆಂಬರ್ 2020, 6:57 IST
Last Updated 27 ನವೆಂಬರ್ 2020, 6:57 IST
ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಪಾಲಕರೊಂದಿಗೆ ಶ್ವೇತಾ ಸ್ವಾಮಿ
ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಪಾಲಕರೊಂದಿಗೆ ಶ್ವೇತಾ ಸ್ವಾಮಿ   

ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರ ಗ್ರಾಮದ ಶ್ವೇತಾ ರೇವಣಸಿದ್ದಯ್ಯ ಸ್ವಾಮಿ ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್ ಹುದ್ದೆ ಸೇರಿದಂತೆ ಏಕಕಾಲಕ್ಕೆ ಐದು ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಶ್ವೇತಾ ಅವರ ತಂದೆ ರೇವಣಸಿದ್ದಯ್ಯ ಕೃಷಿಕರು. ತಾಯಿ ದಾಕ್ಷಾಯಿಣಿ ಹಿಟ್ಟಿನಗಿರಣಿ ನಡೆಸುತ್ತಾರೆ. ಇವರು ಎಷ್ಟೇ ಕಷ್ಟಗಳು ಎದುರಾದರೂ ಶ್ವೇತಾ ಒಳಗೊಂಡು ಮೂವರು ಪುತ್ರಿಯರು ಮತ್ತು ಪುತ್ರನಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಓದಿರುವ ಶ್ವೇತಾ ಬಾಲ್ಯದಿಂದಲೂ ಪ್ರತಿಭಾವಂತೆ. ಶಾಲಾ ಕಾಲೇಜಿನಲ್ಲಿ ಯಾವಾಗಲೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದರು. ಶಾಂತಿನಿಕೇತನ ಪ್ರೌಢಶಾಲೆ ಮತ್ತು ಅಲ್ಲಮಪ್ರಭು ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪೊರೈಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕಮ್ಮಿಯಿಲ್ಲ ಎಂಬಂತೆ ಸಾಧನೆ ಮಾಡಿದ್ದಾರೆ.

ADVERTISEMENT

ಕಳೆದ ಜನವರಿಯಲ್ಲಿ ಮತ್ತು ಮಾರ್ಚ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಎರಡೂ ಸಲ ಅರ್ಜಿ ಹಾಕಿ ಎರಡೂ ಸಲ 5ನೇ ಹಾಗೂ 30ನೇ ರ‍್ಯಾಂಕ್ ಪಡೆದು ಆಯ್ಕೆಯಾದರು. 2019ರಲ್ಲಿ ಅಬಕಾರಿ ಇಲಾಖೆಯ ಎಸ್.ಐ ಹುದ್ದೆಗೂ ಆಯ್ಕೆಯಾಗಿದ್ದರು. ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಎಫ್.ಡಿ.ಎ ಹುದ್ದೆಗೂ ಆಯ್ಕೆಗೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ ಭರ್ತಿ ಸಮಯದಲ್ಲೂ ಆಯ್ಕೆಗೊಂಡಿದ್ದರು. ಒಟ್ಟಾರೆ, ಇವರು ಹಿಡಿದಿದೆಲ್ಲವೂ ಚಿನ್ನ ಎನ್ನುವಂತೆ ಐದು ಪರೀಕ್ಷೆ ಬರೆದರೂ ಐದರಲ್ಲೂ ಇವರಿಗೆ ಅದೃಷ್ಟ ಕಾದಿತ್ತು. ಕೊನೆಗೆ ಇವರು ಸೇವೆಗೆ ಹಾಜರಾಗಿರುವುದು ಮಾತ್ರ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ. ಈಗ ಬೆಳಗಾವಿಯಲ್ಲಿ ಈ ಹುದ್ದೆಯಲ್ಲಿ ಪ್ರೋಬೇಷನರಿ ಅಧಿಕಾರಿಯಾಗಿದ್ದಾರೆ.

ಮನೆಯಲ್ಲಿ ಬಡತನ ಇದ್ದುದರಿಂದ ತಂದೆ–ತಾಯಿಯೊಂದಿಗೆ ಕೃಷಿ ಹಾಗೂ ಇತರೆ ಕೆಲಸ ನಿರ್ವಹಿಸಿದ ಶ್ವೇತಾ, ‘ಸತತ ಅಧ್ಯಯನ ಹಾಗೂ ಕಠಿಣ ಪರಿಶ್ರಮವಿದ್ದರೆ ಯಾವುದೂ ಅಸಾಧ್ಯವಾಗಲಾರದು’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಎಎಸ್, ಐಎಎಸ್ ಪರೀಕ್ಷೆ ಬರೆಯುವ ತಯಾರಿಯೂ ನಡೆಸಿರುವುದಾಗಿ ಶ್ವೇತಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.