
ಹೊನ್ನಿಕೇರಿ(ಜನವಾಡ): ಬೀದರ್ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದ ಗೋಪುರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸುಮಾರು ₹ 1 ಕೋಟಿ ವೆಚ್ಚದಲ್ಲಿ ಗೋಪುರ, ಒಂದು ಕಟ್ಟಡ ಹಾಗೂ ಎರಡು ದ್ವಾರಗಳನ್ನು ನಿರ್ಮಿಸಲಾಗಿದ್ದು, ಗೋಪುರ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ.
ದೇವಸ್ಥಾನದ ಹಳೆಯ ಗೋಪುರ ಕಿರಿದಾಗಿತ್ತು. ಈಗ 41 ಅಡಿ ಎತ್ತರದ ಸುಂದರ ಗೋಪುರ ನಿರ್ಮಿಸಲಾಗಿದೆ. ಗೋಪುರದ ಮೇಲೆ ಒಂದು ದಿಕ್ಕಿಗೆ ತಲಾ ಮೂರರಂತೆ 4 ದಿಕ್ಕಿಗೆ ಒಟ್ಟು 12 ಜ್ಯೋತಿರ್ಲಿಂಗ, ನಂದಿ, ಹುಲಿ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಪೂರ್ವ ದಿಕ್ಕಿಗೆ ಗಣೇಶ, ಪಶ್ಚಿಮಕ್ಕೆ ಅನ್ನಪೂರ್ಣೇಶ್ವರಿ, ಉತ್ತರಕ್ಕೆ ಶಿವ ಹಾಗೂ ದಕ್ಷಿಣಕ್ಕೆ ದತ್ತಾತ್ರೇಯ ಚಿತ್ರಗಳನ್ನು ಬಿಡಿಸಲಾಗಿದೆ.
ಗೋಡೆಗಳ ಅಂದ ಹೆಚ್ಚಿಸಲು ಅಲ್ಲಲ್ಲಿ ಪುಷ್ಪಗಳನ್ನು ಬಿಡಿಸಲಾಗಿದೆ. ಗೋಪುರ ಹಾಗೂ ಗೋಡೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಸುಣ್ಣ, ಬಣ್ಣ ಬಳಿದು ಗೋಪುರ ಸೇರಿದಂತೆ ದೇವಸ್ಥಾನವನ್ನು ಸಿಂಗರಿಸಲಾಗಿದೆ. ಸದ್ಯ ಗೋಪುರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಚಿತ್ತವನ್ನು ತಮ್ಮತ್ತ ಸೆಳೆಯುತ್ತಿದೆ. ಭಕ್ತರ ದೇಣಿಗೆ ಹಾಗೂ ದೇವಸ್ಥಾನದ ಅನುದಾನದಿಂದ ಗೋಪುರ ನಿರ್ಮಾಣ ಮಾಡಲಾಗಿದೆ ಎಂದು ಗೋಪುರ ನಿರ್ಮಾಣದ ಮುಂದಾಳತ್ವ ವಹಿಸಿದ್ದ ಪ್ರಮುಖರಲ್ಲಿ ಒಬ್ಬರಾದ ಮಳಚಾಪುರದ ಮುಖಂಡ ಸಂಗಮೇಶ ಪಾಟೀಲ ಹೇಳುತ್ತಾರೆ.
‘ಗೋಪುರ ನಿರ್ಮಾಣಕ್ಕೆ ₹ 1 ಕೋಟಿ ವೆಚ್ಚವಾಗಿದೆ. ಮಹಾರಾಷ್ಟ್ರದ ಪರಿಣಿತ ಕಟ್ಟಡ ಕಾರ್ಮಿಕರನ್ನು ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಮಂದಿರಕ್ಕಿದ್ದ ಹಳೆಯ ಗೋಪುರ ಸಣ್ಣದಾಗಿತ್ತು. ಇದೀಗ ಬೃಹತ್ ಗೋಪುರ ನಿರ್ಮಿಸಿದ್ದರಿಂದ ದೇವಸ್ಥಾನ ದೂರದಿಂದಲೇ ಕಾಣುತ್ತಿದೆ. ಭಕ್ತರಲ್ಲಿ ಸಂತಸ ಮನೆ ಮಾಡಿದೆ’ ಎಂದು ಗ್ರಾಮಸ್ಥರಾದ ರೇವಣಯ್ಯ ಸ್ವಾಮಿ, ಮಳಚಾಪುರದ ಪ್ರೇಮಸಾಗರ ಪಾಟೀಲ, ಕಪಲಾಪುರದ ಮಲ್ಲಿಕಾರ್ಜುನ ಕೋಟೆ, ಸಿದ್ಧಾರ್ಥ ಪಾಟೀಲ ಹೊನ್ನಿಕೇರಿ ಹೇಳಿದರು.
ಸಿದ್ಧೇಶ್ವರ ದೇಗುಲದ ನೂತನ ಗೋಪುರ ಮಹಾದ್ವಾರ ಸೇರಿ ವಿವಿಧೆಡೆ ಒಟ್ಟು 28 ಕಳಸಗಳು ಅಳವಡಿಕೆ ಆಗಲಿವೆಶಿವಾನಂದ ಸ್ವಾಮಿ ಸಿದ್ಧೇಶ್ವರ ದೇಗುಲದ ಅರ್ಚಕ
ಭಕ್ತರ ಉದಾರ ದೇಣಿಗೆ ಹಾಗೂ ಸಹಕಾರದಿಂದ ಸಿದ್ಧೇಶ್ವರ ದೇಗುಲಕ್ಕೆ ಬೃಹತ್ ಗೋಪುರ ನಿರ್ಮಾಣದ ಕನಸು ಸಾಕಾರವಾಗಿದೆಸಂಗಮೇಶ ಪಾಟೀಲ ಮಳಚಾಪುರದ ಮುಖಂಡ
12ರಂದು ಕಳಸಾರೋಹಣ
ಸಿದ್ಧೇಶ್ವರ ದೇಗುಲದ ನೂತನ ಗೋಪುರದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಸಮಾರಂಭ ನ. 12ರಂದು ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 2ಕ್ಕೆ ರಂಭಾಪುರಿ ಶ್ರೀಗಳು ಕಳಸಾರೋಹಣ ನೆರವೇರಿಸಲಿದ್ದು ಹಾವಗಿಲಿಂಗೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಸಂಜೆ 4ಕ್ಕೆ ಧರ್ಮಸಭೆ ಹಾಗೂ ಸಂಜೆ 6ಕ್ಕೆ ಲಕ್ಷ ದೀಪೋತ್ಸವ ಜರುಗಲಿದೆ. ಕಳಸಾರೋಹಣ ನಿಮಿತ್ತ ದೇಗುಲದಲ್ಲಿ ಸಪ್ತಾಹ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.