ADVERTISEMENT

ರಾಜ್ಯದ ಹಿರಿಯ ಜಾನಪದ ಕಲಾವಿದೆ ತುಳಸಮ್ಮಗೆ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 16:14 IST
Last Updated 9 ಡಿಸೆಂಬರ್ 2018, 16:14 IST
ತುಳಸಮ್ಮ ಸಂಗ್ರಾಮ
ತುಳಸಮ್ಮ ಸಂಗ್ರಾಮ   

ಬೀದರ್: ಔರಾದ್ ತಾಲ್ಲೂಕಿನ ನಾಗೂರ(ಬಿ) ಗ್ರಾಮದ ರಾಜ್ಯದ ಹಿರಿಯ ಜಾನಪದ ಕಲಾವಿದೆ 95 ವರ್ಷದ ತುಳಸಮ್ಮ ಸಂಗ್ರಾಮ ಸಿಂಧೆ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಮೂಲತಃ ಮುಂಗನಾಳದ ಮಲ್ಲಪ್ಪ ಹಾಗೂ ನಾಗಮ್ಮರ ದಂಪತಿಯ ಮಗಳಾದ ತುಳಸಮ್ಮ ಜಾನಪದ ಹಾಡಗಳನ್ನು ಹಾಡುತ್ತಲೇ ಬೆಳೆದರು. ನಾಗೂರ(ಬಿ) ಗ್ರಾಮದ ಸಂಗ್ರಾಮ ಸಿಂಧೆ ಅವರೊಂದಿಗೆ ವಿವಾಹವಾದ ನಂತರ ಜಾನಪದ ಹಾಡುಗಳ ಬಗೆಗೆ ಇನ್ನಷ್ಟು ಆಸಕ್ತಿ ಬೆಳೆಸಿಕೊಂಡು ಸುಶ್ರಾವ್ಯವಾಗಿ ಹಾಡುವ ಮೂಲಕ ಮನೆಮಾತಾದರು.

ತುಳಸಮ್ಮ ಅವರ ಮಾತೃ ಭಾಷೆ ಮರಾಠಿ. ಆದರೆ, ಅವರು ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ಸುಲಲಿತವಾಗಿ ಮಾತನಾಡುತ್ತಾರೆ. ತೊಟ್ಟಿಲ ಹಾಡು, ಮೈನೆರೆದ ಹಾಡು, ಭುಲಾಯಿ, ಮೊಹರಂ ಹಾಡು, ತತ್ವ ಪದ, ಮದುವೆ ಹಾಡು, ಬೀಗರ ಹಾಡು, ಸುರಗಿಯ ಹಾಡು, ಅರಿಷಿಣ ಹಾಡು, ಐರಣಿ ಹಾಡು, ದೇವಕರಿ ಹಾಡುಗಳನ್ನು ಹಾಡಿ ಪ್ರಸಿದ್ಧಿ ಪಡೆದಿದ್ದಾರೆ. ಗ್ರಾಮದಲ್ಲಿ ನಡೆಯುವ ರಾಮಾಯಣ, ಮಹಾಭಾರತ, ನಳ-ದಮಯಂತಿ ನಾಟಕಗಳಲ್ಲಿ ಭಾಗವಹಿಸಿ ಜಾನಪದ ಕಲೆಯ ಪ್ರದರ್ಶನ ನೀಡಿದ್ದಾರೆ.

ADVERTISEMENT

‘ಆರಂಭದ ದಿನಗಳಲ್ಲಿ ಜಾನಪದ ಹಾಡುಗಳನ್ನು ಕಲಿಯುವ ಆಸಕ್ತಿ ಇತ್ತು. ಈಗ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದೇನೆ. ಮುಂದಿನ ಪೀಳಿಗೆಯೂ ಜಾನಪದ ಹಾಡುಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಮಹಾದಾಸೆ ನನ್ನದಾಗಿದೆ. ಅದಕ್ಕಾಗಿ ಇಳಿವಯಸ್ಸಿನಲ್ಲೂ ಹಾಡು ನಿಲ್ಲಿಸಿಲ್ಲ. ದೇಹದಲ್ಲಿ ಬಲ ಹಾಗೂ ಉಸಿರು ಇರುವ ವರೆಗೆ ಹಾಡು ಮುಂದುವರಿಸುತ್ತೇನೆ’ ಎನ್ನುತ್ತಾರೆ ಅವರು.

‘ಅಕಾಡೆಮಿಯವರು ನನಗೆ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಋಣಿಯಾಗಿದ್ದೇನೆ. ಅಕಾಡೆಮಿ ಅಧ್ಯಕ್ಷ ಟಾಕಪ್ಪ ಹಾಗೂ ಸದಸ್ಯ ವಿಜಯಕುಮಾರ ಸೋನಾರೆ ಅವರಿಗೆ ಕೃತಜ್ಞಳಾಗಿದ್ದೇನೆ’ ಎಂದು ತುಳಸಮ್ಮ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.