
ಬೀದರ್: ‘ಮತದಾರರ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಕುರಿತ ಚಿಂತನ–ಮಂಥನ ಸಮಾವೇಶವನ್ನು ಫೆಬ್ರುವರಿ 3ರಂದು ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದು, ಆರ್ಥಿಕ ತಜ್ಞರೂ ಆದ ಪ್ರಗತಿಪರ ಚಿಂತಕ ಪರಕಾಲ ಪ್ರಭಾಕರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ’ ಎಂದು ಎಸ್‌ಐಆರ್ ವಿರೋಧಿ ಜನಾಂದೋಲನ ಸಂಘಟನೆಯ ಶ್ರೀಕಾಂತ್ ಸ್ವಾಮಿ ತಿಳಿಸಿದರು.
ಚಿಂತಕ ಶಿವಸುಂದರ್, ನಾಗರಿಕ ಹಕ್ಕುಗಳ ಪ್ರತಿಪಾದಕಿ ತಾರಾ ರಾವ್ ಅವರು ಎಸ್‌ಐಆರ್ ಕುರಿತು ವಿಸ್ತೃತವಾಗಿ ಮಾತನಾಡುವರು. ದೇಶದಲ್ಲಿ ಮತದಾರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದೆ. ಆದರೆ, ಇದು ಸಾಮಾನ್ಯವಾದ ಪರಿಷ್ಕರಣೆ ಅಲ್ಲ. ಬದಲಾಗಿ ವಿಶೇಷ ಸಮಗ್ರ ಪರಿಷ್ಕರಣೆ. ಇದರಿಂದ ಅನೇಕರ ಹೆಸರುಗಳು ಮತದಾರರ ಪಟ್ಟಿಯಿಂದ ಬಿಟ್ಟು ಹೋಗುತ್ತಿವೆ. ಅದರ ಸಾಧಕ–ಬಾಧಕ ಕುರಿತು ಚರ್ಚಿಸಲಾಗುವುದು ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಿಹಾರ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈ ಪರಿಷ್ಕರಣೆ ನಡೆಸಿ, ಏಳು ಕೋಟಿಗಿಂತ ಹೆಚ್ಚು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಕೈ ಬಿಡಲಾಗಿದೆ. ಉತ್ತರ ಪ್ರದೇಶ ಒಂದರಲ್ಲಿಯೇ 1.5 ಕೋಟಿ ಮತದಾರರನ್ನು ಕೈ ಬಿಡಲಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಅಂದಿನ ಕಾರ್ಯಕ್ರಮದಲ್ಲಿ ಚಿಂತನ ಮಂಥನ ನಡೆಯಲಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಜನರು ಭಾಗವಹಿಸಬೇಕು ಎಂದು ಕೋರಿದರು.
ಮುಖಂಡ ಅಬ್ದುಲ್ ಮನ್ನಾನ್ ಸೇಠ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ನಮ್ಮ ವಿರೋಧವಿಲ್ಲ. ಆದರೆ, ಮತಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಯಾರ ಹೆಸರು ಕೂಡ ತೆಗೆಯಬಾರದು ಎಂದರು.
ಪ್ರಗತಿಪರ ಚಿಂತಕ ವಿಠಲದಾಸ್ ಪ್ಯಾಗೆ ಮಾತನಾಡಿ, ಭಾರತ ದೇಶ ಒಂದು ಪ್ರಜಾಸತ್ತಾತ್ಮಕ ದೇಶವಾಗಿದೆ. ಪ್ರಜಾ ಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಪ್ರಮುಖವಾದುದು. ಮತ ಪರಿಷ್ಕರಣೆಯಾಬೇಕು. ಆದರೆ ಪರಿಷ್ಕರಣೆ ಹೆಸರಲ್ಲಿ ನಿಜವಾದ ಮತದಾರರನ್ನು ಜಾತಿ, ಧರ್ಮದ ಹೆಸರಿನ ಆಧಾರದ ಮೇಲೆ ತೆಗೆದು ಮತದಾನದಿಂದ ವಂಚಿಸಬಾರದು ಎಂದು ಹೇಳಿದರು.
ಸಮಿತಿಯ ಮುಖ್ಯಸ್ಥರಾದ ಓಂಪ್ರಕಾಶ ರೊಟ್ಟೆ, ಮುಹಮ್ಮದ್ ನಿಜಾಮುದ್ದೀನ್, ಜಗದೀಶ್ವರ್ ಬಿರಾದಾರ್, ಮಹೇಶ ಗೋರನಾಳಕರ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.