ADVERTISEMENT

114 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣ ಸಾಧ್ಯತೆ

ಸಮಸ್ಯೆ ಪರಿಹಾರಕ್ಕೆ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ

ಚಂದ್ರಕಾಂತ ಮಸಾನಿ
Published 10 ಫೆಬ್ರುವರಿ 2019, 20:00 IST
Last Updated 10 ಫೆಬ್ರುವರಿ 2019, 20:00 IST
ಬೀದರ್‌ ಜಿಲ್ಲೆಯ ಕಮಲನಗರದಲ್ಲಿ ಕೊಳವೆಬಾವಿಯಿಂದ ನೀರು ಪಡೆಯುತ್ತಿರುವ ಮಹಿಳೆ
ಬೀದರ್‌ ಜಿಲ್ಲೆಯ ಕಮಲನಗರದಲ್ಲಿ ಕೊಳವೆಬಾವಿಯಿಂದ ನೀರು ಪಡೆಯುತ್ತಿರುವ ಮಹಿಳೆ   

ಬೀದರ್‌: ಕಳೆದ ಮುಂಗಾರಿನಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಹಿಂಗಾರು ಸಂಪೂರ್ಣ ಕೈಕೊಟ್ಟಿದೆ. ಜಿಲ್ಲೆಯ ಅನೇಕ ಕೆರೆಗಳು ಬತ್ತಿದ್ದು ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ.

ಬೇಸಿಗೆಯಲ್ಲಿ 114 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಅಂದಾಜಿದೆ. ಅವಿಭಜಿತ ಔರಾದ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 62 ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಬೀದರ್‌ ಗ್ರಾಮೀಣ, ಹುಮನಾಬಾದ್ ಹಾಗೂ ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಸಮಸ್ಯೆ ನಿಧಾನವಾಗಿ ಗರಿ ಬಿಚ್ಚಿಕೊಳ್ಳುತ್ತಿದೆ.

ಬೀದರ್‌ ನಗರ ಹಾಗೂ ಭಾಲ್ಕಿ ಪಟ್ಟಣಕ್ಕೆ ಕಾರಂಜಾ ಜಲಾಶಯದಿಂದ ನೀರು ಪೂರೈಸುತ್ತಿರುವ ಕಾರಣ ಸಮಸ್ಯೆ ಕಂಡು ಬರುತ್ತಿಲ್ಲ. ನೀರು ಸರಬರಾಜು ವ್ಯವಸ್ಥೆಯಲ್ಲಿ ಲೋಪಗಳಿರುವ ಕಾರಣ ಜನ ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಕೆರೆಗಳು ಬತ್ತಿರುವ ಕಾರಣ ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನ ಬೆಳಗಾಗುತ್ತಲೇ ಕೊಳವೆಬಾವಿಗಳ ಮುಂದೆ ಕೊಡಗಳೊಂದಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

‘ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಧಿಕಾರಿಗಳು ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಿಲ್ಲ. ಬೇಸಿಗೆಯಲ್ಲಿ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗಲಿದೆ’ ಎಂದು ಕಮಲನಗರ ಜಿಲ್ಲಾ ಪಂಚಾಯಿತಿ ಸದಸ್ಯ ಬಾಬು ಹಜಾರಿ ಹೇಳುತ್ತಾರೆ.

‘ಬೀದರ್ ನಗರದಲ್ಲಿ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ನಿರಂತರ ಯೋಜನೆಯಲ್ಲಿ ಪೈಪ್‌ಲೈನ್‌ಗಳನ್ನು ಸರಿಯಾಗಿ ಜೋಡಿಸದ ಕಾರಣ ಮನೆಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ. ಅಧಿಕಾರಿಗಳು ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ’ ಎನ್ನುತ್ತಾರೆ ಓಲ್ಡ್‌ಸಿಟಿಯ ನಿವಾಸಿ ಶಾಹೇದ್‌ ಅಲಿ.

ಸಮಿತಿ ರಚನೆ:ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ನಾಡ ಕಚೇರಿ ಉಪ ತಹಶೀಲ್ದಾರ, ಪಿಡಿಒ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡು ಗ್ರಾಮ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

‘ಆಗಾಗ ಸಭೆ ನಡೆಸಿ ಕುಡಿಯುವ ನೀರು, ಮೇವು ಮತ್ತು ಉದ್ಯೋಗ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಆಡಳಿತಕ್ಕೆ ನೀಡುವಂತೆ ಗ್ರಾಮ ಮಟ್ಟದ ಸಮಿತಿಗೆ ಸೂಚಿಸಲಾಗಿದೆ. ಈ ಸಮಿತಿ ಮೂಲಕ ಪರಿಹಾರ ಕಂಡುಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್.ಆರ್‌.ಮಹಾದೇವ ಹೇಳುತ್ತಾರೆ.

ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆದು ದಿನದ 24 ಗಂಟೆಯೂ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೆ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡುವಂತೆ ಜಿಲ್ಲಾ ಆಡಳಿತ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದೆ.

‘ಜಿಲ್ಲಾ ಪಂಚಾಯಿತಿ ಬಳಿ ತುರ್ತು ಕುಡಿಯುವ ನೀರಿನ ಯೋಜನೆಗೆ ₹ 1.25 ಕೋಟಿ ಅನುದಾನ ಲಭ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಆದರೂ ಹಳ್ಳಿಗಳಲ್ಲಿ 112 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಇದರಲ್ಲಿ 20 ಬಾವಿಗಳು ವಿಫಲವಾಗಿವೆ. ಭಾಲ್ಕಿ ಹಾಗೂ ಔರಾದ್‌ ತಾಲ್ಲೂಕಿನಲ್ಲಿ ತಲಾ ಒಂದು ಟ್ಯಾಂಕರ್‌ ಮೂಲಕ ತುರ್ತು ಅಗತ್ಯವಿರುವ ಗ್ರಾಮಕ್ಕೆ ನೀರು ಕೊಡಲಾಗುತ್ತಿದೆ’ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.