ADVERTISEMENT

46 ಕಲಾವಿದರ ಪ್ರತಿಭಾ ಪ್ರದರ್ಶನ; ರಂಗೋಲಿ ಸೊಬಗಿನಲ್ಲಿ ಸಾಮಾಜಿಕ ಸಂದೇಶ

ಗೃಹಿಣಿಯರು ಮುಂಚೂಣಿಯಲ್ಲಿ

ಚಂದ್ರಕಾಂತ ಮಸಾನಿ
Published 4 ಜನವರಿ 2022, 15:46 IST
Last Updated 4 ಜನವರಿ 2022, 15:46 IST
ಬೀದರ್‌ನ ಸರಸ್ವತಿ ಶಾಲೆಯ ಚಿತ್ರಕಲಾ ಶಿಕ್ಷಕಿ ಸಂಗೀತಾ ದುನಗೆ ರಂಗೋಲಿಯಲ್ಲಿ ಬಿಡಿಸಿದ ಸಾವಿತ್ರಿಬಾಯಿ ಫುಲೆ ಚಿತ್ರ
ಬೀದರ್‌ನ ಸರಸ್ವತಿ ಶಾಲೆಯ ಚಿತ್ರಕಲಾ ಶಿಕ್ಷಕಿ ಸಂಗೀತಾ ದುನಗೆ ರಂಗೋಲಿಯಲ್ಲಿ ಬಿಡಿಸಿದ ಸಾವಿತ್ರಿಬಾಯಿ ಫುಲೆ ಚಿತ್ರ   

ಬೀದರ್: ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಮಹಿಳಾ ಘಟಕದ ಸಹಯೋಗದಲ್ಲಿ ಇಲ್ಲಿಯ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಮಹಿಳೆಯರು ಪ್ರತಿಭಾ ಪ್ರದರ್ಶನದ ಮೂಲಕ ಕಲಾಸಕ್ತರಲ್ಲಿ ಪುಳಕ ಉಂಟು ಮಾಡಿದರು.

ಬೀದರ್‌ನ ಸರಸ್ವತಿ ಶಾಲೆಯ ಚಿತ್ರಕಲಾ ಶಿಕ್ಷಕಿ ಸಂಗೀತಾ ದುನಗೆ ಅವರು ರಂಗೋಲಿಯ ಮೂಲಕ ಜೀವ ತುಂಬಿದ, ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಚಿತ್ರ ಕಲಾಸಕ್ತರ ಮನ ಸೆಳೆಯಿತು. ರಂಗೋಲಿಯಲ್ಲಿ ಹೆಣ್ಣು ಭ್ರೂಣಹತ್ಯೆ ತಡೆ, ಬಾಲಕಿಯರ ಶಿಕ್ಷಣ, ಮಹಿಳಾ ಸಬಲೀಕರಣದ ಸಂದೇಶ ಅರ್ಥಪೂರ್ಣವಾಗಿ ಮೂಡಿ ಬಂದಿತು. ಸಾವಿತ್ರಿಬಾಯಿ ಫುಲೆ ಭಾವಚಿತ್ರದ ಹಿಂಬದಿ ಮೂಡಿಸಿದ ಗರಿ ಬಿಚ್ಚಿದ ನವಿಲಿನ ಚಿತ್ರ ಮಹಿಳೆಯರು ತಮ್ಮ ಬದುಕಿನಲ್ಲಿ ಶಿಕ್ಷಣದ ಮೂಲಕವೇ ಪ್ರಗತಿ ಸಾಧಿಸಲು ಸಾಧ್ಯ ಎನ್ನುವುದನ್ನು ಬಿಂಬಿಸಿತು.

‘ನಾನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕಿಂತಲೂ ಸಾವಿತ್ರಿಬಾಯಿ ಫುಲೆ ಅವರ ಆದರ್ಶ ಹಾಗೂ ಸಾಧನೆಗಳ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದ್ದೇನೆ. ಮಹಿಳೆಯರು ಅವಕಾಶಗಳ ಸದುಪಯೋಗ ಪಡೆದು ಸಾಧನೆ ಮಾಡಲು ಪ್ರಯತ್ನಿಸಬೇಕು ಎನ್ನುವ ಸಂದೇಶ ನೀಡಲು ಪ್ರಯತ್ನಿಸಿದ್ದೇನೆ’ ಎಂದರು ಕಲಾವಿದೆ ಸಂಗೀತಾ ದುನಗೆ.

ADVERTISEMENT

ಔರಾದ್‌ ತಾಲ್ಲೂಕಿನ ಹೆಡಗಾಪುರದ ಸರಸ್ವತಿ ಸಂತಪುರೆ ಅವರು ಬಿಡಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್ ರಾವತ್‌ ಅವರ ಚಿತ್ರ ದೇಶಭಕ್ತಿ ಜಾಗೃತಗೊಳಿಸಿತು. ಪ್ರದರ್ಶನ ವೀಕ್ಷಿಸಲು ಬಂದ ಪ್ರೇಕ್ಷಕರು ಬಿಪಿನ್‌ ರಾವತ್‌ ಅವರ ಸೇವೆಯನ್ನು ಮತ್ತೊಮ್ಮೆ ಸ್ಮರಿಸುವಂತೆ ಮಾಡಿತು. ಯೋಗೇಶ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಿದ್ದಪ್ಪ ಬಾಬುರಾವ್ ಅವರು ರಂಗೋಲಿಯಲ್ಲಿ ಅರಳಿಸಿದ ಬಿಪಿನ್‌ ರಾವತ್‌ ಅವರ ಚಿತ್ರ ಸಭಾಭವನದಲ್ಲಿನ ರಂಗೋಲಿಗಳಲ್ಲೇ ಕಳೆಗಟ್ಟಿತ್ತು.

ಗೃಹಿಣಿ ಉಮಾರಾಣಿ ಪೋಲಾ, ಸಾಂಪ್ರದಾಯಿಕ ರಂಗೋಲಿ ಕಲೆಯಲ್ಲಿ ನವಿಲುಗಳನ್ನು ಹರಿಯ ಬಿಟ್ಟರೆ, ಇನ್ನೊಬ್ಬರು ಗೃಹಿಣಿ ಮಹಾದೇವಿ ವಡ್ಡೆ ಅವರು ರಂಗೋಲಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಪಕ್ಕದಲ್ಲಿ ಧೂಪ ಹಾಗೂ ಆರತಿ ಬೆಳಗಿ ಪ್ರೇಕ್ಷಕರನ್ನು ಆಧ್ಯಾತ್ಮಿಕ ಲೋಕದಲ್ಲಿ ಮುಳುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.