ಹುಲಸೂರ: ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದ ಮಣ್ಣಿನ ಆರೋಗ್ಯ ಕಾಯ್ದುಕೊಳ್ಳುವಲ್ಲಿ ರೈತರಿಗೆ ಪೂರಕವಾಗಿರುವ ಮಣ್ಣು ಪರೀಕ್ಷಾ ಕೇಂದ್ರ ಕೃಷಿ ವಿಜ್ಞಾನ ಕೇಂದ್ರ ಬೀದರನಲ್ಲಿ ಮಾತ್ರವಿದ್ದು, ದೂರದ ತಾಲ್ಲೂಕುಗಳಿಂದ ಮಣ್ಣು ಪರೀಕ್ಷೆಗೆ ತರುವುದು ರೈತರಿಗೆ ಹೊರೆಯಾಗಿ ಮಾರ್ಪಟ್ಟಿದೆ.
ಕೃಷಿಯೇ ಪ್ರಮುಖ ಜೀವನಾಧಾರವಾಗಿರುವ ಹುಲಸೂರ ಪಟ್ಟಣ ಸೇರಿದಂತೆ ಮಿರಕಲ, ಗಡಿಗೌಡಗಾಂವ, ಬೇಲೂರ, ಗೋರಟಾ, ಮುಚಳಂಬ, ಸಾಯಗಾಂವ ಹೋಬಳಿಯ ಹಲಸಿ ತುಗಾಂವ, ವಾಂಜರಖೇಡ, ಮೆಹಕರ, ಅಟ್ಟರಗಾ ,ಅಳವಾಯಿ ಗ್ರಾಮ ಪಂಚಾಯಿತಿಗಳ ಹಾಗೂ ಬಸವಕಲ್ಯಾಣ ತಾಲ್ಲೂಕ ವ್ಯಾಪ್ತಿಯಲ್ಲಿ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರದ ಕೊರತೆ ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಪ್ರದೇಶದಲ್ಲಿ ಕಬ್ಬು , ತೊಗರಿ, ಜೋಳ, ಸೋಯಾಬಿನ್ ಸೇರಿದಂತೆ ವಿವಿಧ ತೋಟಗಾರಿಕೆ, ತರಕಾರಿ ಸೇರಿ ಕೃಷಿ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಆದರೆ ಮಣ್ಣು ಹಾಗೂ ನೀರಿನ ಗುಣಮಟ್ಟದ ಕುರಿತು ವೈಜ್ಞಾನಿಕ ಮಾಹಿತಿ ಇಲ್ಲದ ಕಾರಣ ರೈತರು ಅಂದಾಜಿನ ಮೇರೆಗೆ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸಬೇಕಾಗುತ್ತಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುವುದರ ಜೊತೆಗೆ ಮಣ್ಣಿನ ಫಲವತ್ತತೆ ಕ್ರಮೇಣ ಕುಸಿಯುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಡಿ ರೈತರ ಹೊಲದ ಮಣ್ಣಿನ ಗುಣಮಟ್ಟ ಪರಿಶೀಲಿಸಿ ಕೃಷಿ ಇಲಾಖೆ ಮಣ್ಣಿನ ಆರೋಗ್ಯ ಕಾರ್ಡ್ ನೀಡುತ್ತದೆ. ಕೃಷಿ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆ, ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಮಣ್ಣು ಪರೀಕ್ಷೆ ನಡೆಯುತ್ತವೆ. ಮಣ್ಣಿನ ಫಲವತ್ತತೆ ಪರಿಶೀಲಿಸಲಾಗುತ್ತದೆ. ಇದರ ಆಧಾರದ ಮೇಲೆ ಬೆಳೆ ಆಯ್ಕೆ ಮಾಡುವುದು ಸುಲಭ.
ಪ್ರಸ್ತುತ ಮಣ್ಣು ಮತ್ತು ನೀರು ಪರೀಕ್ಷೆಗೆ ರೈತರು ದೂರದ ಜಿಲ್ಲಾ ಕೇಂದ್ರಗಳಿಗೆ ತೆರಳಬೇಕಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಸಮಯ ಹಾಗೂ ಹಣದ ಕೊರತೆಯಿಂದ ಅನೇಕ ಸಣ್ಣ ಮತ್ತು ಅಂಚಿನ ರೈತರು ಪರೀಕ್ಷೆ ಮಾಡಿಸದೇ ಉಳಿಯುತ್ತಿದ್ದಾರೆ. ಕೆಲವರು ಖಾಸಗಿ ಪ್ರಯೋಗಾಲಯಗಳಿಗೆ ತೆರಳಿ ಹೆಚ್ಚಿನ ಶುಲ್ಕ ಪಾವತಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ.
'ಇಲಾಖೆಯಿಂದ ಪ್ರತಿ ತಾಲ್ಲೂಕಿನ 5 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು, ಸರ್ವೆ ಸಂಖ್ಯೆ ಪ್ರಕಾರ ಅಲ್ಲಿನ ಸುಮಾರು 200-300 ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಸರ್ವೆ ಸಂಖ್ಯೆ ಆಧರಿಸಿ ಇದನ್ನು ನಡೆಸಲಾಗುತ್ತದೆ. ಇಲಾಖೆಯೇ ರೈತರ ಕೃಷಿ ಭೂಮಿಗೆ ತೆರಳಿ ಮಣ್ಣು ಸಂಗ್ರಹಿಸಿದರೆ, ಅದನ್ನು ಉಚಿತವಾಗಿ ಮಾಡಲಾಗುತ್ತದೆ. ರೈತರು ಪರೀಕ್ಷೆಗೆ ತಂದರೆ ₹200 ಶುಲ್ಕ ಪಾವತಿಸಬೇಕು. ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತಿಳಿಸಿದರೆ ಮಣ್ಣು ಮಾದರಿ ಸಂಗ್ರಹಿಸಲು ಅವರು ನೆರವಾಗುತ್ತಾರೆ' ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೌತಮ ಮಾಹಿತಿ ನೀಡಿದರು.
'ಮಣ್ಣನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಲು ವೆಚ್ಚವಾಗುತ್ತದೆ. ಇಲಾಖೆಯೂ ಶುಲ್ಕ ವಿಧಿಸುತ್ತದೆ. ಅಲ್ಲದೆ ವರದಿ ಪಡೆಯಲು ಮತ್ತೆ ಅಲೆದಾಡಬೇಕು. ಬೇರೆ ಬೇರೆ ಕಡೆ ಪರೀಕ್ಷಿಸಿದಾಗ ಬೇರೆ ಬೇರೆ ವರದಿ ಬರುತ್ತದೆ. ಇದು ರೈತರನ್ನು ಗೊಂದಲಕ್ಕೆ ಸಿಲುಕಿಸುತ್ತದೆ. ಒಮ್ಮೆ ಮಣ್ಣು ಪರೀಕ್ಷೆ ಮಾಡಿಸಲು ಕನಿಷ್ಠವೆಂದರೂ ₹1,000 ಖರ್ಚಾಗುತ್ತದೆ. ದೂರದ ಊರುಗಳಿಂದ ಬೀದರ್ ಗೆ ಬರಲು ಸಮಯ, ಹಣ ವ್ಯರ್ಥವಾಗುತ್ತದೆ. ಆಯಾ ತಾಲ್ಲೂಕು ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಿದರೆ ರೈತರಿಗೆ ಅನುಕೂಲ' ಎನ್ನುತ್ತಾರೆ ರೈತ ನೀಲಕಂಠ ಮೇತ್ರೆ .
ಮಿರಕಲ ಗ್ರಾಮದ ರೈತ ಗಣೇಶ ಪಾಟೀಲ ಮಾತನಾಡಿ, “ಮಣ್ಣಿನಲ್ಲಿ ಯಾವ ಪೋಷಕಾಂಶ ಎಷ್ಟು ಪ್ರಮಾಣದಲ್ಲಿದೆ ಎಂಬ ಮಾಹಿತಿ ಇಲ್ಲದೆ ಗೊಬ್ಬರ ಹಾಕುತ್ತಿದ್ದೇವೆ. ಸ್ಥಳೀಯವಾಗಿ ಪರೀಕ್ಷಾ ಕೇಂದ್ರ ಇದ್ದರೆ ಖರ್ಚು ಕಡಿಮೆಯಾಗಿ ಸರಿಯಾದ ಬೆಳೆ ನಿರ್ವಹಣೆ ಸಾಧ್ಯವಾಗುತ್ತದೆ” ಎಂದು ಹೇಳಿದರು.
ಹುಲಸೂರ ಪಟ್ಟಣದ ಪ್ರಗತಿಪರ ರೈತ ಸುನೀಲ ಬುಜಂಗೆ ಮಾತನಾಡಿ , “ನೀರಿನ ಉಪ್ಪು ಪ್ರಮಾಣ ಹಾಗೂ ಪಿಹೆಚ್ ಮಟ್ಟದ ಮಾಹಿತಿ ಇಲ್ಲದ ಕಾರಣ ಕೆಲವೊಮ್ಮೆ ಬೆಳೆ ಹಾನಿಯಾಗುತ್ತಿದೆ. ನಮ್ಮ ಭಾಗಕ್ಕೆ ಮಣ್ಣು–ನೀರು ಪರೀಕ್ಷಾ ಕೇಂದ್ರ ಅವಶ್ಯಕ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹುಲಸೂರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರ ಸ್ಥಾಪನೆಯಾದರೆ, ರೈತರಿಗೆ ಸರಿಯಾದ ಬೆಳೆ ಆಯ್ಕೆ, ಸಮತೋಲನ ಗೊಬ್ಬರ ಬಳಕೆ ಹಾಗೂ ನೀರಾವರಿ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸುಸ್ಥಿರ ಕೃಷಿಗೆ ಉತ್ತೇಜನ ದೊರೆಯುವ ಜೊತೆಗೆ ರೈತರ ಆದಾಯ ವೃದ್ಧಿಗೂ ನೆರವಾಗಲಿದೆ.
ಹುಲಸೂರ ತಾಲ್ಲೂಕು ಆಡಳಿತ ಮತ್ತು ಕೃಷಿ ಇಲಾಖೆ ಈ ಕುರಿತು ಗಂಭೀರವಾಗಿ ಪರಿಗಣಿಸಿ, ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರವನ್ನು ಶೀಘ್ರ ಮಂಜೂರು ಮಾಡಬೇಕೆಂದು ರೈತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲ್ಲೂಕಿಗೆ ಬೇಕಿದೆ ಸಹಾಯಕ ಕೃಷಿ ನಿರ್ದೇಶಕ ಕಚೇರಿ
ಹುಲಸೂರದಲ್ಲಿ ಸಹಾಯಕ ಕೃಷಿ ನಿರ್ದೇಶಕ (ಎಎಡಿ) ಕಚೇರಿ ಸ್ಥಾಪನೆಗೆ ಆಗ್ರಹ ತೀವ್ರವಾಗಿದೆ. ಸಮರ್ಪಕ ಕೃಷಿ ಆಡಳಿತ ಹಾಗೂ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಪ್ರತ್ಯೇಕ ಕಚೇರಿ ಅವಶ್ಯಕವೆಂದು ರೈತರು ಮತ್ತು ಕೃಷಿ ಸಂಘಟನೆಗಳು ಒತ್ತಾಯಿಸುತ್ತಿವೆ. ಕೃಷಿ ಇಲಾಖೆಯ ಅನೇಕ ಸೇವೆಗಳಿಗಾಗಿ ಪಕ್ಕದ ತಾಲ್ಲೂಕ ಬಸವಕಲ್ಯಾಣ ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಸಮಯ–ಹಣ ವ್ಯಯವಾಗುವುದಲ್ಲದೆ, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಮಣ್ಣು ಪರೀಕ್ಷೆ, ಬೀಜ–ಗೊಬ್ಬರ ವಿತರಣಾ ಮೇಲ್ವಿಚಾರಣೆ, ಕೃಷಿ ಯಂತ್ರೋಪಕರಣಗಳ ಸಹಾಯಧನ ಸೇರಿದಂತೆ ಹಲವಾರು ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಹವಾಮಾನ ಬದಲಾವಣೆ, ಕೀಟ–ರೋಗಗಳ ಹಾವಳಿ ಹಾಗೂ ಮಾರುಕಟ್ಟೆ ಅಸ್ಥಿರತೆಯ ನಡುವೆ ರೈತರಿಗೆ ಸ್ಥಳೀಯ ಮಟ್ಟದಲ್ಲೇ ತಾಂತ್ರಿಕ ಸಲಹೆ ದೊರೆಯುವುದು ಅತ್ಯಂತ ಅಗತ್ಯವಾಗಿದೆ. ತಾಲ್ಲೂಕು ಕೇಂದ್ರದಲ್ಲೇ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಸ್ಥಾಪನೆಯಾದಲ್ಲಿ ರೈತರಿಗೆ ಇಲಾಖೆಯ ಸೇವೆಗಳು ಸುಲಭವಾಗಿ ಲಭ್ಯವಾಗುತ್ತವೆ. ಯೋಜನೆಗಳ ಮಾಹಿತಿ, ಅರ್ಜಿ ಪ್ರಕ್ರಿಯೆ, ಬೆಳೆ ಸಮೀಕ್ಷೆ ಸೇರಿ ಕೃಷಿ ವಿಸ್ತರಣಾ ಚಟುವಟಿಕೆಗಳಿಗೆ ವೇಗ ಸಿಗಲಿದೆ ರೈತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆತು, ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.
ಕೆಲಸ ನಿರ್ವಹಿಸದ ಕೃಷಿ ಸಂಜೀವಿನಿ
ರೈತರಿಗೆ ತುರ್ತು ಸಹಾಯವಾಗಬೇಕಾದ ‘ಕೃಷಿ ಸಂಜೀವಿನಿ’ ಯೋಜನೆ ಹಲವೆಡೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವ ಆರೋಪಗಳು ಕೇಳಿಬಂದಿವೆ. ಬೆಳೆ ರೋಗ–ಕೀಟ ಹಾವಳಿ, ಮಣ್ಣು ಪರೀಕ್ಷೆ, ತಾಂತ್ರಿಕ ಸಲಹೆ ನೀಡುವ ಉದ್ದೇಶದೊಂದಿಗೆ ಆರಂಭವಾದ ಈ ಸೇವೆ, ಸಮಯಕ್ಕೆ ಸ್ಪಂದಿಸದ ಕಾರಣದಿಂದ ರೈತರ ನಿರೀಕ್ಷೆಗಳನ್ನು ಈಡೇರಿಸಿಲ್ಲ.
ಗ್ರಾಮೀಣ ಭಾಗಗಳಲ್ಲಿ ರೈತರು ಸಂಪರ್ಕಿಸಿದರೂ ತಕ್ಷಣ ಸ್ಥಳಕ್ಕೆ ಭೇಟಿ ನೀಡುವುದಿಲ್ಲ. ಪರಿಣಾಮ ರೋಗ ವ್ಯಾಪಕವಾಗಿ ಹರಡಿ, ಉತ್ಪಾದನೆ ಕುಸಿತವಾಗುತ್ತಿದೆ .ಸಂಜೀವಿನಿ ವಾಹನ ಬರಲು ದಿನಗಳು ಕಳೆಯುತ್ತವೆ. ಆಗಾಗಲೇ ಬೆಳೆ ಹಾನಿಯಾಗಿರುತ್ತದೆ,” ಎಂದು ರೈತರು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ತಕ್ಷಣ ಕ್ರಮ ಕೈಗೊಂಡು ಸಂಜೀವಿನಿ ಸೇವೆಯನ್ನು ಚುರುಕುಗೊಳಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
ಹುಲಸೂರ ಭಾಗದ ರೈತರ ಬೇಡಿಕೆ ನ್ಯಾಯಸಮ್ಮತವಾಗಿದೆ. ಈ ಕುರಿತು ಕೃಷಿ ಇಲಾಖೆಯೊಂದಿಗೆ ಚರ್ಚಿಸಿ, ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಹಾಗೂ ರೈತರಿಗೆ ಸರ್ಕಾರದ ಯೋಜನೆಗಳು ಸುಲಭವಾಗಿ ತಲುಪಬೇಕಾದರೆ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಅನಿವಾರ್ಯ. ಈ ಸಂಬಂಧ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಮಂಜೂರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು,- ಶರಣು ಸಲಗರ ( ಶಾಸಕರು, ಹುಲಸೂರ & ಬಸವಕಲ್ಯಾಣ ತಾಲ್ಲೂಕ )
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.