ADVERTISEMENT

‘ಅಧ್ಯಾತ್ಮ ಸಂಪತ್ತು ಶಾಶ್ವತ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಮೇ 2025, 16:15 IST
Last Updated 22 ಮೇ 2025, 16:15 IST
ಹುಲಸೂರ ಸಮೀಪದ ಮೇಹಕರ ಕಟ್ಟಿಮನಿ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯರ ಪಟ್ಟಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು 
ಹುಲಸೂರ ಸಮೀಪದ ಮೇಹಕರ ಕಟ್ಟಿಮನಿ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯರ ಪಟ್ಟಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು     

ಹುಲಸೂರ: ‘ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಮುಖ್ಯ. ಅಧ್ಯಾತ್ಮ ಸಂಪತ್ತು ಶಾಶ್ವತ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಗುರುವಾರ ಸಮೀಪದ ಮೇಹಕರ ಕಟ್ಟಿಮನಿ ಸಂಸ್ಥಾನ ಹಿರೇಮಠದ ರಾಜೇಶ್ವರ ಶಿವಾಚಾರ್ಯರ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ರೇಣುಕಾಚಾರ್ಯರು ಅಧ್ಯಾತ್ಮದ ತರಂಗಗಳನ್ನು ಜೀವಾತ್ಮನ ಉನ್ನತಿಗಾಗಿ ಬೋಧಿಸಿದ್ದಾರೆ. ರಾಜೇಶ್ವರ ಶ್ರೀಗಳು ಒಳ್ಳೆಯದನ್ನು ಉಳಿಸುವ ಪ್ರಯತ್ನದಲ್ಲಿ ಶ್ರಮವಹಿಸಿ ಸಾಧನೆ ಮಾಡಿದ್ದಾರೆ. ಧಾರ್ಮಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಚಿಂತಿಸುತ್ತಿರುವ ಶ್ರೀಗಳ ಕಾರ್ಯ ಎಲ್ಲರ ಮಚ್ಚುಗೆಗೆ ಪಾತ್ರವಾಗಿದೆ. ಇಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀಗಳು ಮುಂದೊಂದು ದಿನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಲಿ’ ಎಂದು  ರೇಷ್ಮೆ ಮಡಿ, ಚಿನ್ನದುಂಗುರ, ಸ್ಮರಣಿಕೆ ಫಲ ಪುಷ್ಪ ನೀಡಿ ಹಾರೈಸಿದರು.

ADVERTISEMENT

ಸಂಸದ ಸಾಗರ ಖಂಡ್ರೆ ಮಾತನಾಡಿದರು. 

ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ‘ಇಂದು ನಮ್ಮ ಜೀವನದ ಅವಿಸ್ಮರಣೀಯವಾದ ಪವಿತ್ರ ದಿನ.ಪೂರ್ವಜರು ಮಾಡಿದ ತಪಸ್ಸಿನ ಶಕ್ತಿ ನಮ್ಮನ್ನು ಈ ಎತ್ತರಕ್ಕೆ ಬೆಳೆಸಿದೆ’ ಎಂದರು.  

ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ರಾಜೇಶ್ವರ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು. ಹಲಬುರ್ಗಾ ಹಾವಣಿ ಲಿಂಗೇಶ್ವರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಲಾಡಗೇರಿ ಶ್ರೀಗಳು, ಹುಡುಗಿ ವಿರಕ್ತಮಠ, ಕಿಟ್ಟಾ, ಸಾಯಿಗಾಂವ, ಸಿಂಧನಕೇರಾದ ಚಿದಾನಂದ ಶ್ರೀಗಳು ಮತ್ತು ಚರದಿಪುರದ ಅವಧೂತ ದತ್ತಗಿರಿ ಮಹಾರಾಜರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀಗಳವರ ಮಾತೋಶ್ರೀ ವನದೇವಿ ಸುರೇಶಸ್ವಾಮಿ ಹಿರೇಮಠ ಇವರ ಜನ್ಮ ಶತಮಾನೋತ್ಸವ ಆಚರಿಸಲಾಯಿತು. ಶ್ರೀ ಬಾಳೆಹೊನ್ನೂರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಸಿದ್ದೀರಯ್ಯಸ್ವಾಮಿ ಹಿರೇಮಠ ನಿರೂಪಿಸಿದರು.

ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. 

ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದಲ್ಲಿ ರಾಜೇಶ್ವರ ಶಿವಾಚಾರ್ಯರ ಗುರುಪಟ್ಟಾಭಿಷೇಕದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.