ಜನವಾಡ: ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಸ್ಮರಣಾರ್ಥ ನಾಲ್ಕನೇ ಮುಕ್ತ ಕ್ರಿಕೆಟ್ ಟೂರ್ನಿ ಬೀದರ್ ತಾಲ್ಲೂಕಿನ ಸಾತೋಳಿಯಲ್ಲಿ ಮಂಗಳವಾರ ಆರಂಭಗೊಂಡಿತು.
ಟೂರ್ನಿಯ ಆಯೋಜಕರೂ ಆದ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್ ಬ್ಯಾಟ್ ಬೀಸುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು.
‘ಎನ್.ಧರ್ಮಸಿಂಗ್ ಅವರು ಶಾಸಕ, ಸಂಸದ, ಸಚಿವ ಹಾಗೂ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಬಡವರು, ದೀನ ದಲಿತರು, ಶೋಷಿತರು ಸೇರಿದಂತೆ ಸರ್ವರ ಏಳಿಗೆಗಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದರು’ ಎಂದು ಅವರು ತಿಳಿಸಿದರು.
‘ಧರ್ಮಸಿಂಗ್ ಅವರ ಜನ್ಮದಿನದ ಸಂದರ್ಭದಲ್ಲಿ ಪ್ರತಿ ವರ್ಷ ಅವರ ಸ್ಮರಣಾರ್ಥ ಕ್ರಿಕೆಟ್ ಟೂರ್ನಿ ಆಯೋಜಿಸುತ್ತ ಬರಲಾಗುತ್ತಿದೆ. ಈ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಪ್ರೋತ್ಸಾಹವನ್ನೂ ನೀಡಲಾಗುತ್ತಿದೆ’ ಎಂದು ತಿಳಿಸಿದರು.
‘ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಹಾಗೂ ₹ 25 ಸಾವಿರ ನಗದು ಮತ್ತು ರನ್ನರ್ ಅಪ್ ತಂಡಕ್ಕೆ ₹15 ಸಾವಿರ ನಗದು ಬಹುಮಾನ ಕೊಡಲಾಗುವುದು’ ಎಂದು ಹೇಳಿದರು.
‘ಲೀಗ್ ಹಂತದಿಂದ ಫೈನಲ್‌ವರೆಗೂ ಪ್ರತಿ ಪಂದ್ಯದ ಉತ್ತಮ ಆಟಗಾರನಿಗೆ ಪಂದ್ಯಪುರುಷ, ಸರಣಿ ಶ್ರೇಷ್ಠ, ಟೂರ್ನಿಯ ಅತ್ಯುತ್ತಮ ಬ್ಯಾಟ್ಸ್‌ಮನ್, ಬೌಲರ್ ಹಾಗೂ ಫೀಲ್ಡರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಫ್ರೋಜ್‌ಖಾನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಬರೂರ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಅಜಮತ್ ಪಟೇಲ್, ಪರ್ವೇಜ್ ಕಮಲ್ ಹಾಗೂ ಗೌಸೊದ್ದಿನ್ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.