ADVERTISEMENT

ಪ.ಪೂ.ಕಾಲೇಜಿನಲ್ಲೇ ಬೀದಿ ನಾಯಿಗಳ ಹಾವಳಿ, ಮನವಿಗೆ ಸ್ಪಂದಿಸದ ನಗರಸಭೆ ಅಧಿಕಾರಿಗಳು

ಚಂದ್ರಕಾಂತ ಮಸಾನಿ
Published 17 ಜನವರಿ 2022, 19:30 IST
Last Updated 17 ಜನವರಿ 2022, 19:30 IST
ಬೀದರ್‌ನ ರಾವ್‌ತಾಲೀಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಪಾಳು ಬಿದ್ದ ಕಟ್ಟಡ
ಬೀದರ್‌ನ ರಾವ್‌ತಾಲೀಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಪಾಳು ಬಿದ್ದ ಕಟ್ಟಡ   

ಬೀದರ್: ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲೇ ಬೀದಿ ನಾಯಿಗಳ ಹಿಂಡು, ಆವರಣದಲ್ಲಿ ಕುರಿ, ಮೇಕೆಗಳ ಓಡಾಟ, ಸಿಸಿಟಿವಿ ಕ್ಯಾಮೆರಾ, ಮರ್ಕೂರಿ ಬಲ್ಬ್‌, ಸಾಮಾನ್ಯ, ಬಲ್ಬ್, ಗೋಡೆಯ ವೈರಿಂಗ್ ಕಿತ್ತು ಕಳ್ಳತನ, ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸಾಧ್ಯವಾಗದಷ್ಟು ಕತ್ತಲೆ ಕೋಣೆಗಳು...

ಹೌದು! ಇದು ಜಿಲ್ಲಾ ಕೇಂದ್ರವಾದ ಬೀದರ್‌ ನಗರದ ರಾವ್‌ತಾಲೀಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ದುಃಸ್ಥಿತಿ. ನಿರ್ವಹಣೆ ಇಲ್ಲದೆ ಮೂರು ಕಟ್ಟಡಗಳು ಹಾಳು ಬಿದ್ದಿವೆ. ಕಳ್ಳರು ರಾತ್ರಿ ವೇಳೆ ಕೊಠಡಿಯ ಬಾಗಿಲುಗಳನ್ನು ಮುರಿದು ಸಾಗವಾನಿ ಪೀಠೋಪಕರಣಗಳನ್ನೇ ಹೊತ್ತು ಒಯ್ಯುತ್ತಿದ್ದಾರೆ. ಹಳೆಯ ಕಟ್ಟಡಗಳು ಬಿರುಕು ಬಿಟ್ಟಿವೆ. ಒಂದು ಸಭಾಂಗಣದ ಬಾಗಿಲು ಕಿತ್ತು ಒಯ್ದಿದ್ದಾರೆ. ಕಟ್ಟಡದ ಮೇಲಿರುವ ಸಿಮೆಂಟ್‌ ಚಾವಣಿಗಳಿಗೆ ತೂತು ಬಿದ್ದಿದ್ದು, ಮಳೆ ಬಂದರೆ ಕೊಠಡಿಯೊಳಗೆ ನೀರು ಸುರಿಯುತ್ತಿದೆ.

ಕಾಲೇಜಿನಲ್ಲಿ ಸಾವಿರಾರು ಪುಸ್ತಕಗಳು ಇದ್ದರೂ ಅವುಗಳನ್ನು ಇಡಲು ಜಾಗವಿಲ್ಲ. ಪುಸ್ತಕ ಇಡುವ ರ್‍ಯಾಕ್‌ಗಳು ಮೂಲೆ ಸೇರಿವೆ. ಕಾಲೇಜಿಗೆ ಬರುವ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೈಯಲ್ಲಿ ಕಲ್ಲು ಹಿಡಿದುಕೊಂಡೇ ಬರಬೇಕು. ಇಲ್ಲದಿದ್ದರೆ ನಾಯಿ ದಾಳಿ ಮಾಡುವುದು ಖಚಿತ.

ADVERTISEMENT

‘ಕಾಲೇಜಿಗೆ ಪಾಠ ಮಾಡಲು ಭಯದಿಂದಲೇ ಬರುತ್ತಿದ್ದೇವೆ. ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಪ್ರಾಚಾರ್ಯರ ಮೂಲಕ ನಗರಸಭೆ ಆಯುಕ್ತರಿಗೆ ಅನೇಕ ಬಾರಿ ಲಿಖಿತ ಮನವಿ ಸಲ್ಲಿಸಿದ್ದೇವೆ. ಆದರೆ, ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಉಪನ್ಯಾಸಕಿಯರು ತಮ್ಮ ಅಳಲು ತೋಡಿಕೊಂಡರು.

‘ಕಾಲೇಜಿನ ಕಟ್ಟಡ ಬಹಳ ಹಳೆಯದ್ದಾಗಿವೆ. ಕಟ್ಟಡದೊಳಗೆ ಬರುವ ನಾಯಿಗಳನ್ನು ಓಡಿಸುವುದೇ ನಿತ್ಯದ ಕೆಲಸವಾಗಿದೆ. ಇಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ರಾತ್ರಿ ವೇಳೆಯಲ್ಲಿ ಕಾಲೇಜಿನ ಕೊಠಡಿಗಳ ಬೀಗ ಒಡೆದು ಕಳ್ಳತನ ಮಾಡುವುದು ಮುಂದುವರಿದಿದೆ. ಸರ್ಕಾರ ಒಬ್ಬ ಕಾವಲುಗಾರನನ್ನು ನೇಮಕ ಮಾಡಿದರೆ ಅನುಕೂಲವಾಗಲಿದೆ’ ಎಂದು ಉಪನ್ಯಾಸಕರು ಹೇಳಿದರು.

ಸಹಾಯಕರಿಲ್ಲದ ಕಾರಣ ಪ್ರಯೋಗಾಲಯ ಪಾಳು ಬಿದ್ದಿದೆ, ಕಟ್ಟಡ ಶಿಥಿಲಗೊಂಡು ಬೀಳುವ ಹಂತ ತಲುಪಿವೆ. ಎಲ್ಲವನ್ನೂ ಉಪನ್ಯಾಸಕರೇ ಮಾಡಬೇಕಾದ ಸ್ಥಿತಿ ಇದೆ. ಕೆಟ್ಟದಾದ ಪರಿಸ್ಥಿತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕಿ ಹೇಳಿದರು.

‘ಕಾಲೇಜು ಕೊಠಡಿಗಳಲ್ಲಿ ಸಾಕಷ್ಟು ಬೆಳಕು ಹಾಗೂ ಗಾಳಿ ಇಲ್ಲ. ಕತ್ತಲಲ್ಲಿ ಕುಳಿತು ಪಾಠ ಆಲಿಸಬೇಕಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಗ್ರಂಥಾಲಯ ಇಲ್ಲ, ಗ್ರಂಥಪಾಲಕರ ಹುದ್ದೆ ಖಾಲಿ ಇದೆ. ಉತ್ತಮ ಉಪನ್ಯಾಸಕರಿದ್ದರೂ ಸರಿಯಾದ ಕಟ್ಟಡಗಳೇ ಇಲ್ಲ. ಒಳಗೆ ಕುಳಿತರೆ ಓದಲು ಮನಸ್ಸು ಬರುವುದಿಲ್ಲ’ ಎಂದು ವಿದ್ಯಾರ್ಥಿಗಳಾದ ಸಂಗಮೇಶ ಎಸ್‌ ಹಾಗೂ ಮಾಣಿಕ ಪ್ರಭು ಬೇಸರ ತೋಡಿಕೊಂಡರು.

‘ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳಲ್ಲಿ ರಾಜಕೀಯ ಮುಖಂಡರ ಹೇಳಿಕೆಗಳು ದೊಡ್ಡ ದೊಡ್ಡದಾಗಿ ಬರುತ್ತಿವೆ. ಇಲ್ಲಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಗೋಳನ್ನು ಕೇಳುವವರೇ ಇಲ್ಲವಾಗಿದ್ದಾರೆ. ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಒಮ್ಮೆ ನಮ್ಮ ಕಾಲೇಜಿಗೆ ಬಂದು ಇಲ್ಲಿನ ದುಃಸ್ಥಿತಿ ನೋಡಲಿ’ ಎಂದು ಮನವಿ ಮಾಡಿದರು.

ಸರ್ಕಾರ ಇದೆಯೋ, ಸತ್ತಿದೆಯೋ ಒಂದೂ ಅರ್ಥವಾಗುತ್ತಿಲ್ಲ. ಕಳಪೆ ವ್ಯವಸ್ಥೆ ಇದ್ದರೆ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದಿಲ್ಲ. ಖಾಸಗಿ ಕಾಲೇಜುಗಳಲ್ಲಿ ಡೋನೆಷನ್‌ ಕೊಡಲಾಗದ ಬಡ ವಿದ್ಯಾರ್ಥಿಗಳೇ ಇಲ್ಲಿ ಪ್ರವೇಶ ಪಡೆದಿದ್ದಾರೆ. ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಓಲ್ಡ್‌ಸಿಟಿಯಲ್ಲಿ 1972ರಲ್ಲಿ ಕಾಲೇಜು ಆರಂಭವಾಗಿದೆ. ಪ್ರಸ್ತುತ ಇಲ್ಲಿ ಕಲಾ ವಿಭಾಗದಲ್ಲಿ 91, ವಾಣಿಜ್ಯ ವಿಭಾಗದಲ್ಲಿ 38 ಹಾಗೂ ವಿಜ್ಞಾನ ವಿಭಾಗದಲ್ಲಿ 129 ವಿದ್ಯಾರ್ಥಿಗಳು ಸೇರಿ ಒಟ್ಟು 258 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 14 ಉಪನ್ಯಾಸಕರು, ಒಬ್ಬರು ಎಫ್‌ಡಿಎ, ಎಸ್‌ಡಿಎ ಹಾಗೂ ಸೇವಕ ಇದ್ದಾರೆ. ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಶೌಚಾಲಯ ಇದ್ದರೂ ವಿದ್ಯಾರ್ಥಿಗಳು ಪುರಾತನ ಪಾಳುಬಿದ್ದ ಘೋಡಾಖಾನದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

‘ಈಚೆಗೆ ಅಧಿಕಾರ ವಹಿಸಿಕೊಂಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕಾಲೇಜಿಗೆ ಬಂದು ಭೇಟಿ ಕೊಟ್ಟು ಹೋಗಿದ್ದಾರೆ. ಬೀದಿ ನಾಯಿಗಳ ಹಾವಳಿ ತಡೆಯಲು ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಪತ್ರ ಕೊಡಲಾಗಿದೆ’ ಎಂದು ಪ್ರಾಚಾರ್ಯ ಮಲ್ಲಿಕಾರ್ಜುನ ಲದ್ದೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.