ಚಿಟಗುಪ್ಪ (ಹುಮನಾಬಾದ್): ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಾಲ್ಲೂಕಿನ ನಿರ್ಣಾ ಗ್ರಾಮದ ಹೊರವಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕೀಯರ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
₹18 ಕೋಟಿ ವೆಚ್ಚದಲ್ಲಿ ಈ ವಸತಿ ನಿಲಯದ ಕಟ್ಟಡ ನಿರ್ಮಾಣ ಆಗಲಿದೆ. ಕಟ್ಟಡದ ನಿರ್ಮಾಣಕ್ಕೆ ಈ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಆಗಿತ್ತು. ಅದರಂತೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಪ್ರಯತ್ನ ಪಟ್ಟು ಈ ಅನುದಾನ ತರಲಾಗಿದೆ ಎಂದರು.
ಕಟ್ಟಡವು ಒಂದುವರೆ ವರ್ಷದ ಒಳಗಾಗಿ ಮುಗಿಸಬೇಕು. ಗುಣಮಟ್ಟದಿಂದ ಕೂಡಿರಬೇಕು. ಕಳಪೆ ಕಾಮಗಾರಿ ಕಂಡು ಬಂದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರು ಸಹ ಈ ಕಟ್ಟಡ ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸಿ. ಇದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಜಮೀನುಗಳಿಗೆ ತೆರಳಲು ರಸ್ತೆ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ₹25 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ, ಹನುಮಾನ ದೇವಸ್ಥಾನದ ಹತ್ತಿರದ ಸಮುದಾಯ ಭವನಕ್ಕೆ ₹10 ಲಕ್ಷ, 12 ಹೈಮಾಸ್ಟ್ ದೀಪ ನೀಡಿದ್ದೇನೆ. ಇನ್ನು ನಾಲ್ಕು ಹೈಮಾಸ್ಟ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂಜು ಕಿರಣ್ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಜೋಗಣಿ, ಪಿಡಿಒ ಬಸವರಾಜ, ಮಾಣಿಕಪ್ಪ ಖಾಶಂಪೂರ್, ಶ್ರೀನಿವಾಸ ಫತ್ತರ್, ರವಿ ಸ್ವಾಮಿ, ಶಿವರಾಜ ಬಶಟ್ಟಿ, ಸತೀಶ್ ತೆಳಮನಿ, ಚೆನ್ನಬಸಪ್ಪ ಬುಳ್ಳಾ, ಮಲ್ಲಿಕಾರ್ಜುನ ಅತಿವಾಳ, ಬಸವರಾಜ ವಗ್ದಾಳ, ಮಲ್ಲಿಕಾರ್ಜುನ ಬೆಡಸೂರ್, ದಿಲೀಪ್ ಪಸಾರೆ, ಶಿವಾನಂದ ಕುಡಂಬಲ್, ಶಿವಕುಮಾರ್ ಮೈಲೂರ , ಅರುಣ್ ಬಾವಗಿ, ಚೆನ್ನಬಸಪ್ಪ ಬುಳ್ಳಾ, ಜಗನ್ನಾಥ ಮಜಗೆ, ಶರಣು ಪಾಟೀಲ, ಚಂದ್ರಯ್ಯಾ ಸ್ವಾಮಿ, ಲಾಲಪ್ಪ ಸೇರಿದಂತ ಇತರರು ಇದ್ದರು.
ನಿರ್ಣಾ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಕಾಯಂ ವೈದ್ಯರು ಇಲ್ಲದ ಕಾರಣ ತೀವ್ರ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಎದುರು ಗೋಳು ತೋಡಿಕೊಂಡರು. ನಿರ್ಣಾ ಆಸ್ಪತ್ರೆಯ ಮೇಲೆ ನೂರಾರು ಬಡ ಜನರು ಅವಲಂಬಿತರಾಗಿದ್ದಾರೆ. ಹೀಗಾಗಿ ಕಾಯಂ ವೈದ್ಯರನ್ನು ತಕ್ಷಣ ನೇಮಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಪ್ರತಿಕ್ರಿಯಿಸಿ, ಈ ಬಗ್ಗೆ ಈಗಾಗಲೇ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೂ ತಾಲ್ಲೂಕು ಆರೋಗ್ಯಾಧಿಕಾರಿ ಅವರಿಗೆ ಸಂಚಾರ ಮಾಡಲು ಒಂದು ವಾಹನ ಸಹ ನೀಡುತ್ತಿಲ್ಲ. ಏನು ಮಾಡಲಿ ಹೇಳಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ. ನಾವು ಹೇಳಿದ ಕೆಲಸ ಅವರು ಮಾಡುತ್ತಿಲ್ಲ. ಬರಿ ರಾಜಕೀಯ ಮಾಡುತ್ತಾರೆ. ತಿಂಗಳು ಒಳಗಾಗಿ ಕಾಯಂ ವೈದ್ಯರನ್ನು ನಿಯೋಜನೆ ಮಾಡದಿದ್ದರೆ, ನಾನೂ ನಿಮ್ಮೊಂದಿಗೆ ನಿರ್ಣಾ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರುಗಡೆ ಪ್ರತಿಭಟನೆ ಮಾಡುತ್ತೇನೆ’ ಎಂದರು.
ಪಿಡಿಒ ಜನರ ಸಮಸ್ಯೆ ಆಲಿಸಿ: ನಿರ್ಣಾ ಮತ್ತು ನಿರ್ಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ದೀಪ ಪಂಚಾಯಿತಿ ಅವರು ಅಳವಡಿಸಿಕೊಳ್ಳಬೇಕು. ಜನರು ಬೀದಿ ದೀಪ ಇಲ್ಲ ಅಂತ ನನ್ನಗೆ ಕೇಳುವಂತೆ ಆಗಬಾರದು. ನೀವು ಏನು ಮಾಡುತ್ತಿದ್ದೀರಿ. ಹಾಳಾದ ದೀಪಗಳ ಪರಿಶೀಲನೆ ನಡೆಸಿ ತಕ್ಷಣ ರಿಪೇರಿ ಮಾಡಿಸಿ. ಗ್ರಾಮಗಳಲ್ಲಿ ಮಳೆಗಾಲ ಇರುವುದರಿಂದ ನೈರ್ಮಲ್ಯ ಸಮಸ್ಯೆ ಹೆಚ್ಚಾಗಿ ಇರಲಿದೆ. ಗ್ರಾಮಗಳ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು. ಪಿಡಿಒ ಅವರು ಬಡಾವಣೆಗಳಿಗೆ ಭೇಟಿ ನೀಡಬೇಕು. ಗಂಭೀರವಾಗಿದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.