ADVERTISEMENT

ನುಶಿ ತೆಗೆದು ಅನ್ನ ತಿನ್ನಿ!: ಶಿಕ್ಷಕರ ಉಡಾಫೆ ಉತ್ತರಕ್ಕೆ ವಿದ್ಯಾರ್ಥಿಗಳ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 14:31 IST
Last Updated 14 ಡಿಸೆಂಬರ್ 2018, 14:31 IST
ಬೀದರ್‌ನಲ್ಲಿ ಶುಕ್ರವಾರ ಮಕ್ಕಳ ಹಕ್ಕುಗಳ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಬೀದರ್‌ನಲ್ಲಿ ಶುಕ್ರವಾರ ಮಕ್ಕಳ ಹಕ್ಕುಗಳ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್‌: ಬಿಸಿಯೂಟದಲ್ಲಿ ಹುಳು ಇದ್ದರೂ ಶಿಕ್ಷಕರು ಹಾಗೆಯೇ ತಿನ್ನುವಂತೆ ಒತ್ತಡ ಹಾಕುತ್ತಿದ್ದಾರೆ. ಶಿಕ್ಷಕರು ಇಂಗ್ಲಿಷ್‌ ಪಾಠ ಮಾಡುತ್ತಿಲ್ಲ. ಪ್ರೌಢ ಶಾಲೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಹಾಗೂ ಶಾಲೆಯ ಮುಂಭಾಗದಲ್ಲಿ ನಿಂತು ಹುಡುಗಿಯರನ್ನು ಚುಡಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮ ಸಭೆಯಲ್ಲಿ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ನಮ್ಮ ಗೋಳು ಯಾರ ಮುಂದೆ ತೋಡಿಕೊಳ್ಳಬೇಕು...?

ಹೀಗೆಂದು ನಗರದಲ್ಲಿ ಶುಕ್ರವಾರ ಜಿಲ್ಲೆಯ ಎಂಟು ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಪ್ರತಿನಿಧಿಗಳು ಮಾಧ್ಯಮ ಪ್ರತಿನಿಧಿಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

ಬೀದರ್ ತಾಲ್ಲೂಕಿನ ಚಟ್ನಳ್ಳಿ ಪ್ರೌಢಶಾಲೆಯಲ್ಲಿ ಆಹಾರಧಾನ್ಯ ಸ್ವಚ್ಛ ಮಾಡದೆ ಬಿಸಿಯೂಟ ಸಿದ್ಧಪಡಿಸುತ್ತಿದ್ದಾರೆ. ನುಶಿ ಇರುವ ಅನ್ನ ಬೇಯಿಸಿ ಕೊಡುತ್ತಿದ್ದಾರೆ. ಬಿಸಿಯೂಟ ತಯಾರಕರು ಹಾಗೂ ಶಿಕ್ಷಕರ ಗಮನಕ್ಕೆ ತಂದರೆ ನುಶಿ ತೆಗೆದು ಊಟ ಮಾಡಿ ಎಂದು ಸೂಚಿಸುತ್ತಿದ್ದಾರೆ. ಒಮ್ಮೊಮ್ಮೆ ಬೇಳೆ ಸಾರು ಕೊಡುತ್ತಿಲ್ಲ. ಇಂತಹ ಊಟ ಮಾಡಲು ನಿರಾಕರಿಸುವ ಮಕ್ಕಳನ್ನು ಗದರಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಪ್ರೌಢಶಾಲೆಯ ಮೇಲೆ ಇದ್ದ ಸಿಂಟೆಕ್ಸ್‌ ಅನ್ನು ಗ್ರಾಮದ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಶೌಚಾಲಯಕ್ಕೆ ನೀರು ಇಲ್ಲವಾಗಿದೆ. ನವೆಂಬರ್‌ನಲ್ಲಿ ನಡೆದ ಗ್ರಾಮಸಭೆಯಲ್ಲಿ ಪೊಲೀಸರು ಹಾಜರಿರಲಿಲ್ಲ. ಸಂಬಂಧಪಟ್ಟವರು ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ. ಮಕ್ಕಳ ಗ್ರಾಮಸಭೆಯಲ್ಲಿ ವಿಷಯ ತಿಳಿಸಿದರೂ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚಟ್ನಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಾಡವಾದ ಸರ್ಕಾರಿ ಪ್ರೌಢಶಾಲೆಗೆ ಪ್ರವೇಶ ಪಡೆಯಲು ಬಂದಾಗ ಹಿಯಾಳಿಸುತ್ತಿದ್ದಾರೆ. ಇಂಗ್ಲಿಷ್ ಬಾರದಿದ್ದರೆ ನಮ್ಮ ಶಾಲೆಯಲ್ಲಿ ಪ್ರವೇಶ ಪಡೆಯಬೇಡಿ ಎನ್ನುತ್ತಿದ್ದಾರೆ. ಚಟ್ನಳ್ಳಿ ಶಾಲೆಯಲ್ಲಿ ಅನೇಕ ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರೇ ಇಲ್ಲ. ಶಿಕ್ಷಕರು ಇಲ್ಲದಿದ್ದರೆ ನಾವು ಹೇಗೆ ಇಂಗ್ಲಿಷ್‌ ಕಲಿಯಬೇಕು ಎಂದು ಪ್ರಶ್ನಿಸಿದರು.

ಕಪಲಾಪುರದಲ್ಲಿ ಮಕ್ಕಳ ಗ್ರಾಮಸಭೆಯನ್ನೇ ಮಾಡುತ್ತಿಲ್ಲ. ಅಧಿಕಾರಿಗಳಿಗೆ ಮನವಿ ಮಾಡಿದರೂ ಅದನ್ನು ಕಡೆಗಣಿಸುತ್ತಿದ್ದಾರೆ. ನಮ್ಮೂರಿನ ಶಾಲೆಗಳಿಗೆ ಶೌಚಾಲಯ, ನೀರು ಹಾಗೂ ಆಟದ ಮೈದಾನ ಇಲ್ಲ. ಸೌಲಭ್ಯಗಳಿಲ್ಲದೆ ಶೈಕ್ಷಣಿಕ ಸಾಧನೆ ಹೇಗೆ ಮಾಡಬೇಕು. ಸರ್ಕಾರಿ ಶಾಲೆಯ ಮಕ್ಕಳನ್ನು ಕೀಳು ಭಾವನೆಯಿಂದ ನೋಡುವುದು ನಿಲ್ಲಬೇಕು. ಜಿಲ್ಲಾಧಿಕಾರಿ ಬೀದರ್‌ನಲ್ಲಿ ಮಕ್ಕಳ ಸಭೆ ಕರೆದು ನಮ್ಮ ಸಮಸ್ಯೆ ಆಲಿಸಬೇಕು. ನಾವು ಯಾವುದೇ ವೇದಿಕೆಯಲ್ಲೂ ಧೈರ್ಯದಿಂದ ಹೇಳಲು ಸಿದ್ಧರಿದ್ದೇವೆ ಎಂದು ಹೇಳಿದರು.

ಮುಖಂಡರು ಹಾಗೂ ಅಧಿಕಾರಿಗಳು ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಂದು ಭಾಷಣ ಮಾಡಿ ಹೋಗುತ್ತಾರೆ. ಆದರೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುತ್ತಿಲ್ಲ. ಹಿಂದೆ ಶಾಸಕರಾಗಿದ್ದ ಅಶೋಕ ಖೇಣಿ ಅವರಿಗೆ ಮನವಿ ಸಲ್ಲಿಸಿದ್ದೇವು. ಈಗಿನ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ತಲುಪಿಸಿದ್ದೇವೆ. ಆದರೆ, ನಮ್ಮ ಸಮಸ್ಯೆ ಬಗೆಹರಿದಿಲ್ಲ. ಮಾಧ್ಯಮ ಪ್ರತಿನಿಧಿಗಳಾದರೂ ಮಕ್ಕಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಕೆಲ ಶಿಕ್ಷಕರು ತಿಂಗಳಾದರೂ ಶಾಲೆಗೆ ಬರುತ್ತಿಲ್ಲ. ಶಿಕ್ಷಕರೇ ಶಾಲೆಗೆ ಬಾರದಿದ್ದರೆ ನಾವು ಹೇಗೆ ಶಿಕ್ಷಣ ಪಡೆಯಬೇಕು. ಕೆಲವು ಶಾಲೆಗಳಲ್ಲಿ ಇಂಗ್ಲಿಷ್‌ ಶಿಕ್ಷಕರೇ ಇಲ್ಲ. ಪ್ರಾಥಮಿಕ ಶಾಲೆಯಲ್ಲಿ ಚೆನ್ನಾಗಿ ಪಾಠ ಕಲಿಯದ ಮಕ್ಕಳಿಂದ ಪ್ರೌಢ ಶಾಲೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿಲ್ಲ. ಚಿಕ್ಕ ಮಕ್ಕಳೆಂದು ನಮ್ಮ ಮಾತು ಕಡೆಗಣಿಸಬೇಡಿ ಎಂದು ಹೇಳಿದರು.

ಮಕ್ಕಳ ಹಕ್ಕುಗಳ ಶಿಕ್ಷಣ ಹಾಗೂ ಮತ್ತು ಜಾಗೃತಿ ಆಂದೋಲನ ಅಡಿ ಶಾಲೆಗಳಲ್ಲಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ. ನಮ್ಮ ಹಕ್ಕುಗಳನ್ನು ಪಡೆಯುವ ದಿಸೆಯಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಬೀದರ್‌ ತಾಲ್ಲೂಕಿನ ಚಟ್ನಳ್ಳಿಯ ಫ್ಲೋರಿನಾ ಪ್ರಭಾಕರ್, ಪ್ರೆಸಿಲ್ಲಾ, ಮಂದಕನಹಳ್ಳಿ ಆರತಿ ಈರಪ್ಪ, ಕಾಶೆಂಪುರದ ಗೀತಾ ಅಶೋಕ, ಅಭಿಷೇಕ ವಿಶ್ವನಾಥ, ಅತಿವಾಳದ ಸ್ಟಿವನ್‌ ಸುಭಾಷ, ಸೂಸನ್ಯ, ಕಪಲಾಪುರದ ಚೈತನ್ಯ ಪ್ರಕಾಶ, ಭಾಲ್ಕಿ ತಾಲ್ಲೂಕಿನ ಧನ್ನೂರಾ(ಎಸ್‌) ಗ್ರಾಮದ ಪ್ರಿಯಾಂಕ ವಿಠ್ಠಲ್, ವರ್ಷಾರಾಣಿ ಸಂಜಯ್, ಜ್ಯಾಂತಿಯ ಆನಂದ ಚಂದ್ರಕಾಂತ, ಹಾಲಹಳ್ಳಿಯ ಸುಪ್ರಿತಾ ಹಾಗೂ ಸಂದೀಪ ಅಮೃತ್ ಮಾಧ್ಯಮಗೋಷ್ಠಿಯಲ್ಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.