ADVERTISEMENT

ಸುಷ್ಮಿತಾ ದಾಮೋದರ್‌ಗೆ 625 ಅಂಕ

​ಪ್ರಜಾವಾಣಿ ವಾರ್ತೆ
Published 20 ಮೇ 2022, 5:02 IST
Last Updated 20 ಮೇ 2022, 5:02 IST
ಸುಷ್ಮಿತಾ ದಾಮೋದರ್‌(100)
ಸುಷ್ಮಿತಾ ದಾಮೋದರ್‌(100)   

ಭಾಲ್ಕಿ: ಪಟ್ಟಣದ ವಿದ್ಯಾಭಾರತಿ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನಿ ಸುಷ್ಮಿತಾ ದಾಮೋದರ್‌ ಗಾದಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ಅತ್ಯಧಿಕ ಅಂಕ ಪಡೆದವರ ಸಾಲಿಗೆ ಸೇರಿದ್ದಾಳೆ.

ಸುಷ್ಮಿತಾರ ತಂದೆ ದಾಮೋದರ ಅವರು ಔರಾದ್‌ ತಾಲ್ಲೂಕಿನ ರಕ್ಷ್ಯಾಳ ಗ್ರಾಮದರು. ಭಾಲ್ಕಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ತಾಯಿ ಅನುರಾಧಾ ಗೃಹಿಣಿ ಆಗಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಸುಷ್ಮಿತಾ, ‘ಅಚಲ ವಿಶ್ವಾಸ, ನಿರಂತರ ಅಧ್ಯಯನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಕೋವಿಡ್ ವೇಳೆ ಶಿಕ್ಷಕರು ಆನ್‌ಲೈನ್ ತರಗತಿ ನಡೆಸಿದರು. ವಿದ್ಯಾಭ್ಯಾಸ ಸಂಬಂಧ ಸಂದೇಹಗಳನ್ನು ಪರಿಹರಿಸಿ ಆತ್ಮವಿಶ್ವಾಸ ತುಂಬಿದ್ದರು’ ಎಂದರು.

ADVERTISEMENT

ಶಾಲೆ ಆಡಳಿತ ಮಂಡಳಿ 16 ಸರಣಿ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಯ ಭಯ ಹೋಗಲಾಡಿಸಿತು. 10ನೇ ತರಗತಿಯ ಆರಂಭದಿಂದಲೇ ನಿರ್ದಿಷ್ಟ ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಿದೆ. ಪ್ರತಿ ಎರಡು ದಿನಕ್ಕೊಮ್ಮೆ ಪ್ರತಿ ವಿಷಯದ ಪೂರ್ಣ ಪಠ್ಯಕ್ರಮ ಪುನರಾವರ್ತನೆ ಮಾಡಿದೆ. ಪಿಯು ವಿಜ್ಞಾನ ವಿಭಾಗಕ್ಕೆ ಸೇರಿ, ವೈದ್ಯೆಯಾಗಿ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುವ ಆಸೆ ಇದೆ ಎಂದರು.

ವಿದ್ಯಾರ್ಥಿನಿ ಸಾಧನೆ ಸಂತಸದ ಸಂಗತಿ. ವಿದ್ಯಾರ್ಥಿಗಳ ಏಳಿಗೆಗೆ ಅಗತ್ಯ ಮೂಲಸೌಕರ್ಯ, ಗುಣಾತ್ಮಕ ಶಿಕ್ಷಣ ಒದಗಿಸಲು ಪ್ರಯತ್ನಿಸಲಾಗಿದೆ ಎಂದು ಪಬ್ಲಿಕ್‌ ಶಾಲೆ ಅಧ್ಯಕ್ಷ ರೋಹಿತ್‌ ವೈರಾಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.