
ಬೀದರ್: ಜೈ ಹಿಂದ್ ಸಂಘಟನೆಯಿಂದ ನಗರದ ಮಂಗಲಪೇಟ್‌ನಲ್ಲಿರುವ ವೃತ್ತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 129ನೇ ಜಯಂತಿ ಶನಿವಾರ ಆಚರಿಸಲಾಯಿತು.
ಜೈ ಹಿಂದ್ ಸಂಘಟನೆಯ ಅಧ್ಯಕ್ಷ ವೀರು ರೆಡ್ಡಿ ದಿಗ್ವಾಲ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುತ್ಥಳಿಗೆ ಪುಷ್ಪಾರ್ಚನೆಯಿಂದ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ನೇತಾಜಿಯವರ ತ್ಯಾಗ, ಸಮರ್ಪಣೆ ಹಾಗೂ ಶೌರ್ಯ ನಮ್ಮೆಲ್ಲರಿಗೂ ಆದರ್ಶ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕ್ರಾಂತಿಕಾರಕ ಚಿಂತನೆಗಳು, ಆಜಾದ್ ಹಿಂದ್ ಸೇನೆಯ ಮೂಲಕ ನೀಡಿದ ಹೋರಾಟ ಹಾಗೂ ಅಚಲ ದೇಶಭಕ್ತಿ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿವೆ. ಈ ವೃತ್ತವು ಮುಂದಿನ ತಲೆಮಾರಿಗೆ ದೇಶಭಕ್ತಿ, ಶಿಸ್ತು ಮತ್ತು ರಾಷ್ಟ್ರಸೇವೆಯ ಮನೋಭಾವವನ್ನು ಸದಾ ಜಾಗೃತಗೊಳಿಸುವ ಕೇಂದ್ರವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದತ್ತು ಗುತ್ತೇದಾರ್, ಡಾ. ಶಾಮರಾವ್, ಬಸಂತರಾವ ದಿಗ್ವಾಲ್, ಮಾದೇವ ದೇಶಮುಖ್, ಶೇಖ್ ಇಬ್ರಾಹಿಂ, ಜಗದೀಶ್ ಗುಮ್ಮಳ, ಹರೀಶ್ ಅನಿಲ್ ಕುಮಾರ್, ಗೋಪಾಲ್ ಕುಕ್ಕುಡಲ್, ಪ್ರಶಾಂತ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಮೇರಾ ಯುವ ಭಾರತ್, ರೈಸಿಂಗ್ ಹ್ಯಾಂಡ್ಸ್ ಯುತ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ: ಎರಡೂ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಶಿವನಗರ ಶ್ರೀ ಸಾಯಿ ಚೈತನ್ಯ ಪದವಿ ಕಾಲೇಜಿನಲ್ಲಿ ಶನಿವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದ ಅಂಗವಾಗಿ ಪರಾಕ್ರಮ ದಿನ ಆಚರಿಸಲಾಯಿತು.
ಮೇರಾ ಯುವ ಭಾರತ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರ್ಮೆ, ದಿಶಾಗುಂಪು ಸಂಸ್ಥೆಯ ಕಾರ್ಯದರ್ಶಿ ಅಭಿಷೇಕ್ ಕುಲಕರ್ಣಿ, ಆಡಳಿತಾಧಿಕಾರಿ ಪ್ರವೀಣ ಕುಲಕರ್ಣಿ, ರೈಸಿಂಗ್ ಹ್ಯಾಂಡ್ಸ್ ಯುತ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸತೀಶ್ ಎಸ್. ಬೆಳಕೋಟೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.