ADVERTISEMENT

ಬೀದರ್ | ಸಕ್ಕರೆ ಕಾರ್ಖಾನೆಗಳಿಗೆ ವಿಶೇಷ ಪ್ಯಾಕೇಜ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 5:18 IST
Last Updated 8 ಫೆಬ್ರುವರಿ 2026, 5:18 IST
ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರಿಗೆ ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಸೂರ್ಯಕಾಂತ್‌ ನಾಗಮಾರಪಳ್ಳಿ ಅವರು ಮನವಿ ಪತ್ರ ಸಲ್ಲಿಸಿದರು
ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರಿಗೆ ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಸೂರ್ಯಕಾಂತ್‌ ನಾಗಮಾರಪಳ್ಳಿ ಅವರು ಮನವಿ ಪತ್ರ ಸಲ್ಲಿಸಿದರು   

ಬೀದರ್: ಆರ್ಥಿಕ ಸಂಕಟದಲ್ಲಿ ಸಿಲುಕಿರುವ ಬೀದರ್ ಜಿಲ್ಲೆಯ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ) ಸೇರಿದಂತೆ ಕರ್ನಾಟಕದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮಾಜಿ ಪ್ರಧಾನಿಯೂ ಆದ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ ಹಾಗೂ ವಿಶೇಷ ನೆರವಿನ ಪ್ಯಾಕೇಜ್ ಘೋಷಿಸುವ ಅಗತ್ಯ ಕುರಿತಂತೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ದೇವೇಗೌಡರು ಪ್ರತ್ಯೇಕ ಪತ್ರ ಬರೆದಿದ್ದಾರೆ.

ಹಲವು ವರ್ಷಗಳಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪರಿಷ್ಕರಿಸದಿರುವುದನ್ನು ಸೂರ್ಯಕಾಂತ್ ಅವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಜೊತೆಗೆ ಪ್ರತಿ ವರ್ಷ ಕಬ್ಬಿನ ಬೆಲೆ ಹೆಚ್ಚಳವನ್ನೂ ಉಲ್ಲೇಖಿಸಿದ್ದರು. ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಕಬ್ಬಿನ ಬೆಲೆಯನ್ನೂ ಹೆಚ್ಚಿಸಲಾಗುತ್ತಿದೆ. ಆದರೆ, ಕಾರ್ಖಾನೆಗಳು ಮಾರಾಟ ಮಾಡುವ ಸಕ್ಕರೆಯ ಬೆಲೆಯನು ಪರಿಷ್ಕರಿಸದಿರುವುದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದರು.

ADVERTISEMENT

ಲಕ್ಷಾಂತರ ರೈತ ಕುಟುಂಬಗಳ, ಕೃಷಿ ಕೂಲಿಕಾರರ ಆರ್ಥಿಕತೆಗೆ ಆಧಾರ ಸ್ತಂಬವಾಗಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು ತೀವ್ರ ಸಂಕಟದಲ್ಲಿ ಸಿಲುಕಿವೆ. ದೇಶದಲ್ಲಿ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಶ್ರಮಿಸುತ್ತಿರುವ ಕೇಂದ್ರ ಸರ್ಕಾರ, ಕರ್ನಾಟಕದ ಸಹಕಾರಿ ಕ್ಷೇತ್ರದಲ್ಲಿನ ಸಕ್ಕರೆ ಕಾರ್ಖಾನೆಗಳನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ರಾಷ್ಟ್ರೀಯ ಸಹಕಾರ ಅಭಿವೃದ್ದಿ ನಿಗಮದ (ಎನ್‌ಸಿಡಿಸಿ) ಮೂಲಕ ವಿಶೇಷ ಹಣಕಾಸು ನೆರವು ಒದಗಿಸಬೇಕು ಎಂದು ಕೇಂದ್ರಕ್ಕೆ ಕೋರಿದ್ದಾರೆ.

ಎನ್‌ಎಸ್‌ಎಸ್‌ಕೆಯಲ್ಲಿ ಕಬ್ಬು ನುರಿಸುವ ಸಾಮರ್ಥ್ಯವನ್ನು 5,000 ಟನ್‌ಗೆ ಮತ್ತು ಸಹ ವಿದ್ಯುತ್ ಉತ್ಪಾದನಾ ಘಟಕದ ಸಾಮರ್ಥ್ಯವನ್ನು 20 ಮೆಗಾವ್ಯಾಟ್‌ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. 60 ಕೆಎಲ್‌ಪಿಡಿ ಸಾಮರ್ಥ್ಯದ ಡಿಸ್ಟೆಲರಿ, ಎಥೆನಾಲ್ ಘಟಕ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಬಗೆಯ ಅನುಮತಿ, ಪರವಾನಗಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಬಯೋಗ್ಯಾಸ್ ಮತ್ತು ಸೋಲಾರ್ ಪಾವರ್ ಪ್ಲಾಂಟ್ ಸ್ಥಾಪಿಸುವ ಉದ್ದೇಶವೂ ಇದೆ. ಆದಕಾರಣ ₹550 ಕೋಟಿ ನೆರವು ಕೊಡಿಸಬೇಕೆಂದು ದೇವೇಗೌಡರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.