
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಮಠಾಧೀಶರು ಯಂತ್ರಕ್ಕೆ ಕಬ್ಬು ಹಾಕುವ ಮೂಲಕ ಕಬ್ಬು ನುರಿಕೆಗೆ ಚಾಲನೆ ನೀಡಿದರು
ಜನವಾಡ: ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಮಂಗಳವಾರ ನಡೆದ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ ಕಾರ್ಖಾನೆ 3 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿತ್ತು. ಈ ಬಾರಿ ಕಬ್ಬು ನುರಿಸುವ ಹಂಗಾಮಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸರಿಯಾದ ಸಮಯಕ್ಕೆ ಸದಸ್ಯ ರೈತರ ಕಬ್ಬು ಕಾರ್ಖಾನೆಗೆ ತಲುಪಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಬ್ಬು ಸರಬರಾಜು ಮಾಡುವ ರೈತರಿಗೆ ಸಕಾಲಕ್ಕೆ ಕಬ್ಬಿನ ಹಣ ಸಂದಾಯ ಮಾಡಲಾಗುವುದು. ಜಿಲ್ಲೆಯ ರೈತರು ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕರಿಸಬೇಕು. ಯಾವುದೇ ಕಾರಣಕ್ಕೂ ನೆರೆ ರಾಜ್ಯಗಳಿಗೆ ಕಬ್ಬು ಸಾಗಿಸಬಾರದು ಎಂದರು.
ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ,‘ಉಮಾಕಾಂತ ನಾಗಮಾರಪಳ್ಳಿ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ’ ಎಂದು ಹೇಳಿದರು.
ಇದೇ ವೇಳೆ ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನವನ್ನು ಆಚರಿಸಲಾಯಿತು.
ತಡೋಳಾದ ರಾಜೇಶ್ವರ ಶಿವಾಚಾರ್ಯ, ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು. ಬರ್ದಿಪುರದ ಅವಧೂತಗಿರಿ ಮಹಾರಾಜ, ಹೆಡಗಾಪುರದ ಶಿವಲಿಂಗ ಶಿವಾಚಾರ್ಯ, ಬೇಮಳಖೇಡದ ರಾಜಶೇಖರ ಶಿವಾಚಾರ್ಯ, ಚಾಂಬೋಳದ ರುದ್ರಮುನಿ ಶಿವಾಚಾರ್ಯ, ಕಾರ್ಖಾನೆಯ ಉಪಾಧ್ಯಕ್ಷ ಬಾಲಾಜಿ ಚವಾಣ್, ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ, ರಾಜಕುಮಾರ ಕರಂಜಿ, ಸಿದ್ರಾಮ ವಾಘಮಾರೆ, ವಿಜಯಕುಮಾರ ಪಿ. ಪಾಟೀಲ, ಸಂಗಮೇಶ ಪಾಟೀಲ, ಕುಶಾಲರಾವ್ ಯಾಬಾ, ಚಂದ್ರಕಾಂತ ಹಿಪ್ಪಳಗಾಂವ್, ಸಂಜುಕುಮಾರ ಸಿದ್ದಾಪುರ, ಅಂಬ್ರೇಶ್ ನಾಗಮಾರಪಳ್ಳಿ, ಮಲ್ಲಮ್ಮ ಪಾಟೀಲ, ಶೋಭಾವತಿ ಪಾಟೀಲ, ಜಿ.ಎನ್. ಸಹಕಾರ ಆಸ್ಪತ್ರೆಯ ಅಧ್ಯಕ್ಷ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಶಶಿಕುಮಾರ ಪಾಟೀಲ ಸಂಗಮ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.