ADVERTISEMENT

ಬಸವಕಲ್ಯಾಣ | ಕಾರ್ಖಾನೆ ಕೊರತೆ: ಕಬ್ಬಿನ ಬೆಳೆ ಕ್ಷೇತ್ರ ಕುಸಿತ

ಅನ್ಯ ತಾಲ್ಲೂಕಿನ ಕಾರ್ಖಾನೆಗಳಿಂದ ನಿರ್ಲಕ್ಷ್ಯ, ಸಮಯಕ್ಕೆ ದೊರಕದ ಹಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 6:19 IST
Last Updated 20 ಏಪ್ರಿಲ್ 2024, 6:19 IST
ಬಸವಕಲ್ಯಾಣ ತಾಲ್ಲೂಕಿನ ಮಂಠಾಳ-ಗುಂಡೂರ ರಸ್ತೆಯಲ್ಲಿನ ಹೊಲದಲ್ಲಿನ ಗಾಣದಲ್ಲಿ ಬೆಲ್ಲದ ಪಾಕ ಕುದಿಸುತ್ತಿರುವುದು
ಬಸವಕಲ್ಯಾಣ ತಾಲ್ಲೂಕಿನ ಮಂಠಾಳ-ಗುಂಡೂರ ರಸ್ತೆಯಲ್ಲಿನ ಹೊಲದಲ್ಲಿನ ಗಾಣದಲ್ಲಿ ಬೆಲ್ಲದ ಪಾಕ ಕುದಿಸುತ್ತಿರುವುದು   

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳು ಇಲ್ಲದ್ದರಿಂದ ಕಬ್ಬು ಬೆಳೆ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಅನ್ಯ ತಾಲ್ಲೂಕಿಗೆ ಹಾಗೂ ಸಮೀಪದ ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಹೆಚ್ಚಿನ ಖರ್ಚು ಬರುತ್ತಿದೆ ಹಾಗೂ ಸಮಯಕ್ಕೆ ಹಣ ದೊರಕದ ಕಾರಣ ರೈತರು ಕಬ್ಬು ಬೆಳೆಯದಿದ್ದರೆ ಆಯಿತಲ್ಲ ಎಂಬ ನಿರ್ಧಾರಕ್ಕೆ ಬಂದಿರುವಂತೆ ಕಾಣುತ್ತಿದೆ.

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಇಲ್ಲಿನ ಹೆಚ್ಚಿನ ಕಬ್ಬು ಹೋಗುತ್ತಿತ್ತು. ಆದರೆ ಆ ಕಾರ್ಖಾನೆ ಬಂದ್‌ ಆಗಿದೆ. ಬಸವಕಲ್ಯಾಣ ಸಮೀಪದ ಖಾಂಡಸಾರಿ ಸಕ್ಕರೆ ಕಾರ್ಖಾನೆಯೂ ಕಬ್ಬು ನುರಿಸುವುದನ್ನು ನಿಲ್ಲಿಸಿ ಅನೇಕ ವರ್ಷಗಳಾಗಿವೆ.

ADVERTISEMENT

ಬೆಟಬಾಲ್ಕುಂದಾ, ಜಾನಾಪುರ, ಮಂಠಾಳ, ಚಂಡಕಾಪುರ, ಉಮಾಪುರ, ಮೋರಖಂಡಿ, ತಳಭೋಗ ವ್ಯಾಪ್ತಿಯಲ್ಲಿ ಬೆಲ್ಲ ತಯಾರಿಕೆಯ ಹತ್ತಾರು ಗಾಣಗಳು (ಅಲೆಮನೆ) ಇದ್ದವು. ಕಾರ್ಮಿಕರ ಕೊರತೆಯ ಕಾರಣಕ್ಕೆ ಅವುಗಳೂ ಹಾಳು ಬಿದ್ದಿದ್ದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ 2021 ರಲ್ಲಿ ಇದ್ದಂಥ 2383.95 ಹೆಕ್ಟೇರ್ ಕಬ್ಬು ಬೆಳೆ ಕ್ಷೇತ್ರ 2023-24 ರಲ್ಲಿ 1454.16 ಹೆಕ್ಟೇರ್‌ಗೆ ಇಳಿದಿದೆ.

ನದಿಗಳ ನೀರಾವರಿ ಸೌಲಭ್ಯವೂ ಇಲ್ಲ. ಬರೀ ಬಾವಿ ನೀರಾವರಿ ಆಧಾರಿತ ಬೇಸಾಯವಿದೆ. ಆದರೂ ಅನ್ಯ ಬೆಳೆಗಳಿಗೆ ಬೆಲೆ ಇಲ್ಲದಿದ್ದಾಗ ಇಲ್ಲಿ ಕಬ್ಬು ಹೆಚ್ಚಿನ ಪ್ರಮಾಣದಲ್ಲಿತ್ತು. ಕೆಲ ವರ್ಷಗಳಿಂದ ಸೋಯಾಬಿನ್ ಬೆಳೆಯುವುದು ಹೆಚ್ಚಾಗಿದೆ. ಈ ವರ್ಷ ಬಿಳಿಜೋಳ ಸಹ ಹೆಚ್ಚಿಗೆ ಇತ್ತು. ಆದರೆ ಕಬ್ಬು ಕಡಿಮೆ ಇತ್ತು. ಕಾರ್ಖಾನೆಯವರ ನಿರ್ಲಕ್ಷ್ಯದಿಂದ ಇನ್ನುವರೆಗೆ ಕೆಲ ಪ್ರಮಾಣದ ಕಬ್ಬು ಜಮೀನಿನಲ್ಲಿಯೇ ಉಳಿದಿದ್ದು, ರೈತರು ಅದನ್ನು ಗಾಣಗಳಿಗೆ ಸಾಗಿಸಿ ಬೆಲ್ಲ ತಯಾರಿಸುತ್ತಿರುವುದು ಕಂಡು ಬಂದಿದೆ.

‘ಕೆಲ ಪ್ರಮಾಣದ ಕಬ್ಬು ಕಾರ್ಖಾನೆಗೆ ಸಾಗಿಸದೆ ಉಳಿದಿರುವ ಕಾರಣ ಗಾಣಕ್ಕೆ ತಂದು ಬೆಲ್ಲ ತಯಾರಿಸುತ್ತಿದ್ದೇನೆ. ಒಂದು ಮುದ್ದೆ ಬೆಲ್ಲ ₹400ಕ್ಕೆ ಮಾರಾಟ ಆಗುತ್ತದೆ. ಎಲ್ಲ ಖರ್ಚು ಹೋಗಿ ₹200 ಉಳಿಯುತ್ತದೆ’ ಎಂದು ಜಾಫರವಾಡಿಯ ರೈತ ಶಾಂತವಿಜಯ ಪಾಟೀಲ ಹೇಳಿದ್ದಾರೆ.

‘ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮೂರು ದಶಕಗಳಿಂದ ಪ್ರಯತ್ನ ಸಾಗಿದ್ದರೂ ಫಲ ದೊರಕಿಲ್ಲ. ಜನಪ್ರತಿನಿಧಿಗಳು ಸತತವಾಗಿ ಕ್ರಿಯಾಶೀಲರಾದರೆ ಮಾತ್ರ ಇಂಥ ಕೆಲಸ ಸಾಧ್ಯವಾಗುತ್ತದೆ’ ಎಂದು ರೈತ ಮುಖಂಡ ಮಡಿವಾಳಪ್ಪ ಪಾಟೀಲ ಸಸ್ತಾಪುರ ಅಭಿಪ್ರಾಯಪಟ್ಟಿದ್ದಾರೆ.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್ ಜಿಲ್ಲೆಯಲ್ಲಿಯೇ ಹೆಚ್ಚಿನ ಕಬ್ಬು ಬೆಳೆಯಲಾಗುತ್ತದೆ. ಆ ಹಿರಿಮೆ ಉಳಿಸಿಕೊಂಡು ಹೋಗುವುದಕ್ಕೆ ಸರ್ಕಾರದ ಎಲ್ಲ ರೀತಿಯ ಸಹಾಯ ಅಗತ್ಯ’ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಜ್ಞಾನೇಶ್ವರ ಮುಳೆ ತಿಳಿಸಿದರು.

‘ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಲ್ಲದೆ ಬೆಲ್ಲದ ಗಾಣಗಳಿಗೂ ಸೌಲಭ್ಯ ನೀಡಿದರೆ ಕಬ್ಬು ಬೆಳೆಗಾರರಿಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಮಂಠಾಳದ ರೈತ ಜಾಕೀರ್ ಶೇಖ್.

ಬಸವಕಲ್ಯಾಣ ತಾಲ್ಲೂಕಿನ ಮಂಠಾಳ-ಗುಂಡೂರ ರಸ್ತೆಯಲ್ಲಿನ ಹೊಲದಲ್ಲಿನ ಗಾಣದಲ್ಲಿ ಕಬ್ಬು ನುರಿಸುತ್ತಿರುವುದು
ಶಾಂತವಿಜಯ ಪಾಟೀಲ
ಜ್ಞಾನೇಶ್ವರ ಮುಳೆ
ಮಾರ್ತಂಡ ಮಚಕೂರಿ 
ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳಲ್ಲಿ ಹಲವಾರು ಕಾರಣಗಳಿಂದ 4 ವರ್ಷಗಳ 990 ಹೆಕ್ಟೇರ್‌ನಷ್ಟು ಕಬ್ಬು ಬೆಳೆ ಕ್ಷೇತ್ರ ಕಡಿಮೆಯಾಗಿದೆ
ಮಾರ್ತಂಡ ಮಚಕೂರಿ ಕೃಷಿ ಸಹಾಯಕ ನಿರ್ದೇಶಕ
ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೆ ರೈತರು ಕಬ್ಬು ಬೆಳೆಯುವುದು ಜಾಸ್ತಿ ಆಗುತ್ತದೆ. ಜೊತೆಯಲ್ಲಿಯೇ ನೀರಾವರಿ ಮತ್ತಿತರೆ ಸೌಲಭ್ಯವೂ ನೀಡುವುದು ಅತ್ಯಗತ್ಯ
ಶಾಂತವಿಜಯ ಪಾಟೀಲ ರೈತ ಜಾಫರವಾಡಿ
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಕ್ಕರೆ ಕಾರ್ಖಾನೆಗಳಿದ್ದು ಇಲ್ಲಿಯೂ ಕಾರ್ಖಾನೆ ಸ್ಥಾಪನೆಗಾಗಿ ಶಾಸಕ ಶರಣು ಸಲಗರ ಅವರು ಈಗಾಗಲೇ ಸ್ಥಳ ಪರಿಶೀಲಿಸಿದ್ದಾರೆ
ಜ್ಞಾನೇಶ್ವರ ಮುಳೆ ಮಾಜಿ ನಿರ್ದೇಶಕ ನಗರ ಯೋಜನಾ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.