ADVERTISEMENT

ಎರಡೂವರೆ ತಾಸು ನಡೆದ ಸಭೆ; ಕಬ್ಬಿಗೆ ₹2,400 ಕೊಡಲು ನಿರಾಕರಣೆ

ಒಮ್ಮತಕ್ಕೆ ಬರದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 6:32 IST
Last Updated 6 ಜೂನ್ 2021, 6:32 IST
ಬೀದರ್‌ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೈತ ಮುಖಂಡರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡಿದರು
ಬೀದರ್‌ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೈತ ಮುಖಂಡರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡಿದರು   

ಬೀದರ್: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹಿಂದಿನ ಸಭೆಯಲ್ಲಿ ವಾಗ್ದಾನ ಮಾಡಿದಂತೆ ರೈತರಿಗೆ ಪ್ರತಿ ಟನ್‌ಗೆ
₹2,400 ಪಾವತಿಸಲು ನಿರಾಕರಿಸಿದವು. ನಾರಂಜಾ ಸಕ್ಕರೆ ಕಾರ್ಖಾನೆ ಮಾತ್ರ ₹2,250 ಕೊಡಲು ಒಪ್ಪಿಗೆ ಸೂಚಿಸಿತು. ಉಳಿದ ಮೂರು ಕಾರ್ಖಾನೆಗಳು ₹2,250 ಬೆಲೆಯನ್ನೂ ಕೊಡಲು ಒ‍ಪ್ಪಿಗೆ ಸೂಚಿಸಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ರೈತ ಮುಖಂಡರ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದರೂ ಕಾರ್ಖಾನೆಗಳ ಪ್ರಮುಖರು ಹಿಂದಿನ ಸಭೆಯಲ್ಲಿ ಸೂಚಿಸಿದ ಬೆಲೆ ಕೊಡಲು ಸ್ಪಷ್ಟವಾಗಿ ನಿರಾಕರಿಸಿದರು.

‘ರಾಜ್ಯ ಸರ್ಕಾರ ರೈತರ ಪರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ತಕ್ಷಣ ಕಬ್ಬಿನ ಬಾಕಿ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು’ ಎಂದು ಸಚಿವರು ಕಾರ್ಖಾನೆಗಳ ಪ್ರಮುಖರಿಗೆ ಮನವಿ ಮಾಡಿದರು.

ADVERTISEMENT

ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ ಸಿದ್ರಾಮ ಅವರು, ‘ಪ್ರತಿ ಟನ್‌ಗೆ ಸದ್ಯ ₹2,250 ಮಾತ್ರ ಕೊಡಲು ಸಾಧ್ಯವಾಗಬಹುದು. ಉಳಿದ ₹150 ಅನ್ನು ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ, ಭಾಲ್ಕೇಶ್ವರ್ ಸ‌ಕ್ಕರೆ ಕಾರ್ಖಾನೆ ಹಾಗೂ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು, ‘ರೈತರಿಗೆ ಈಗಾಗಲೇ ₹1,950 ಕೊಡಲಾಗಿದೆ. ಕಾರ್ಖಾನೆಗಳೂ ಆರ್ಥಿಕ ಸಂಕಷ್ಟದಲ್ಲಿ ರುವ ಕಾರಣ ₹2,400 ಕೊಡಲು ಸಾಧ್ಯವಾಗದು. ಪ್ರತಿ ಟನ್‌ಗೆ ₹2,250 ಕೊಡುವ ಕುರಿತು ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಸಮಾಲೋಚನೆ ನಡೆಸಿ ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು’ ಎಂದು ಹೇಳಿದರು.

‘ಕಿಸಾನ್‌ ಸಕ್ಕರೆ ಕಾರ್ಖಾನೆ ರೈತರಿಗೆ ₹14 ಕೋಟಿ ಬಾಕಿ ಕೊಡಬೇಕಿದೆ. ಕಾರ್ಖಾನೆ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಹಂತ ಹಂತವಾಗಿ ಹಣ ಮರುಪಾವತಿ ಮಾಡಲಿದೆ’ ಎಂದು ಕಾರ್ಖಾನೆ ಅಧಿಕಾರಿಗಳು ತಿಳಿಸಿದರು.

ಶಾಸಕರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪುರ, ರಹೀಂಖಾನ್, ಶರಣು ಸಲಗರ, ಸಂಸದ ಭಗವಂತ ಖೂಬಾ, ಕೆಎಸ್‌ಎಸ್‌ಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷರಾದ ಬಾಬು ವಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಬಾಬು ರೆಡ್ಡಿ, ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ನಸೀಮೊದ್ದಿನ್ ಪಟೇಲ್, ಭಾಲ್ಕೇಶ್ವರ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಗುರುಪ್ರಸನ್ನ ಖಂಡ್ರೆ, ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ವೈಜಿನಾಥ ಪಾಟೀಲ ಇದ್ದರು.

ರೈತ ಮುಖಂಡರ ಒತ್ತಾಯ

‘ಲಾಕ್‌ಡೌನ್‌ನಿಂದಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಲು ರೈತರ ಬಳಿ ಹಣ ಇಲ್ಲ. ಸಕ್ಕರೆ ಕಾರ್ಖಾನೆಗಳು ಹಿಂದಿನ ಸಭೆಯಲ್ಲಿ ವಾಗ್ದಾನ ಮಾಡಿದಂತೆ ₹2,400 ಹಣ ಮರುಪಾವತಿ ಮಾಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ (ಕೋಡಿಹಳ್ಳಿ ಬಣ) ಅಧ್ಯಕ್ಷ ಸಿದ್ದರಾಮ ಆಣದೂರೆ, ರೈತ ಸಂಘದ ಜಿಲ್ಲಾ ಘಟಕದ (ನಾಗೇಂದ್ರಪ್ಪ ಬಣ) ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.