ADVERTISEMENT

ಗೊಶಾಲೆಗಳಿಗೆ ಮೇವು ಪೂರೈಸಿ: ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 11:22 IST
Last Updated 11 ಡಿಸೆಂಬರ್ 2018, 11:22 IST
ಔರಾದ್‌ ಹೊರವಲಯದಲ್ಲಿ ಇರುವ ಗೋಶಾಲೆಯಲ್ಲಿ ಮೇವಿನ ಕೊರತೆಯಿಂದ ಸೊರಗಿರುವ ಗೋವುಗಳು
ಔರಾದ್‌ ಹೊರವಲಯದಲ್ಲಿ ಇರುವ ಗೋಶಾಲೆಯಲ್ಲಿ ಮೇವಿನ ಕೊರತೆಯಿಂದ ಸೊರಗಿರುವ ಗೋವುಗಳು   

ಬೀದರ್‌: ‘ಪಶು ವೈದ್ಯ ಮತ್ತು ಪಶು ಸೇವಾ ಇಲಾಖೆಯ ಮೂಲಕ ಜಿಲ್ಲೆಯ ಗೋಶಾಲೆಗಳಲ್ಲಿರುವ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ಮೇವು ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಬರಗಾಲದಲ್ಲಿ ರೈತರಿಗೆ ಮಾರಾಟ ಮಾಡುವ ದರದಲ್ಲೇ ಮೇವು ಒದಗಿಸಬೇಕು’ ಎಂದು ಸೂಚನೆ ನೀಡಿದರು.

‘ಗೋವುಗಳು ಸೊರಗುತ್ತಿರುವ ಕುರಿತು ‘ಪ್ರಜಾವಾಣಿ’ಯ ಮುಖಪುಟದಲ್ಲೇ ವರದಿ ಪ್ರಕಟವಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆಯ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಪಶು ವೈದ್ಯ ಮತ್ತು ಪಶು ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರವೀಂದ್ರ ಭೂರೆ ಮಾತನಾಡಿ, ‘ಧರ್ಮದತ್ತಿ ಇಲಾಖೆಯ ಅಡಿಯಲ್ಲಿ ದೇವಸ್ಥಾನಗಳಲ್ಲಿ ನಾಲ್ಕು ಗೋಶಾಲೆಗಳು ಇವೆ. ದೇವಸ್ಥಾನ ಕಮಿಟಿಯವರೇ ಅವುಗಳ ಹೊಣೆ ವಹಿಸಿಕೊಂಡಿದ್ದಾರೆ. ಪಶು ಇಲಾಖೆಯಿಂದ ಮೇವು ಪೂರೈಸುವ ಅಧಿಕಾರ ಇಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಗೋಶಾಲೆ ಅಂದರೆ ದನಗಳನ್ನು ಕೊಟ್ಟಿಗೆಯಲ್ಲಿ ತಂದು ನಿಲ್ಲಿಸುವುದಲ್ಲ. ಅಲ್ಲಿ ಮೇವು ಹಾಕುವವರು, ಸಗಣಿ ತೆಗೆಯುವವರು ಹಾಗೂ ನಿರ್ವಹಣೆ ಮಾಡುವವರು ಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ವಾರದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಗೋಶಾಲೆ ತೆರೆಯಲು ಸಿದ್ಧತೆ ಮಾಡಿಕೊಳ್ಳಿ
‘ಬೇಡಿಕೆ ಇರುವ ಗ್ರಾಮಗಳಲ್ಲಿ ಮೇವಿನ ವ್ಯವಸ್ಥೆ ಮಾಡಬೇಕು. ತೋರಿಕೆಗಾಗಿ ಯಾವುದೇ ಒಂದು ಹೋಬಳಿಯಲ್ಲಿ ಸಂಗ್ರಹಿಸಿ ಇಡಬೇಡಿ. ‘ಶೀಘ್ರದಲ್ಲೇ ಗೋಶಾಲೆ ತೆರೆಯಲಾಗುವುದು’ ಎನ್ನುವ ಗೊಳ್ಳು ಹೇಳಿಕೆ ನೀಡಿದರೆ ಸಾಲದು. ಗೋಶಾಲೆ ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಭಾರತಬಾಯಿ ಶೇರಿಕಾರ ಹೇಳಿದರು.

‘ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ಹಾಗೂ ಪ್ರತಿಯೊಂದು ಹೋಬಳಿಯಲ್ಲಿ ತಲಾ ಎರಡು ಮೇವು ಬ್ಯಾಂಕ್‌ ಆರಂಭಿಸಲು ಉದ್ದೇಶಿಸಲಾಗಿದೆ. ಒಂದು ಗೋಶಾಲೆಯಲ್ಲಿ 500 ದನಗಳಿಗೆ ಮೇವಿನ ವ್ಯವಸ್ಥೆ ಮಾಡಬಹುದಾಗಿದೆ’ ಎಂದು ಡಾ.ರವೀಂದ್ರ ಭೂರೆ ಹೇಳಿದರು.

‘ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಕೇವಲ 2,500 ದನಗಳ ಗುರಿ ಇಟ್ಟುಕೊಂಡು ಯೋಜನೆ ಸಿದ್ಧಪಡಿಸಿರುವುದು ಸರಿಯಲ್ಲ. ಗೋಶಾಲೆಗಳ ನಿರ್ವಹಣೆ, ಮೇವು ಸಂಗ್ರಹಣೆ ಹಾಗೂ ಚಿಕಿತ್ಸೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಯೋಜನೆ ಸಿದ್ಧಪಡಿಸಬಾರದು. ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿತು ಯೋಜನೆ ರೂಪಿಸಬೇಕು’ ಎಂದು ಸಿಇಒ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.