ADVERTISEMENT

ಆನೆಕಾಲು ರೋಗಮುಕ್ತಿಗೆ ಮಾತ್ರೆ ಸೇವಿಸಿ: ಜಿಲ್ಲಾಧಿಕಾರಿ ರಾಮಚಂದ್ರನ್

ಸಂಚಾಲನಾ ಸಮಿತಿ ಸಭೆಯಲ್ಲಿ ಮನವಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:10 IST
Last Updated 5 ಮಾರ್ಚ್ 2021, 2:10 IST
ಬೀದರ್‌ನಲ್ಲಿ ಆನೆಕಾಲು ರೋಗ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಜಿಲ್ಲಾ ಸಂಚಾಲನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರ ಎತ್ತರ ಅಳತೆ ಮಾಡಲಾಯಿತು
ಬೀದರ್‌ನಲ್ಲಿ ಆನೆಕಾಲು ರೋಗ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಜಿಲ್ಲಾ ಸಂಚಾಲನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರ ಎತ್ತರ ಅಳತೆ ಮಾಡಲಾಯಿತು   

ಬೀದರ್: ಜಿಲ್ಲೆಯನ್ನು ಆನೆಕಾಲು ರೋಗ ಮುಕ್ತಗೊಳಿಸಲು ಅರ್ಹ ಪ್ರತಿಯೊಬ್ಬರೂ ಔಷಧಿ ಸೇವಿಸಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಸಂಚಾಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಆನೆಕಾಲು ರೋಗ ನಿರ್ಮೂಲನೆಗೆ ಮಾರ್ಚ್ 15ರಿಂದ 31 ರ ವರೆಗೆ ಜಿಲ್ಲೆಯಲ್ಲಿ 17ನೇ ಸುತ್ತಿನ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಊಟದ ನಂತರ ಡಿ.ಇ.ಸಿ., ಅಲ್ಪೆಂಡ್‍ಜೋಲ್ ಹಾಗೂ ಐವರ್ ಮೆಕ್ಟೀನ್ ಮಾತ್ರೆಗಳನ್ನು ಸೇವಿಸಬೇಕು ಎಂದು ತಿಳಿಸಿದರು.

ADVERTISEMENT

ಈ ಬಾರಿಯ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮದಲ್ಲಿ ಶೇ 100 ರಷ್ಟು ಗುರಿ ಸಾಧನೆಗೆ ಪ್ರಯತ್ನಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಡಾ. ಅನಿಲಕುಮಾರ ತಾಳಿಕೋಟಿ ಮಾತನಾಡಿ, ಆನೆಕಾಲು ರೋಗ ವಿಶ್ವದ 80 ದೇಶಗಳಲ್ಲಿ ಹರಡಿದೆ. ದೇಶದ ಎಲ್ಲ ಕಡೆ ರೋಗ ಕಂಡುಬಂದಿದ್ದು, ಉತ್ತರಪ್ರದೇಶ, ಬಿಹಾರ್, ಜಾರ್ಖಂಡ, ಆಂಧ್ರಪ್ರದೇಶ, ಓರಿಸ್ಸಾ, ತಮಿಳುನಾಡು, ಕೇರಳ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಮಾತನಾಡಿ, ಆನೆಕಾಲು ರೋಗವು ಕಲುಷಿತ ನೀರಿನಲ್ಲಿ ಬೆಳೆಯುವ ಕ್ಯೂಲೆಕ್ಸ್ ಜಾತಿಯ ಸೊಳ್ಳೆ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ರೋಗ ಮನುಷ್ಯರಲ್ಲಿ ಕನಿಷ್ಠ 2 ವರ್ಷದಿಂದ 10 ವರ್ಷಗಳವರೆಗೆ ಯಾವುದೇ ಅವಧಿಯಲ್ಲಿ ಕಾಣಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಪೋಸ್ಟರ್ ಬಿಡುಗಡೆ ಮಾಡಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ಪಾಟೀಲ ಮಾತನಾಡಿದರು. ಉಪ ವಿಭಾಗಾ ಧಿಕಾರಿಗಳಾದ ಗರಿಮಾ ಪನ್ವಾರ್, ಭುವನೇಶ ಪಾಟೀಲ, ಡಾ. ರತಿಕಾಂತ ಸ್ವಾಮಿ, ಡಾ. ಅನಿಲಕುಮಕಾರ ಚಿಂತಾಮಣಿ, ಡಾ. ಕೃಷ್ಣಾರೆಡ್ಡಿ, ಡಾ. ದೀಪಾ ಖಂಡ್ರೆ, ಮಹೇಶ ತೊಂಡಾರೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ಇದ್ದರು.

ಮಾತ್ರೆ ಸೇವಿಸಿದ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಜಿಲ್ಲಾ ಸಂಚಾಲನಾ ಸಮಿತಿ ಸಭೆಯಲ್ಲಿ ಸ್ವತಃ ಮಾತ್ರೆ ಸೇವಿಸಿ ಆನೆಕಾಲು ರೋಗ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಪ ವಿಭಾಗಾಧಿಕಾರಿಗಳಾದ ಗರಿಮಾ ಪನ್ವಾರ್, ಭುವನೇಶ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಹಾಗೂ ಇತರ ಅಧಿಕಾರಿಗಳೂ ಔಷಧಿ ಸೇವನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.