ADVERTISEMENT

ಬಸವಕಲ್ಯಾಣ ಉಪಚುನಾವಣೆ| ಮುಳೆ ಬಿಜೆಪಿ ತೆಕ್ಕೆಗೆ, ಖೂಬಾ ಬಂಡಾಯ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 15:27 IST
Last Updated 3 ಏಪ್ರಿಲ್ 2021, 15:27 IST
ಬಸವಕಲ್ಯಾಣದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರ ಮನೆಯ ಮುಂದೆ ‘ಭಾರತೀಯ ಜನತಾ ಪಾರ್ಟಿ ವರಿಷ್ಠರಾರಿಗೂ ಪ್ರವೇಶ ಇಲ್ಲ’ ಎಂದು ಫಲಕ ತೂಗು ಹಾಕಿರುವುದು
ಬಸವಕಲ್ಯಾಣದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರ ಮನೆಯ ಮುಂದೆ ‘ಭಾರತೀಯ ಜನತಾ ಪಾರ್ಟಿ ವರಿಷ್ಠರಾರಿಗೂ ಪ್ರವೇಶ ಇಲ್ಲ’ ಎಂದು ಫಲಕ ತೂಗು ಹಾಕಿರುವುದು   

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಎನ್‌ಸಿಪಿಯಿಂದ ಸ್ಪರ್ಧಿಸಿ ಬಿಜೆಪಿಗೆ ನಡುಕ ಹುಟ್ಟಿಸಿದ್ದ ಮರಾಠ ಸಮಾಜದ ಮುಖಂಡ, ಮಾಜಿ ಶಾಸಕ ಮಾರುತಿರಾವ್‌ ಮುಳೆ ಅವರನ್ನು ಕಣದಿಂದ ಹಿಂದೆ ಸರಿಸಿ ಪಕ್ಷಕ್ಕೆ ಸೆಳೆಯುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾದರು.

ಬಿಜೆಪಿ ನಾಯಕರ ಮನವೊಲಿಕೆಗೆ ಜಗ್ಗದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.

ಮುಳೆ ಮತ್ತು ಖೂಬಾ ಅವರ ಮನವೊಲಿಕೆಗಾಗಿಯೇಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಇಲ್ಲಿಗೆ ಧಾವಿಸಿದ್ದರು.

ADVERTISEMENT

ಮುಳೆ ಅವರನ್ನು ಭೇಟಿ ಮಾಡಿದ ಈ ನಾಯಕರು ಸುದೀರ್ಘ ಮಾತುಕತೆ ನಡೆಸಿದರು. ಕಟೀಲ್‌ ಅವರು ನೇರವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಮಾತನಾಡಿಸಿದರು.

‘ಮರಾಠ ಅಭಿವೃದ್ಧಿ ನಿಗಮಕ್ಕೆ ಎರಡು ತಿಂಗಳಲ್ಲಿ ಅಧ್ಯಕ್ಷರ ನೇಮಕ, ಮರಾಠ ಸಮಾಜ 2ಎ ಪ್ರವರ್ಗಕ್ಕೆ ಸೇರ್ಪಡೆಗೆ ಕೇಂದ್ರಕ್ಕೆ ಶಿಫಾರಸು ಮಾಡುವುದು, ದಾವಣಗೆರೆ ಜಿಲ್ಲೆ ಹೊದಿಗೆರೆಯಲ್ಲಿರುವ ಷಹಾಜಿರಾಜೆ ಭೋಸಲೆ, ಕನಕಗಿರಿಯಲ್ಲಿರುವ ಸಂಭಾಜಿರಾಜೆ ಭೋಸಲೆ ಸ್ಮಾರಕ ಅಭಿವೃದ್ಧಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶಾಹು ಮಹಾರಾಜ್ ಮರಾಠಿ ಅಧ್ಯಯನ ಕೇಂದ್ರ ಪುನರಾರಂಭ ಮಾಡುವ ಭರವಸೆಯನ್ನು ಯಡಿಯೂರಪ್ಪ ನೀಡಿದರು. ಆಗ ಮುಳೆ ನಾಮಪತ್ರ ವಾಪಸ್‌ಗೆ ಸಮ್ಮತಿಸಿದರು’ ಎಂದು ಬಿಜೆಪಿ ಮುಖಂಡರು ತಿಳಿಸಿದರು.

ಹಡಪದ ಸಮಾಜದ ಅಭಿವೃದ್ಧಿಗೆ ಒತ್ತು ಕೊಡುವ ಮತ್ತು ನಿಗಮ/ ಮಂಡಳಿ ಅಧ್ಯಕ್ಷ ಸ್ಥಾನದ ಭರವಸೆ ನೀಡಿದ ನಂತರಈರಣ್ಣ ಹಡಪದ ಸಹ ನಾಮಪತ್ರ ವಾಪಸ್‌ ಪಡೆದರು.ಕಾಂಗ್ರೆಸ್‌ನ ಮಾಲಾ ನಾರಾಯಣರಾವ್, ಬಿಜೆಪಿಯ ಶರಣು ಸಲಗರ, ಜೆಡಿಎಸ್‌ನ ಸಯ್ಯದ್‌ ಯಸ್ರಬ್ ಅಲಿ ಖಾದ್ರಿ ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

‘ಬಿಜೆಪಿ ವರಿಷ್ಠರಿಗೆ ಪ್ರವೇಶ ಇಲ್ಲ’

ಬಿಜೆಪಿ ಟಿಕೆಟ್‌ ಸಿಗದ ಕಾರಣ ಮುನಿಸಿಕೊಂಡಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬಿಜೆಪಿ ಮುಖಂಡರು ಮನವೊಲಿಸಲು ಮನೆಗೆ ಬರಲಿದ್ದಾರೆ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ ತಮ್ಮ ಮನೆಯ ಮುಂದೆ ‘ಭಾರತೀಯ ಜನತಾ ಪಾರ್ಟಿ ವರಿಷ್ಠರಾರಿಗೂ ಪ್ರವೇಶ ಇಲ್ಲ’ ಎಂದು ಫಲಕ ತೂಗು ಹಾಕಿದ್ದಾರೆ.

ಕಟೀಲ್ ಹಾಗೂ ಸಚಿವರು ಮಧ್ಯಾಹ್ನದ ವರೆಗೆ ಸಂಪರ್ಕಿಸಲು ಪ್ರಯತ್ನಿಸಿದರೂ ಖೂಬಾ ಸಂಪರ್ಕ ಸಾಧ್ಯವಾಗಲಿಲ್ಲ.

ಸಮಾಜದ ಹಿತಕ್ಕಾಗಿ ಬಿಜೆಪಿಗೆ ಬೆಂಬಲ: ಮುಳೆ

‘ಸಮಾಜದ ಬೇಡಿಕೆ ಈಡೇರಿಸಲು ಬಿಜೆಪಿ ಒಪ್ಪಿದ ಕಾರಣ ನಾನು ನಾಮಪತ್ರ ಹಿಂದಕ್ಕೆ ಪಡೆದು ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದೇನೆ’ ಎಂದು ಮಾಜಿ ಶಾಸಕ ಮಾರುತಿರಾವ್ ಮುಳೆ ತಿಳಿಸಿದರು.

‘ನನ್ನೊಂದಿಗೆ ಖುದ್ದು ಚರ್ಚೆ ನಡೆಸಿದ ಮುಖಂಡರಲ್ಲದೇ, ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್ ಅವರೂ ನಮ್ಮ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೂ ಮೊದಲು ಕಲಬುರ್ಗಿಯ ಶಶೀಲ್‌ ನಮೋಶಿ ಹಾಗೂ ಸುನೀಲ್‌ ವಲ್ಲ್ಯಾಪುರ ಮಧ್ಯಸ್ಥಿಕೆ ವಹಿಸಿದ್ದರು’ ಎಂದು ಹೇಳಿದರು.

‘ಮರಾಠ ಸಮಾಜದ 200ಕ್ಕೂ ಹೆಚ್ಚು ಮುಖಂಡರು ಸಭೆ ಸೇರಿ ಎರಡು ತಾಸು ಚರ್ಚೆ ನಡೆಸಿದೆವು. ಅವರೆಲ್ಲ ಒಪ್ಪಿಗೆ ನೀಡಿದ ನಂತರವೇ ಬಿಜೆಪಿಗೆ ಬೆಂಬಲ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.