ADVERTISEMENT

ಸಂವಿಧಾನವೇ ದೇಶದ ಪವಿತ್ರ ಗ್ರಂಥ

ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯತ್ವ ಅಭಿಯಾನದಲ್ಲಿ ಖಂಡ್ರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:12 IST
Last Updated 9 ಮಾರ್ಚ್ 2021, 17:12 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದ ಉದ್ಘಾಟನೆ ಸಮಾರಂಭದಲ್ಲಿ ಪ್ರಗತಿಪರ ಚಿಂತಕ ಬಸವರಾಜ ಮಾಳಗೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸನ್ಮಾನಿಸಿದರು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದ ಉದ್ಘಾಟನೆ ಸಮಾರಂಭದಲ್ಲಿ ಪ್ರಗತಿಪರ ಚಿಂತಕ ಬಸವರಾಜ ಮಾಳಗೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸನ್ಮಾನಿಸಿದರು   

ಬೀದರ್: ‘ಸಂವಿಧಾನವೇ ದೇಶದ ಪವಿತ್ರ ಗ್ರಂಥ. ಇದನ್ನು ಯಾರಿಂದಲೂ ದುರ್ಬಲಗೊಳಿಸಲು ಆಗದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದ ಉದ್ಘಾಟನೆ ಹಾಗೂ ಪ್ರಗತಿಪರ ಚಿಂತಕ ಬಸವರಾಜ ಮಾಳಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಬೇರು ಸಮೇತ ಕಿತ್ತು ಬಿಸಾಕಬೇಕು. ಜನರ ಪರವಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಕಾಂಗ್ರೆಸ್‌, ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುತ್ತ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ಆದರೆ, ಇತ್ತೀಚೆಗೆ ಅಧಿಕಾರಕ್ಕೆ ಬಂದ ಪಕ್ಷ ಎಲ್ಲವೂ ತನ್ನಿಂದಲೇ ಆಗಿದೆ ಎಂದು ಸುಳ್ಳು ಹೇಳುತ್ತಿದೆ’ ಎಂದು ಟೀಕಿಸಿದರು.

ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಜನರನ್ನು ಮತ್ತೆ ಗುಲಾಮಗಿರಿಗೆ ತಳ್ಳುವ ಕೆಲಸ ಮಾಡುತ್ತಿದೆ. ಬಿಜೆಪಿಯ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಹೋರಾಟದ ಮೂಲಕವೇ ನ್ಯಾಯ ದೊರಕಿಸಿಕೊಳ್ಳಬೇಕಿದೆ’ ಎಂದರು.

ಶಾಸಕ ಯು.ಟಿ.ಖಾದರ್‌ ಮಾತನಾಡಿ, ‘ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಉದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ಒಂದು ರಾಷ್ಟ್ರ- ಒಂದು ಚುನಾವಣೆಯ ಬಗ್ಗೆ ಮಾತನಾಡುತ್ತಿದೆ’ ಎಂದು ಆರೋಪಿಸಿದರು.

‘ದೇಶದ ಯಾರೊಬ್ಬರೂ ಸಂವಿಧಾನಕ್ಕಿಂತ ಶ್ರೇಷ್ಠರಲ್ಲ. ಮೀಸಲಾತಿಯನ್ನು ನೇರವಾಗಿ ರದ್ದುಗೊಳಿಸಲು ಆಗುವುದಿಲ್ಲ. ಹೀಗಾಗಿ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ವಹಿಸಿ ಪರೋಕ್ಷವಾಗಿ ಮೀಸಲಾತಿಯನ್ನು ಅಂತ್ಯಗೊಳಿಸಲು ಪ್ರಯತ್ನಿಸಲಾಗುತ್ತಿದೆ’ ಎಂದರು.

‘ಸಾರ್ವಜನಿಕ ವಲಯದ ಉದ್ಯಮಗಳ ರಾಷ್ಟ್ರೀಕರಣ ಮಾಡಿದವರನ್ನು ರಾಷ್ಟ್ರ ದ್ರೋಹಿ, ಖಾಸಗೀಕರಣ ಮಾಡಿದವರನ್ನು ರಾಷ್ಟ್ರ ಪ್ರೇಮಿ ಎಂದು ಕರೆಯಲಾಗುತ್ತಿದೆ’ ಎಂದು ವ್ಯಂಗ್ಯ ಮಾಡಿದರು.

‘ಸರ್ಕಾರ ನಡೆಸುವ ಪಕ್ಷಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಂಡಲ್ಲಿ ಮಾತ್ರ ದೇಶ ನೆಮ್ಮದಿಯಿಂದ ಮುನ್ನಡೆಯಲು ಸಾಧ್ಯ. ಸಂವಿಧಾನ ಸಂರಕ್ಷಣೆ ಅಭಿಯಾನ ರಾಜ್ಯದಾದ್ಯಂತ ನಡೆಯಬೇಕು’ ಎಂದು ಹೇಳಿದರು.

ಶಾಸಕ ರಹೀಂ ಖಾನ್‌ ಮಾತನಾಡಿದರು. ಸಮಿತಿ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಮಾರುತಿರಾವ್ ಮುಳೆ, ಎಲ್‍ಐಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ರವಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ಪ್ರಮುಖರಾದ ಆನಂದ ದೇವಪ್ಪ, ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಬಾಬುರಾವ್ ಪಾಸ್ವಾನ್, ನಾರಾಯಣ ಗಣೇಶ, ಸುಬ್ಬಣ್ಣ ಕರಕನಳ್ಳಿ, ಶಾಲಿವಾನ ಬಡಿಗೇರ, ಬಾಬುರಾವ್ ಮಿಠಾರೆ, ಶಿವಕುಮಾರ ನೀಲಿಕಟ್ಟಿ, ಶ್ರೀಪತರಾವ್ ದೀನೆ, ಅಂಬದಾಸ್ ಗಾಯಕವಾಡ, ಶಶಿಧರ ಇದ್ದರು.

ಅನಿಲಕುಮಾರ ಬೆಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯಾಧ್ಯಕ್ಷ ಅಮೃತರಾವ್ ಚಿಮಕೋಡ ನಿರೂಪಿಸಿದರು. ಪ್ರದೀಪ ನಾಟೇಕರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.