ADVERTISEMENT

ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 3:55 IST
Last Updated 30 ಮಾರ್ಚ್ 2021, 3:55 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬಸವಕಲ್ಯಾಣ: ‘ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದ್ದು, ಅವುಗಳನ್ನು ಕಿತ್ತೊಗೆಯಬೇಕಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

‘ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೂ ಜನರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಒದಗಿಸಿಲ್ಲ ಮತ್ತು ಮಹತ್ವದ ಯೋಜನೆಗಳನ್ನು ಪ್ರಕಟಿಸಿಲ್ಲ. ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿದ್ದರೂ ಭೂಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಈ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಹಣ ಪಡೆದು ಹೊರಜಿಲ್ಲೆಯವರಿಗೆ ಕೊಡಲಾಗಿದೆ ಯೆಂದು ಆ ಪಕ್ಷದವರೇ ಆರೋಪಿಸಿದ್ದಾರೆ. ಇದರ ಲಾಭವು ಕಾಂಗ್ರೆಸ್‌ಗೆ ಆಗಲಿದೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ವಿವಿಧ ನಿಗಮಗಳನ್ನು ಘೋಷಿಸಿರುವ ರಾಜ್ಯ ಸರ್ಕಾರವು ಮರಾಠಾ ನಿಗಮ ಸೇರಿದಂತೆ ಕೆಲ ನಿಗಮಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿಲ್ಲ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮರಾಠರನ್ನು 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವ ಭರವಸೆ ನೀಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈಡೇರಿಸಿಲ್ಲ’ ಎಂದರು.

ADVERTISEMENT

ಪಕ್ಷದ ಅಭ್ಯರ್ಥಿ ಮಾಲಾ ನಾರಾಯಣರಾವ್, ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ, ಆರ್.ಕೆ.ಹುಡಗಿ, ರವಿ ಬೋರೋಳೆ, ದತ್ತಾತ್ರಿ ಮೂಲಗೆ, ನೀಲಕಂಠ ರಾಠೋಡ್‌, ಬಾಬು ಹೊನ್ನಾನಾಯಕ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.