ADVERTISEMENT

ದಾರಿ ತಪ್ಪುತ್ತಿದೆ ದಲಿತ ಚಳವಳಿ: ಜನಪರ ಹೋರಾಟಗಾರ ಮಾರುತಿ ಬೌದ್ಧೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 15:30 IST
Last Updated 29 ಡಿಸೆಂಬರ್ 2020, 15:30 IST
ಬೀದರ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನಪರ ಹೋರಾಟಗಾರ ಮಾರುತಿ ಬೌದ್ಧೆ ಹಾಗೂ ಕಸ್ತೂರಬಾಯಿ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನಪರ ಹೋರಾಟಗಾರ ಮಾರುತಿ ಬೌದ್ಧೆ ಹಾಗೂ ಕಸ್ತೂರಬಾಯಿ ಅವರನ್ನು ಸನ್ಮಾನಿಸಲಾಯಿತು   

ಬೀದರ್: ‘ದಲಿತ ಚಳವಳಿಗಳು ಇಂದು ಹಲವು ಕಾರಣಗಳಿಂದಾಗಿ ದಿಕ್ಕು ತಪ್ಪುತ್ತಿವೆ. ರೈತರು, ದಲಿತರು ಹಾಗೂ ಎಲ್ಲ ವರ್ಗಗಳಲ್ಲಿನ ಶೋಷಿತರು ಸಂಘಟಿತರಾಗಿ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ’ ಎಂದು ಜನಪರ ಹೋರಾಟಗಾರ ಮಾರುತಿ ಬೌದ್ಧೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಬೌದ್ಧೆ ಅವರ ನಿವಾಸದಲ್ಲಿ ಆಯೋಜಿಸಿದ್ದ 33ನೆಯ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ಹೋರಾಟದ ಜೀವನಾನುಭವಗಳನ್ನು ಹಂಚಿಕೊಂಡರು.

‘ದಲಿತ ಎನ್ನುವುದು ಜಾತಿಯಲ್ಲ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಶೋಷಣೆಗೆ ಒಳಗಾದ ಸಮುದಾಯವರೆಲ್ಲ ದಲಿತರೇ ಆಗಿದ್ದಾರೆ. ಹೀಗಾಗಿ ದಲಿತ ಚಳವಳಿ ಜನಪರ ಚಳವಳಿಯಾಗಿ ರೂಪುಗೊಂಡಿದೆ’ ಎಂದು ತಿಳಿಸಿದರು.

ADVERTISEMENT

‘ದಲಿತ ಬಂಡಾಯದ ಬಗ್ಗೆ ಪ್ರಸ್ತಾಪ ಮಾಡುತ್ತ ಮೊದಲ ದಲಿತ ಬಂಡಾಯ ಸಾಹಿತ್ಯವೆಂದರೆ ವಚನಗಳೇ’ ಎಂದು ಅಭಿಪ್ರಾಯಪಟ್ಟರು.

‘ತಳಸಮುದಾಯದಲ್ಲಿ ಜನಿಸಿದ ಕಾರಣ ಬಾಲ್ಯದಲ್ಲಿ ಕಷ್ಟಗಳನ್ನು ಅನುಭವಿಸುವಂತಾಯಿತು. ಮುಂದೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಹೋರಾಟ ತತ್ವಕ್ಕೆ ಬದ್ದನಾಗಿ ಸಮುದಾಯಕ್ಕೆ ಸಂಘಟನೆಗೆ ಕಪ್ಪು ಚುಕ್ಕೆ ಬರದಂತೆ ಛಲದಿಂದ ಹೋರಾಟ ಮಾಡಿದೆ. ಆರಂಭದಲ್ಲಿ ಎಸ್.ಎಫ್.ಐ., ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ನಾರಾಯಣ ರಾಂಪುರೆ, ಚಂದ್ರಕಾಂತ ಪೋಸ್ತೆ, ಜಿ.ಕೆ.ಗೋಖಲೆ, ಮಾರುತಿ ಮಾನಪಡೆ, ಬಿ. ಶಾಮಸುಂದರ ಮೊದಲಾದವರ ಹೋರಾಟ ನನಗೆ ಪ್ರೇರಣೆಯಾಯಿತು’ ಎಂದರು.

‘ಕಾಮ್ರೆಡ್ ಬಾಬುರಾವ್ ಹೊನ್ನಾ, ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ, ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಸದಸ್ಯರಾದ ವಿಜಯಕುಮಾರ ಸೋನಾರೆ ಮೊದಲಾದವರು ನಡೆಸಿಕೊಟ್ಟ ಸಂವಾದಕ್ಕೆ ಪ್ರತಿಕ್ರಿಯಿಸಿದರು.

ಹಿರಿಯ ಸಾಹಿತಿ ಡಾ. ಕೆ.ಎಸ್. ಬಂಧು ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನಮ್ಮ ಹಕ್ಕುಗಳನ್ನು ಬೇಡುವುದಲ್ಲ, ಅವುಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಬೇರೆ ಪ್ರದೇಶಕ್ಕೆ ಹೋಲಿಸಿದರೆ ಬೀದರ್ ನೆಲ ಸೌಹಾರ್ದತೆಗೆ ಹೆಸರಾಗಿದೆ. ಅದಕ್ಕೆ ಬಸವಾದಿ ಶರಣರ ಸರ್ವ ಸಮತೆಯ, ಮಾನವೀಯ ಸಂವೇದನೆಗಳೇ ಸ್ಪೂರ್ತಿ’ ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ನುಡಿ ನುಡಿಯುತ್ತ ‘ಸಾಧಕರ ಮನದಾಳದ ಸಂವೇದನೆಗಳ ಅಭಿವ್ಯಕ್ತಿಗಾಗಿ ವಿಶೇಷವಾಗಿ ತಮ್ಮ ಸುತ್ತಲಿನ ಪರಿಸರದಲ್ಲಿರುವವರಿಗೆ ಸಾಧಕರನ್ನು ಪರಿಚಯಿಸುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

‘ಕನ್ನಡ ಸಾಹಿತ್ಯ ಪರಿಷತ್ತು ಸಾಮಾಜಿಕ ನ್ಯಾಯದ ಪರವಾಗಿ ನಿಂತು ಕೆಲಸ ಮಾಡುತ್ತಿದ್ದು ಬರುವ ದಿನಗಳಲ್ಲಿ ದಾಸ ಹಾಗೂ ದಲಿತ ಸಾಹಿತ್ಯ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವಂತ ಕಾರ್ಯಕ್ರಮ ಆಯೋಜಿಸಲಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ‘ಈ ನೆಲದಲ್ಲಿ ಸೌಹಾರ್ದತೆ ನೆಲೆಗೊಳ್ಳಲು ದಲಿತರೂ ಹೋರಾಟ ಮಾಡಿದ್ದಾರೆ. ಆದರೆ ಚರಿತ್ರೆಯಲ್ಲಿ ಎಲ್ಲಿಯೂ ದಾಖಲಾಗಿಲ್ಲ ಎಂದು ವಿಶಾದ ವ್ಯಕ್ತಪಡಿಸಿದರು.

‘ದಲಿತ ಚಳವಳಿಯನ್ನು ಸಮತೆಗಾಗಿ ಹಾಗೂ ಭೂಮಿಗಾಗಿ ಅದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಾಚಾರ್ಯ ಶಿವಶಂಕರ ಟೋಕರೆ, ಪ್ರೊ. ಜಗನ್ನಾಥ ಕಮಲಾಪುರೆ, ಎಂ.ಪಿ. ಮುದಾಳೆ, ಸುನೀಲ ಭಾವಿಕಟ್ಟಿ ಕಸ್ತೂರಬಾಯಿ ಬೌದ್ಧೆ ಇದ್ದರು. ಬಸವರಾಜ ಬಲ್ಲೂರ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಶಿವಕುಮಾರ ಕಟ್ಟೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.