ADVERTISEMENT

ಸೋಯಾಬಿನ್ ಬಿತ್ತನೆ ಬೀಜಕ್ಕೆ ನಿಲ್ಲದ ಪರದಾಟ

ತಾಲ್ಲೂಕಿನಾದ್ಯಂತ ಉತ್ತಮ ಮಳೆ: ಚುರುಕು ಪಡೆದುಕೊಂಡ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:40 IST
Last Updated 13 ಜೂನ್ 2025, 16:40 IST
ಔರಾದ್ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿರುವುದು
ಔರಾದ್ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿರುವುದು   

ಔರಾದ್: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ.

ತಾಲ್ಲೂಕಿನ ಶೇ 80ರಷ್ಟು ರೈತರು ತಮ್ಮ ಹೊಲದಲ್ಲಿ ಸೋಯಾಬಿನ್ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಸಹಜವಾಗಿಯೇ ಸೋಯಾ ಬಿತ್ತನೆ ಬೀಜಕ್ಕೆ ಬೇಡಿಕೆ ಜಾಸ್ತಿಯಾಗಿದೆ. ಹೀಗಾಗಿ ಬಹುತೇಕ ಎಲ್ಲ ಬೀಜ ವಿತರಣೆ ಕೇಂದ್ರದ ಎದುರು ರೈತರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಈಗಾಗಲೇ ಬಹುತೇಕ ಬಿತ್ತನೆ ಬೀಜ ವಿತರಣೆ ಮುಗಿದಿದ್ದರೂ ರೈತರು ವಿತರಣೆ ಕೇಂದ್ರಕ್ಕೆ ಬರುವುದು ನಿಂತಿಲ್ಲ. ಇನ್ನು ನಮಗೆ ಬೀಜ ಸಿಕ್ಕಿಲ್ಲ ಎಂದು ಅನೇಕ ಗ್ರಾಮಗಳ ರೈತರು ಗೋಳಾಡುತ್ತಿದ್ದಾರೆ.

ADVERTISEMENT

‘ಕಮಲನಗರ ಹಾಗೂ ಔರಾದ್ ತಾಲ್ಲೂಕು ಸೇರಿ ಒಟ್ಟು 35 ಸಾವಿರ ಕ್ವಿಂಟಲ್ ಸೋಯಾಬಿನ್ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ಪೈಕಿ ಈಗಾಗಲೇ 30 ಸಾವಿರ ಕ್ವಿಂಟಲ್ ಬೀಜ ವಿತರಿಸಿದ್ದೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದ್ದಾರೆ.

ಪ್ರಭು ಚವಾಣ್

ಕೌಠಾದಲ್ಲಿ ರೈತರ ಪ್ರತಿಭಟನೆ

ಔರಾದ್: ತಾಲ್ಲೂಕಿನ ಕೌಠಾ (ಬಿ) ಗ್ರಾಮದ ರೈತ ಸಂಪರ್ಕ ಕೇಂದ್ರದ ಬಳಿ ರೈತರು ಶುಕ್ರವಾರ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಈಗಾಗಲೇ ಮಳೆಯಾಗಿ ಬಿತ್ತನೆ ಶುರುವಾಗಿದೆ. ಆದರೆ ನಮಗೆ ಇನ್ನೂ ಬೀಜ ಸಿಕ್ಕಿಲ್ಲ ಎಂದು ಬಲ್ಲೂರ್ ಕೌಡಗಾಂವ್ ಆಲೂರ್ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ರಸ್ತೆಯಲ್ಲಿ ವಾಹನ ಸಂಚಾರ ತಡೆದರು. ಈಗಾಗಲೇ ಕೌಠಾ ಗ್ರಾಮಸ್ಥರಿಗೆ ಬೀಜ ವಿತರಿಸಲಾಗಿದೆ. ಆಲೂರ್ ಬೇಲೂರ ಕೌಡಗಾಂವ್ ಗ್ರಾಮಸ್ಥರಿಗೆ ನಾಳೆ ಬೀಜ ವಿತರಿಸುತ್ತೇವೆ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದ್ದಾರೆ.

ಹೆಚ್ಚುವರಿ ಬೀಜಕ್ಕೆ ಶಾಸಕ ಚವಾಣ್ ಬೇಡಿಕೆ

ಔರಾದ್: ‘ಕ್ಷೇತ್ರದ ರೈತರು ಸೋಯಾಬಿನ್ ಬೀಜಕ್ಕಾಗಿ ಪರದಾಡುತ್ತಿದ್ದು ಸರ್ಕಾರ ಅಗತ್ಯ ಬಿತ್ತನೆ ಬೀಜದ ವ್ಯವಸ್ಥೆ ಮಾಡಬೇಕು’ ಎಂದು ಶಾಸಕ ಪ್ರಭು ಚವಾಣ್ ಆಗ್ರಹಿಸಿದ್ದಾರೆ. ‘ಕಮಲನಗರ ಔರಾದ್ ತಾಲ್ಲೂಕಿನ ರೈತರು ಸೋಯಾಬಿನ್ ಬೀಜದ ಮೇಲೆ ಅವಲಂಬಿತರಾಗಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ದರೂ ರೈತರಿಗೆ ಸಾಕಾಗುವಷ್ಟು ಬೀಜ ವಿತರಿಸಿಲ್ಲ. ಹೀಗಾಗಿ ಬೀಜದ ಕೊರತೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಯಾವುದೇ ಕಾರಣಕ್ಕೂ ರೈತರಿಗೆ ಬೀಜದ ಕೊರತೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.