
ಭಾಲ್ಕಿ: ‘ಲಿಂ.ಶಿವಕುಮಾರ ಸ್ವಾಮೀಜಿ ದಾಸೋಹ ತತ್ವ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಹಿರೇಮಠ ಸಂಸ್ಥಾನದ ನಿರಂಜನ ಸ್ವಾಮೀಜಿ ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಹಿತೈಷಿಗಳ ಸಂಘ ಭಾಲ್ಕಿ ಸಹಯೋಗದಲ್ಲಿ ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸ್ಮರಣೆ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಅನ್ನದಾಸೋಹ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸಿದ್ಧಗಂಗೆ ಮಠದಲ್ಲಿ ಪೂಜ್ಯರು ತಮ್ಮ ಜೀವಿತಾವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಉಚಿತ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ಬಸವಣ್ಣನವರು ಬೋಧಿಸಿದ ಕಾಯಕ ದಾಸೋಹ ತತ್ವವನ್ನು ಪೂಜ್ಯರು ನಿಜ ಜೀವನದಲ್ಲಿ ಆಚರಣೆಗೆ ತಂದು ಸಮಾಜದಲ್ಲಿನ ಬಡವರು, ದುರ್ಬಲರು, ನಿರ್ಗತಿಕ ಮಕ್ಕಳ ಬಾಳನ್ನು ಉಜ್ವಲಗೊಳಿಸುವ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.
ಬಸವಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಿದ್ಧಗಂಗಾ ಹಳೆ ವಿದ್ಯಾರ್ಥಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚಂದ್ರಶೇಖರ ಬನ್ನಾಳೆ, ತಾಲ್ಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ವಂಕೆ, ಆಕಾಶ ಪಾಟೀಲ, ವೀರೇಶ ಚೀಲಶೆಟ್ಟೆ, ಪವನ ಶಿಂಧೆ, ಮಹೇಶ ಗೋಧೆ, ಸಂಗಮೇಶ ಮೈನಳ್ಳಿ, ಪ್ರಕಾಶ ವಾಲೆ, ಆಕಾಶ ಕಾರಾಮುಂಗೆ, ಆಕಾಶ ರೆಡ್ಡಿ, ಅರವಿಂದ ಕುಲಕರ್ಣಿ, ಸಂಗಮೇಶ ಜೈನಾಪುರೆ ಸೇರಿದಂತೆ ಹಲವರು ಇದ್ದರು.
ಸಿದ್ಧಗಂಗಾ ಹಳೆ ವಿದ್ಯಾರ್ಥಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಸೋಮನಾಥ ತುಗಶೆಟ್ಟೆ ಸ್ವಾಗತಿಸಿದರು. ಗುಂಡಪ್ಪ ಸಂಗಮಕರ್ ನಿರೂಪಿಸಿದರು. ಈಶ್ವರ ರುಮ್ಮಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.