ADVERTISEMENT

ಪ್ರತಿಭಟಿಸಿದವರು ಬಿಜೆಪಿ ಕಾರ್ಯಕರ್ತರೇ ಅಲ್ಲ: ಭಗವಂತ ಖೂಬಾ

ಸಂಸದ ಭಗವಂತ ಖೂಬಾ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 15:39 IST
Last Updated 26 ಮಾರ್ಚ್ 2021, 15:39 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ಬಸವಕಲ್ಯಾಣದಲ್ಲಿ ಪಕ್ಷದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದವರು ಬಿಜೆಪಿ ಕಾರ್ಯಕರ್ತರೇ ಅಲ್ಲ’ ಎಂದು ಸಂಸದ ಭಗವಂತ ಖೂಬಾ ಪ್ರತಿಕ್ರಿಯಿಸಿದ್ದಾರೆ.

‘ರಾಷ್ಟ್ರೀಯ ಪಕ್ಷದಲ್ಲಿ ಸಂಸದರೊಬ್ಬರೇ ತೀರ್ಮಾನ ಕೈಗೊಳ್ಳುವುದಿಲ್ಲ. ಪಕ್ಷದ ಅಭ್ಯರ್ಥಿ ಆಯ್ಕೆ ಸಮಿತಿ ಸಮೀಕ್ಷೆ ನಡೆಸಿದೆ. ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನೂ ಸಂಗ್ರಹಿಸಿದೆ. ಅದರ ಅನುಸಾರ ಗೆಲ್ಲುವ ಅವಕಾಶ ಇರುವ ಅಭ್ಯರ್ಥಿಗೆ ಟಿಕೆಟ್‌ ಕೊಡಲಾಗಿದೆ. ನನ್ನ ವಿರುದ್ಧ ಆರೋಪ ಮಾಡುವವರು ಬುದ್ಧಿ ಹೀನರು’ ಎಂದು ಹೇಳಿದ್ದಾರೆ.

‘ಬಿಜೆಪಿ ಕಾರ್ಯಕರ್ತರು ದೇಶ ಹಾಗೂ ಸಮಾಜ ಸೇವೆಗೆ ಸಮರ್ಪಣೆ ಮಾಡಿಕೊಂಡಿದ್ದಾರೆ. ಪಕ್ಷ ರಾಜಕೀಯವನ್ನು ಒಂದು ಮಾಧ್ಯಮವನ್ನಾಗಿ ಸಮಾಜ ಸೇವೆಗೆ ಬಳಸಿಕೊಳ್ಳುತ್ತಿದೆ ಅಷ್ಟೇ. ಬೀದಿಗಿಳಿದು ಪ್ರತಿಭಟನೆ ನಡೆಸುವ ಸಂಪ್ರದಾಯ ನಮ್ಮ ಪಕ್ಷದಲ್ಲಿ ಇಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ನಾನು ಪಕ್ಷ ಒಪ್ಪಿತ ಅಭ್ಯರ್ಥಿ: ಸಲಗರ

ಬೀದರ್‌: ‘ನನ್ನ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪಕ್ಷ ಟಿಕೆಟ್‌ ನೀಡಿದೆ. ನಾನು ಪಕ್ಷ ಒಪ್ಪಿತ ಅಭ್ಯರ್ಥಿ. ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇಟ್ಟು ಟಿಕೆಟ್‌ ಕೊಡಿಸಲು ಸಹಕರಿಸಿದವರಿಗೆ ಕೃತಜ್ಞನಾಗಿದ್ದೇನೆ. ಒಬ್ಬರಿಗೆ ಟಿಕೆಟ್‌ ಸಿಕ್ಕಾಗ, ಸಿಗದವರಿಗೆ ಬೇಸರವಾಗುವುದು ಸಹಜ. ಚುನಾವಣೆಯಲ್ಲಿ ಎಲ್ಲರೂ ನನ್ನ ಪರವಾಗಿ ಕೆಲಸ ಮಾಡಲಿದ್ದಾರೆ ಎನ್ನುವ ವಿಶ್ವಾಸ ಇದೆ’ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹೇಳಿದ್ದಾರೆ.

‘ಮಾರ್ಚ್ 30ರಂದು ಬೆಳಿಗ್ಗೆ 11 ಗಂಟೆಗೆ ಪಕ್ಷದ ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ ಕಟೀಲ್, ಸಂಸದ ಭಗವಂತ ಖೂಬಾ ಸೇರಿದಂತೆ ಪ್ರಮುಖರು ಉಪಸ್ಥಿತರಿರುವರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.