ADVERTISEMENT

ರಾಜ್ಯಮಟ್ಟದ ಪಶು ಮೇಳಕ್ಕೆ ಸಂಭ್ರಮದ ತೆರೆ

ನೆನಪಿನ ಬುತ್ತಿಯೊಂದಿಗೆ ಊರಿಗೆ ಮರಳಿದ ಜಾನುವಾರು ಮಾಲೀಕರು

ನಾಗೇಶ ಪ್ರಭಾ
Published 9 ಫೆಬ್ರುವರಿ 2020, 19:45 IST
Last Updated 9 ಫೆಬ್ರುವರಿ 2020, 19:45 IST
ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪಶು ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪಶು ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ಜನವಾಡ: ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಬೀದರ್ ತಾಲ್ಲೂಕಿನ ಕಮಠಾಣ ಸಮೀಪ ಇರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಮೂರನೆಯ ರಾಜ್ಯಮಟ್ಟದ ಪಶು ಮೇಳ ಭಾನುವಾರ ಸಂಭ್ರಮದ ನಡುವೆ ತೆರೆ ಕಂಡಿತು.

ಕರ್ನಾಟಕ, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ರೈತರು ಮೂರು ದಿನಗಳ ಮೇಳಕ್ಕೆ ಸಾಕ್ಷಿಯಾದರು.

ಮೇಳ ಸಂಘಟಿಸಿದ್ದ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಸಾರ್ಥಕ್ಯದ ಭಾವದಿಂದ ಬೀಗಿದರೆ, ಆಕಳು, ಎಮ್ಮೆ, ಹೋರಿ, ಎತ್ತು, ಕೋಣ, ಕುರಿ, ಮೇಕೆ, ಕೋಳಿ, ಗಿಳಿ, ಮೊಲ ಮೊದಲಾದವುಗಳನ್ನು ಪ್ರದರ್ಶನಕ್ಕೆ ತಂದಿದ್ದ ವಿವಿಧೆಡೆಯ ರೈತರು ಮೇಳದ ಸವಿ ನೆನಪುಗಳೊಂದಿಗೆ ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು.

ADVERTISEMENT

ಮೇಳವು ಪಶುಪಾಲನೆ, ತೋಟಗಾರಿಕೆ, ಕೃಷಿ, ಮೀನುಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ಭರಪೂರ ಮಾಹಿತಿ ಒದಗಿಸಿತು. ನವೀನ ತಳಿಯ ಜಾನುವಾರುಗಳು, ಮನೆಯಲ್ಲಿ ಸಾಕಬಹುದಾದ ಪ್ರಾಣಿ, ಪಕ್ಷಿಗಳು, ಪಶುಪಾಲನೆ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು, ಆವಿಷ್ಕಾರಗಳ ಮೇಲೂ ಬೆಳಕು ಚೆಲ್ಲಿತು.

ಬೀದರ್ ಜಿಲ್ಲೆಯ ಜನರಿಗೆ ಮಲೆನಾಡು ಗಿಡ್ಡ, ಪುಂಗನೂರು ತಳಿಯ ಆಕಳು, ಹೋರಿ, ಒಂಗೋಲ್ ಹೋರಿ, ಕಾಂಕ್ರೇಜ್ ಎತ್ತು, ಜಾಫ್ರಾಬಾದಿ ಗಿರ್ ಕೋಣ, ಲಾಲ ಕಂಧಾರಿ ಎತ್ತು, ಹಳ್ಳಿಕಾರ ಎತ್ತು, ಮುರ್ರಾ ಎಮ್ಮೆ, ಕಿಲಾರಿ ಎತ್ತು, ಹೋರಿ, ಕಾವೇರಿ ಕೋಳಿ, ಗಿಣಿ ಕೋಳಿ, ಅಸೀಲ್ ಕೋಳಿ, ಶಿರೋಹಿ ಮೇಕೆ, ಜಮುನಾಪುರಿ ಮೇಕೆ, ತೋತಾಪುರಿ ಮೇಕೆ, ಬೀಟಲ್ ಮೇಕೆ, ಯಳಗಾ ಕುರಿ ಮೊದಲಾದ ತಳಿಗಳ ಪರಿಚಯ ಮಾಡಿಕೊಟ್ಟಿತು. ಪಶು ಪಾಲನೆ ಕ್ಷೇತ್ರದ ಹೊಸ ಅನುಭವವನ್ನು ನೀಡಿತು.

ಶ್ವಾನಗಳ ಪ್ರದರ್ಶನವು ವಿವಿಧ ದೇಶಗಳ ತಳಿಗಳ ನಾಯಿಗಳನ್ನು ನೋಡುವ ಸುಯೋಗ ದೊರಕಿಸಿಕೊಟ್ಟಿತು. ಭಿನ್ನ ಮುಖ, ಸ್ವಭಾವ, ಹಾವಭಾವದ ನಾಯಿಗಳು ಜನರಿಗೆ ರಂಜನೆ ಒದಗಿಸಿದವು. ಅಧಿಕ ಜನರ ಭೇಟಿ: ಕೊನೆಯ ದಿನ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೇಳಕ್ಕೆ ಬಂದಿದ್ದರು. ಭಾನುವಾರ ರಜಾ ದಿನ ಆಗಿದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಮೇಳಕ್ಕೆ ಕರೆದುಕೊಂಡು ಬಂದಿದ್ದರು. ಮೇಳದಲ್ಲಿ ತೆರೆಯಲಾಗಿದ್ದ ತಿಂಡಿ ತಿನಿಸು, ಐಸ್‌ಕ್ರೀಂ, ಬಟ್ಟೆ, ಬರೆ, ಗೃಹೋಪಯೋಗಿ ಸಾಮಗ್ರಿ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.