ADVERTISEMENT

ಜನರ ಸಮಸ್ಯೆ ತಿಳಿಯಲು ಗ್ರಾಮ ವಾಸ್ತವ್ಯ ಸಹಕಾರಿ: ಕಂದಾಯ ಸಚಿವ ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 28 ಮೇ 2022, 15:17 IST
Last Updated 28 ಮೇ 2022, 15:17 IST
ಬೀದರ್‌ ತಾಲ್ಲೂಕಿನ ಚಾಂಬೋಳ್‌ ಗ್ರಾಮದಲ್ಲಿ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್‍ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ಮಹಿಳೆಯೊಬ್ಬರಿಗೆ ಪ್ರಮಾಣಪತ್ರ ವಿತರಿಸಿದರು
ಬೀದರ್‌ ತಾಲ್ಲೂಕಿನ ಚಾಂಬೋಳ್‌ ಗ್ರಾಮದಲ್ಲಿ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್‍ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ಮಹಿಳೆಯೊಬ್ಬರಿಗೆ ಪ್ರಮಾಣಪತ್ರ ವಿತರಿಸಿದರು   

ಜನವಾಡ: ಜನರ ಸಮಸ್ಯೆ ತಿಳಿದುಕೊಳ್ಳಲು, ಅರ್ಹರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಗ್ರಾಮ ವಾಸ್ತವ್ಯ ನೆರವಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಬೀದರ್‌ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ವಾಸ್ತವ್ಯವು ಅಧಿಕಾರಿಗಳ ಪಾಲಿಗೆ ಪಾಠಶಾಲೆಯಾಗಿದೆ. ವಾಸ್ತವ್ಯ ಮಾಡಿದಾಗಲೇ ಊರಿನ ಸಮಸ್ಯೆ ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ತಾಲ್ಲೂಕಿಗೆ ಭೇಟಿ ನೀಡಿದರೆ ಜನರಿಗೆ ಅನುಕೂಲವಾಗುತ್ತದೆ. ತಾಲ್ಲೂಕು ಕಚೇರಿಯಲ್ಲಿನ ಕೆಲಸ ಕಾರ್ಯಗಳ ಪರಿಶೀಲನೆ ಸಾಧ್ಯವಾಗುತ್ತದೆ. ಅರ್ಜಿ ವಿಲೇವಾರಿ ವೇಗವಾಗಿ ನಡೆಯುತ್ತದೆ ಎಂದು ಹೇಳಿದರು.

ADVERTISEMENT

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಚಾಂಬೋಳ್ ಗ್ರಾಮದ ಕಾರ್ಯಕ್ರಮಕ್ಕೆ ಬರುವಂತೆ ಕೇಳಿಕೊಂಡಿದ್ದರು. ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯವನ್ನು ಜನರಿಗೆ ತಲುಪಿಸುವ ಸೂರ್ಯಕಾಂತ ಅವರ ಉದ್ದೇಶ ಮಾದರಿಯಾಗಿದೆ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಕಂದಾಯ ಸಚಿವರು ಹಲವು ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಆರಂಭಿಸಿದ್ದಾರೆ. ಇಲ್ಲೇ ಡ್ರಾ, ಇಲ್ಲಿಯೇ ಬಹುಮಾನ ಎನ್ನುವಂತೆ ಈ ಕಾರ್ಯಕ್ರಮ ನಡೆಯುತ್ತಿವೆ. ಜನರಿಗೆ, ರೈತರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದು ಹೇಳಿದರು.

ಸಚಿವರ ಭೇಟಿ ನಿಗದಿಯಾಗುತ್ತಲೇ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್‍ನಿಂದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಅರ್ಜಿ ಮತ್ತಿತರ ದಾಖಲೆಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲಾಗಿದೆ. ಸರ್ಕಾರದ ಯೋಜನೆಗಳ ಲಾಭವು ಅರ್ಹರಿಗೆ ತಲುಪಿಸಬೇಕು ಎಂಬ ಕಾಳಜಿಯಿಂದ ನಾಗಮಾರಪಳ್ಳಿ ಫೌಂಡೇಷನ್ ಕೆಲಸ ಮಾಡಿದೆ ಎಂದು ತಿಳಿಸಿದರು.

ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಆದರೆ, ಮಾಹಿತಿ ಕೊರತೆಯಿಂದಾಗಿ ಹೆಚ್ಚಿನ ಜನ ಸಾಮಾಜಿಕ ಭದ್ರತಾ ಯೋಜನೆ ಪ್ರಯೋಜನ ಪಡೆದಿರಲಿಲ್ಲ. ಜನರಿಗೆ ಸೌಲಭ್ಯ ತಲುಪಿಸಲು ನಾಗಮಾರಪಳ್ಳಿ ಫೌಂಡೇಷನ್ ಮುಂದಾಗಿದೆ ಎಂದು ಹೇಳಿದರು.

ಚಾಂಬೋಳ್ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಚಿವ ಪ್ರಭು ಚವಾಣ್ ಅವರಿಂದಾಗಿಯೇ ಚಾಂಬೋಳ್ ಕಾರ್ಯಕ್ರಮಕ್ಕೆ ತಡವಾಯಿತು ಎಂದು ಸೂರ್ಯಕಾಂತ ಬೇಸರ ವ್ಯಕ್ತಪಡಿಸಿದರು.

ಸಚಿವ ಚವಾಣ್ ಅವರು ಈ ರೀತಿ ಮಾಡಬಾರದಿತ್ತು. ಕಂದಾಯ ಸಚಿವರನ್ನು ಹೆಚ್ಚು ಕಾಲ ವಡಗಾಂವ್‍ನಲ್ಲಿ ಉಳಿಸಿಕೊಂಡಿದ್ದು ಸರಿಯಲ್ಲ ಎಂದರು.

ರುದ್ರಮುನಿ ಪಟ್ಟದ್ದೇವರು, ಶಾಸಕ ರಹೀಂ ಖಾನ್, ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಮುಖಂಡರಾದ ಫರ್ನಾಂಡೀಸ್ ಹಿಪ್ಪಳಗಾಂವ್, ಬಾಲಾಜಿ ಚಹ್ವಾಣ್, ನಾಗೇಂದ್ರ ಪಾಟೀಲ, ವೆಂಕಟರಾವ್ ಶೇರಿಕಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.