ADVERTISEMENT

ಸ್ವಾಮೀಜಿಗಳ ಕಾರ್ಯ ಪ್ರಶಂಸನೀಯ: ನಡ್ಡಾ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಠಾಧೀಶರಿಗೆ ಪಾಕೆಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2023, 12:33 IST
Last Updated 21 ಏಪ್ರಿಲ್ 2023, 12:33 IST
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ‘ಜಿಲ್ಲೆಯ ಮಠಾಧೀಶರೊಂದಿಗೆ ಸಂವಾದ‘ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿದರು
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ‘ಜಿಲ್ಲೆಯ ಮಠಾಧೀಶರೊಂದಿಗೆ ಸಂವಾದ‘ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿದರು   

ಬೀದರ್: ‘ಭಾರತೀಯ ಸಂಸ್ಕೃತಿ, ಸಾಂಪ್ರದಾಯಿಕ ಕೃಷಿ ಹಾಗೂ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತಿರುವ ಜಿಲ್ಲೆಯ ಸ್ವಾಮಿಗಳ ಕಾರ್ಯ ಪ್ರಶಂಸನೀಯವಾಗಿದೆ‘ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ‘ಜಿಲ್ಲೆಯ ಮಠಾಧೀಶರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿವೇಕಾನಂದ ಆಶ್ರಮವು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ದಿಸೆಯಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿದೆ. ಗೋಸೇವೆ ಮಾಡುವ ಮೂಲಕ ಇನ್ನುಳಿದವರಿಗೂ ಪ್ರೇರಣೆ ನೀಡುತ್ತಿರುವುದು ಒಳ್ಳೆಯ ಕಾರ್ಯವಾಗಿದೆ’ ಎಂದು ಬಣ್ಣಿಸಿದರು.

ADVERTISEMENT

‘ವಿವೇಕಾನಂದರು ಜ್ಞಾನದ ಬೆಳಕಿನ ಮೂಲಕ ಸಮಾಜವನ್ನು ಪ್ರಕಾಶಮಾನವಾಗಿ ಮಾಡಿದ್ದಾರೆ. ಜಿಲ್ಲೆಯ ಪವಿತ್ರ ನೆಲದಲ್ಲಿ ಮೊದಲ ದಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಬರಲು ಅವಕಾಶ ದೊರೆತ್ತಿದ್ದು, ನನ್ನ ಭಾಗ್ಯ’ ಎಂದರು.

ಗುಂಪಾದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ವ್ಯಕ್ತಿಯ ಬೆಳವಣಿಗೆಯಲ್ಲಿ ಸ್ವಭಾವ ಹಾಗೂ ಪ್ರಭಾವ ಮಹತ್ವದ ಪಾತ್ರ ವಹಿಸುತ್ತವೆ. ರಾಮಕೃಷ್ಣ ಆಶ್ರಮದ ಸ್ವಭಾವ ಹಾಗೂ ಪ್ರಭಾವದಿಂದಾಗಿ ಜಿಲ್ಲೆಯ ಮಠಾಧೀಶರು ಇಲ್ಲಿಗೆ ಸೇರಲು ಕಾರಣವಾಗಿದೆ’ ಎಂದರು.

‘ರಾಮಕೃಷ್ಣ ಆಶ್ರಮವು ಸಿದ್ಧಿಗಾಗಿ ಕಾರ್ಯಮಾಡುತ್ತಿದೆಯೇ ಹೊರತು ಪ್ರಸಿದ್ಧಿಗಾಗಿ ಅಲ್ಲ. ಇಲ್ಲಿ ವ್ಯಕ್ತಿತ್ವ ವಿಕಸನದ ತರಬೇತಿ ಪಡೆಯಲು ಎಲ್ಲ ಸಮುದಾಯದ ಯುವಕರು ಬರುತ್ತಾರೆ. ಆಶ್ರಮದ ಕಾರ್ಯ ಅನುಕರಣೀಯವಾಗಿದೆ’ ಎಂದು ತಿಳಿಸಿದರು.

ಸ್ವಾಮಿ ಜ್ಯೋತಿರ್ಮಯಾನಂದಜಿ ಸ್ವಾಮೀಜಿ, ‘ಭಾರತ ವಿಶ್ವಗುರು ಆಗಬೇಕು ಎನ್ನುವುದು ವಿವೇಕಾನಂದರ ಕನಸು ಆಗಿತ್ತು. ಆ ದಿಸೆಯಲ್ಲಿ ಎಲ್ಲ ಬಗೆಯ ಪ್ರಯತ್ನಗಳು ನಡೆದಿವೆ’ ಎಂದರು.

‘ಬಸವೇಶ್ವರರು ಜ್ಞಾನ ಪ್ರಸಾರದ ಮೂಲಕ ಕೈಗಳಿಂದಲೇ ಬರೆಯಿಸಿ ಇಲ್ಲಿಯೇ ಕೈಲಾಸ ಸೃಷ್ಟಿಸಿದರು. ಮಹತ್ಮರ ಪುಣ್ಯಭೂಮಿಯಲ್ಲಿರುವ ನಾವು ಪರಂಪರೆ ಹಾಗೂ ಸಂಸ್ಕೃತಿಯ ಬಗ್ಗೆ ಸ್ವಾಭಿಮಾನ ಹೊಂದಬೇಕಿದೆ’ ಎಂದು ತಿಳಿಸಿದರು.

ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಬೀದರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರಸಿಂಗ್‌ ಠಾಕೂರ್, ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಅಧ್ಹಕ್ಷ ಮಾರುತಿರಾವ್ ಮುಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಇದ್ದರು.

ಗುಂಪಾದ ಶಿವಕುಮಾರ ಸ್ವಾಮೀಜಿ, ಭಾತಂಬ್ರಾದ ಹಾವಗಿಲಿಂಗೇಶ್ವರ ಸ್ವಾಮೀಜಿ, ಹೊಣೆಗಾಂವ ಶಿವಾಚಾರ್ಯರು, ರಾಚಟೇಶ್ವರ ಬಸವಲಿಂಗ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಬಸವಲಿಂಗ ದೇವರು, ಶರಣಕುಮಾರ ದೇವರು, ಶಿವಾನಂದ ಸ್ವಾಮೀಜಿ, ಧುಮ್ಮನಸೂರಿನ ಶಂಕರಲಿಂಗ ಸ್ವಾಮೀಜಿ, ಉದಯರಾಜೇಂದ್ರ ಸ್ವಾಮೀಜಿ, ಮಂಠಾಳದ ಶಿವಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.

ಸೋಮನಾಥ ಪಾಟೀಲ, ಸೂರ್ಯಕಾಂತ ಡೋಣಿ, ಬಸವರಾಜ ಜೋಜನಾ ಇದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಮಠಾಧೀಶರಿಗೆ ಪಾಕೆಟ್‌ಗಳನ್ನು ಕೊಡಲಾಯಿತು. ಇದಕ್ಕೂ ಮೊದಲು ಜೆ.ಪಿ.ನಡ್ಡಾ ಅವರು ಆಶ್ರಮದ ಗೋಶಾಲೆಗೆ ತೆರಳಿ ಗೋ ಪೂಜೆ ಮಾಡಿದರು. ನಂತರ ಆಶ್ರಮದಲ್ಲಿ ರಾಮಕೃಷ್ಣ ಪರಮಹಂಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.