
ಬೀದರ್: ‘ವಲಿಗ್ಯಾ.. ವಲಿಗ್ಯಾ.. ಚಾಲೋಂ ಪಲಿಗ್ಯಾ..
ಶುಕ್ರವಾರ ಎಲ್ಲೆಡೆ ಅನುರಣಿಸಿದ ಪದಗಳಿವು. ಎಳ್ಳು ಅಮಾವಾಸ್ಯೆ ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ಹೊಲಗಳಲ್ಲಿ ರೈತಾಪಿ ವರ್ಗದಿಂದ ಭೂಮಿತಾಯಿಗೆ ಪೂಜೆ ಸಲ್ಲಿಸಿ, ಮೇಲಿನಂತೆ ಚರಗ ಚೆಲ್ಲುತ್ತ ಕೃತಜ್ಞತೆ ಸಲ್ಲಿಸಿದರು.
ಹೊಲದಲ್ಲಿ ಜೋಳದ ಕಳಿಕೆಯಿಂದ ಮಾಡಿದ ಮಾಡಿರುವ ಕೊಂಪೆಯ ನಿರ್ಮಿಸಿದರು. ಕಬ್ಬು, ಬಿಳಿ ಜೋಳದ ದಂಟು, ಕಡಲೆ, ಕುಸುಬಿ, ಅಗಸಿ, ಗೋಧಿ ತೆನೆಗಳಿಂದ ಕೊಂಪೆ ಸಿಂಗರಿಸಿದ್ದರು. ಲಕ್ಷ್ಮೀ, ಭೂದೇವಿ, ಸರಸ್ವತಿ, ಪಾರ್ವತಿ ಹಾಗೂ ಭವಾನಿ ದೇವಿಯ ಪ್ರತೀಕವಾಗಿ ಐದು ಮಣ್ಣಿನ ಹೆಂಟೆ ಅಥವಾ ಕಲ್ಲುಗಳನ್ನಿಟ್ಟು ಅವುಗಳಿಗೆ ಪೂಜಿಸಿ, ಗೋಧಿ ಹಿಟ್ಟಿನಿಂದ ಮಾಡಿದ ಹಣತೆ ಬೆಳಗಿಸಿ ಪೂಜೆ ಸಲ್ಲಿಸಿದರು. ಕೊಂಪೆಯಲ್ಲಿ ಇರಿಸಿದ ವಿವಿಧ ಆಹಾರ ಪದಾರ್ಥಗಳನ್ನು ಕೊಂಪೆಯ ಸುತ್ತ ಜೋಳದ ದಂಟಿನಿಂದ ಚರಗ ಚೆಲ್ಲಿದರು. ಮುಂದಿರುವ ವ್ಯಕ್ತಿ ‘ವಲಿಗ್ಯಾ.. ವಲಿಗ್ಯಾ.. ಚಾಲೋಂ ಪಲಿಗ್ಯಾ.. ಎಂದು ಹೇಳಿದರು.
ಚರಗ ಚೆಲ್ಲಿ, ಕೊನೆಯಲ್ಲಿ ಕೊಂಪೆಗೆ ನಮಸ್ಕರಿಸಿ, ಮನೆಯ ಹೆಣ್ಣು ಮಕ್ಕಳು ಕನೊಲಿ, ಕರ್ಜಿಕಾಯಿ ಅವರ ಬೆನ್ನ ಮೇಲಿಟ್ಟರು. ದೇವರಿಗೆ ನಮಸ್ಕರಿಸುವ ವ್ಯಕ್ತಿ ಎಡಗೈಯಿಂದ ಪಡೆದು ತಿಂದರು. ನಂತರ ಎಲ್ಲರೂ ಕುಳಿತು ಸಾಮೂಹಿಕವಾಗಿ ಊಟ ಮಾಡಿದರು. ಬಂಧು, ಬಾಂಧವರು, ಸ್ನೇಹಿತರನ್ನು ಹೊಲಕ್ಕೆ ಕರೆಸಿಕೊಂಡು ಊಟ ಉಣಬಡಿಸಿ ಪ್ರೀತಿ ತೋರಿದರು.
ಹೆಣ್ಣು ಮಕ್ಕಳು ಜೋಕಾಲಿ ಆಡಿದರೆ, ಗಂಡು ಮಕ್ಕಳು ಕಬಡ್ಡಿ, ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಸಂಜೆ ಅಗ್ನಿಕುಂಡದಲ್ಲಿ ಹಾಲುಕ್ಕಿಸಿದರು. ಬುಟ್ಟಿ ಕೊಂಪೆಯಲ್ಲಿ ದೀಪ ಹಚ್ಚಿಕೊಂಡು ಅದನ್ನು ತಲೆಯ ಮೇಲೆ ಹೊತ್ತುಕೊಂಡು ಮನೆಗೆ ವಾಪಸಾದರು. ಹೊಲದಿಂದ ಮನೆ ಎಷ್ಟೇ ದೂರದಲ್ಲಿದ್ದರೂ ಆಯಾಸಪಟ್ಟು ನಿಲ್ಲಲಿಲ್ಲ. ಹಿಂತಿರುಗಿ ನೋಡಲಿಲ್ಲ. ಹೀಗೆ ಇಡೀ ಜಿಲ್ಲೆಯಾದ್ಯಂತ ಗ್ರಾಮೀಣ ಸೊಗಡಿನ ರೈತಾಪಿ ವರ್ಗದ ಎಳ್ಳು ಅಮಾವಾಸ್ಯೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ವರ್ಷಾಂತ್ಯದ ರೈತರ ಕೊನೆಯ ಹಬ್ಬವನ್ನು ಯಾವುದೇ ಕೊರತೆ ಇಲ್ಲದಂತೆ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Cut-off box - ಅಘೋಷಿತ ಬಂದ್ ಎಳ್ಳು ಅಮಾವಾಸ್ಯೆ ಗ್ರಾಮೀಣ ಸೊಗಡಿನ ಹಬ್ಬ. ಇದನ್ನು ಹೊಲಗಳಲ್ಲಿಯೇ ಆಚರಿಸುವುದರಿಂದ ಪಟ್ಟಣ ಹಾಗೂ ನಗರ ವಾಸಿಗಳೆಲ್ಲಾ ಹಳ್ಳಿಗಳಿಗೆ ತೆರಳುತ್ತಾರೆ. ಶುಕ್ರವಾರವೂ ಬಹುತೇಕರು ಕುಟುಂಬ ಸಮೇತ ಹೊಲಗಳಿಗೆ ತೆರಳಿದ ಕಾರಣ ಬೀದರ್ ನಗರ ಹಾಗೂ ತಾಲ್ಲೂಕು ಕೇಂದ್ರಗಳ ಪಟ್ಟಣಗಳಲ್ಲಿ ಒಂದು ರೀತಿಯಲ್ಲಿ ಅಘೋಷಿತ ಬಂದ್ ವಾತಾವರಣ ಇತ್ತು. ಮಧ್ಯಾಹ್ನವಂತೂ ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿತ್ತು. ಸಂಜೆ ಸೂರ್ಯ ಮುಳುಗಿದ ನಂತರವಷ್ಟೇ ಜನ ನಗರ ಪ್ರದೇಶಗಳಿಗೆ ವಾಪಸಾದರು. ದಿನವಿಡೀ ಬಹುತೇಕ ಮಳಿಗೆಗಳು ಬಾಗಿಲು ತೆರೆಯಲೇ ಇಲ್ಲ.
Cut-off box - ರಸ್ತೆಯುದ್ದಕ್ಕೂ ಖಡಕ್ ರೊಟ್ಟಿ.. ಎಳ್ಳು ಅಮಾವಾಸ್ಯೆಗೆ ಭಜ್ಜಿ ಅಂಬಲಿ ಹುಗ್ಗಿ ಸಜ್ಜೆ ಹಾಗೂ ಬಿಳಿ ಜೋಳದ ರೊಟ್ಟಿ ಊಟ ವಿಶೇಷ ಖಾದ್ಯಗಳು. ಖಡಕ್ ರೊಟ್ಟಿಯಿಲ್ಲದೇ ಹಬ್ಬ ಅಪೂರ್ಣ. ಈ ಕಾರಣಕ್ಕಾಗಿಯೇ ನಗರದ ಪ್ರಮುಖ ಮಾರ್ಗಗಳಲ್ಲಿ ಶುಕ್ರವಾರ ಬೆಳಕು ಹರಿಯುತ್ತಿದ್ದಂತೆ ಸಾಲುದ್ದ ಖಡಕ್ ರೊಟ್ಟಿಗಳನ್ನು ಮಾರಾಟ ಮಾಡಲಾಯಿತು. ವಿವಿಧ ಕಡೆಗಳಿಂದ ಜನ ಬಂದು ಖರೀದಿಸಿ ಕೊಂಡೊಯ್ದರು. ಇತ್ತೀಚಿನ ದಿನಗಳಲ್ಲಿ ರೊಟ್ಟಿ ಮಾಡುವವರ ಸಂಖ್ಯೆ ಕಡಿಮೆಯಾಗಿರುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಜೊತೆಗೆ ಈ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯ ರೊಟ್ಟಿ ಬೇಕಾಗುವ ಕಾರಣದಿಂದ ಮನೆಯಲ್ಲಿ ತಯಾರಿಸಲು ಅಸಾಧ್ಯ. ಆದಕಾರಣ ಮಳಿಗೆಗಳಲ್ಲಿ ಸಿದ್ಧ ರೊಟ್ಟಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.