ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಕಲ್ಯಾಣ ನಗರ ಆಚಾರ್ಯರ ತವರು ಮನೆ ಆಗಿದೆ. ಇಲ್ಲಿನ ತ್ರಿಪುರಾಂತ ಕೆರೆಗೆ ಜಗದ್ಗುರು ರೇವಣಸಿದ್ಧೇಶ್ವರರ ಹೆಸರಿಡಬೇಕು. ಮುಖ್ಯ ರಸ್ತೆಯಲ್ಲಿ ರೇಣುಕಾಚಾರ್ಯರ ವೃತ್ತ ಸ್ಥಾಪಿಸಬೇಕು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಸಲಹೆ ನೀಡಿದರು.
ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಬುಧವಾರ ರಾತ್ರಿ ನಡೆದ 34 ನೇ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿಕೊಂಡು ಅವರು ಮಾತನಾಡಿದರು.
‘ಸ್ಥಳೀಯ ಶಾಸಕರು ಮುಂದಾಳತ್ವ ವಹಿಸಿಕೊಂಡು ವೃತ್ತ ಸ್ಥಾಪಿಸುವ ನಿರ್ಧಾರಕ್ಕೆ ಬಂದರೆ ವಿಜಯ ದಶಮಿಯ ದಿನದಂದು ನಾವೇ ಸ್ವತಃ ಸಾಂಕೇತಿಕವಾಗಿ ಅದರ ಉದ್ಘಾಟನೆ ಮಾಡುತ್ತೇವೆ. ತ್ರಿಪುರಾಂತ ಗವಿಮಠ ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅದನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿಗೊಳಿಸಿದ್ದಾರೆ. ಆದ್ದರಿಂದ ಅದನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಅಧೀನಕ್ಕೆ ಪಡೆಯುವುದಕ್ಕೆ ಯಾರೂ ಪ್ರಯತ್ನಿಸಬಾರದು’ ಎಂದು ಸಹ ತಾಕೀತು ಮಾಡಿದರು.
‘ಚುನಾವಣೆ ಬಂದಾಗ ಎಲ್ಲ ಪಕ್ಷದವರೂ ರೈತರ ಹೆಸರು ಹೇಳಿ ಮತ ಪಡೆದು ಗೆಲ್ಲುತ್ತಾರೆ. ಆದರೆ, ನಂತರ ಮಾತ್ರ ಅವರ ನೆನಪಾಗುವುದಿಲ್ಲ. ಕೃಷಿಕರು ನಾನಾ ಕಾರಣಗಳಿಂದ ಸಂಕಟ ಅನುಭವಿಸುತ್ತಿದ್ದಾರೆ. ಅವರಿಗೆ ಸಹಕರಿಸುವ ಅಗತ್ಯವಿದೆ. ರಂಭಾಪುರಿ ಪೀಠದ ಧರ್ಮ ಧ್ವಜ ಹಸಿರು ಬಣ್ಣದ್ದಾಗಿದೆ. ಅಷ್ಟೇ ಅಲ್ಲ, ರೈತರಿಗಾಗಿ ಪೀಠದಿಂದ ವಿವಿಧ ರೀತಿಯಲ್ಲಿ ಅನುಕೂಲ ಕಲ್ಪಿಸಲಾಗುತ್ತಿದೆ. ರೇಣುಕಾಚಾರ್ಯರು ಅವತರಿಸಿದ ಕೊಲ್ಲಿಪಾಕಿ ಕ್ಷೇತ್ರದ ಕುರಿತಾದ ಗ್ರಂಥವನ್ನು ಇಂಗ್ಲಿಷ್ ಗೆ ಭಾಷಾಂತರಿಸಲಾಗಿದ್ದು, ತೆಲುಗು ಮತ್ತು ಮರಾಠಿಯಲ್ಲೂ ಪ್ರಕಟಿಸಲಾಗುತ್ತದೆ. ಹಾರಕೂಡ ಹಿರೇಮಠ ಕೂಡ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ಅಲ್ಲಿನ ಮಠಾಧೀಶರು ಸಹ ಜನಾನುರಾಗಿಯಾಗಿ ಬೆಳೆಯುತ್ತಿರುವುದು ಸಂತಸ ತಂದಿದೆ’ ಎಂದರು.
ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ, ಶಿವಣಿ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಬಿಜೆಪಿ ಮುಖಂಡ ಪ್ರಕಾಶ ಖಂಡ್ರೆ, ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ, ಉದ್ಯಮಿ ಸೂರ್ಯಕಾಂತ ಮಠ ಪಂಢರಗೇರಾ, ರಮೇಶ ರಾಜೋಳೆ, ಶಾಂತಾ ಆನಂದ ಮಾತನಾಡಿದರು.
ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಹುಮನಾಬಾದ್ ರೇಣುಕ ಗಂಗಾಧರ ಶಿವಾಚಾರ್ಯರು, ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಳಖೇಡ ಅಭಿನವ ಕಾರ್ತೀಕೇಶ್ವರ ಶಿವಾಚಾರ್ಯರು, ಶಾಸಕ ಬಸವರಾಜ ಮತ್ತಿಮಡು, ಉಪ ವಿಭಾಗಾಧಿಕಾರಿ ಮುಕುಲ್ ಜೈನ್, ರುದ್ರಮಣಿ ಮಠಪತಿ, ರವಿ ನಾವದ್ಗೇಕರ್, ಶ್ರೀಶೈಲ್ ವಾತಡೆ ಉಪಸ್ಥಿತರಿದ್ದರು. ಕೊಲ್ಲಿಪಾಕಿ ಕ್ಷೇತ್ರ ದರ್ಶನ ಗ್ರಂಥ ಬಿಡುಗಡೆಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.