ADVERTISEMENT

ಬೀದರ್‌: ಸಂಕಷ್ಟದಲ್ಲಿ ಮಾಂಸ, ಕುಕ್ಕುಟೋದ್ಯಮ

ಕುಟುಂಬ ನಿರ್ವಹಣೆಗೆ ಇದನ್ನೆ ನಂಬಿದ್ದ ವ್ಯಾಪಾರಿಗಳ ಸ್ಥಿತಿ ಗಂಭೀರ

ಚಂದ್ರಕಾಂತ ಮಸಾನಿ
Published 9 ಮೇ 2020, 2:19 IST
Last Updated 9 ಮೇ 2020, 2:19 IST
ಬೀದರ್‌ ಜಿಲ್ಲೆಯ ಕೋಳಿ ಫಾರ್ಮ್‌ವೊಂದರ ನೋಟ
ಬೀದರ್‌ ಜಿಲ್ಲೆಯ ಕೋಳಿ ಫಾರ್ಮ್‌ವೊಂದರ ನೋಟ   

ಬೀದರ್‌: ದೇಶದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡ ನಂತರ ಪಶು ಪಾಲಕರು ಹಾಗೂ ಮಾಂಸದ ಉದ್ಯಮದಲ್ಲಿ ತೊಡಗಿಸಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರ ಪ್ರದೇಶದಲ್ಲಿನ ಮಾಂಸದ ಅಂಗಡಿಗಳು ಬಾಗಿಲು ಮುಚ್ಚಿ ಒಂದು ತಿಂಗಳಾಗಿದೆ. ವ್ಯಾಪಾರಿಗಳ ಸ್ಥಿತಿ ಇನ್ನೂ ಗಂಭೀರವಾಗಿದೆ.

ಕೋಳಿ ಅಥವಾ ಆಡುಗಳನ್ನು ಖರೀದಿಸಲು ಗ್ರಾಮಗಳಿಗೆ ಬರುತ್ತಿದ್ದ ಮಧ್ಯವರ್ತಿಗಳು ಈಗ ಬರುತ್ತಿಲ್ಲ. ನಗರದಲ್ಲಿನ ಮಾಂಸಾಹಾರಿ ಹೋಟೆಲ್‌, ಬಾರ್ ಆ್ಯಂಡ್‌ ರೆಸ್ಟೋರಂಟ್ ಹಾಗೂ ವಸತಿ ನಿಲಯಗಳು ಒಂದು ತಿಂಗಳಿಂದ ಬಂದ್‌ ಇವೆ. ಕೆಂಪು ವಲಯದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಹೀಗಾಗಿ ಉದ್ಯಮದ ವ್ಯವಹಾರಕ್ಕೆ ಹಿನ್ನಡೆಯಾಗಿದೆ.

ಜಾನುವಾರು ಮೂಲಕ ಅಥವಾ ಮಾಂಸ ಸೇವನೆಯಿಂದ ಕೋವಿಡ್‌ 19 ಸೋಂಕು ಹರಡುವುದಿಲ್ಲ. ಮಾಂಸಾಹಾರದಿಂದ ಸೋಂಕು ಹರಡಿದ ಅಧಿಕೃತ ವರದಿಗಳಿಲ್ಲ. ಮಾಂಸಾಹಾರದಲ್ಲಿ ಪ್ರೊಟಿನ್, ಜೀವಸತ್ವಗಳು ಹಾಗೂ ಲವಣಗಳಂತಹ ಪೋಷಕಾಂಶಗಳು ಇರುತ್ತವೆ. ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಪಶು ಸಂಗೋಪನಾ ಇಲಾಖೆಯು ಮಾಂಸ ಉತ್ಪಾದನೆ ಹಾಗೂ ಸೇವನೆಯಿಂದ ಕೊರೊನಾ ಹರಡುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತಲೇ ಇದೆ. ಆದರೆ ಕೊಳ್ಳುವವರು ಮುಂದೆ ಬರುತ್ತಿಲ್ಲ.

ADVERTISEMENT

‘ಬೀದರ್‌ ನಗರದಲ್ಲಿ 90 ಮಟನ್‌ ಅಂಗಡಿಗಳು ಇವೆ. ಪ್ರತಿ ಅಂಗಡಿಯವರು ಮಾಸಿಕ ಸರಾಸರಿ ₹40 ರಿಂದ 60 ಸಾವಿರ ಆದಾಯ ಪಡೆಯುತ್ತಾರೆ. ಈ ಉದ್ಯಮದಿಂದ ಅನೇಕ ಕಾರ್ಮಿಕರೂ ಬದುಕುತ್ತಿದ್ದಾರೆ. ಒಂದು ತಿಂಗಳಿಂದ ಅವರ ಬದುಕು ಕಷ್ಟವಾಗಿದೆ’ ಎಂದು ಆಲ್‌ ಇಂಡಿಯಾ ಜಮಾತ್ ಉಲ್ ಖುರೇಶ್ ರಾಜ್ಯ ಘಟಕದ ಉಪಾಧ್ಯಕ್ಷ ನಬಿ ಖುರೇಶಿ ಹೇಳುತ್ತಾರೆ.

‘ಲಾಕ್‌ಡೌನ್‌ನಲ್ಲಿ ಸ್ವಲ್ಪಮಟ್ಟಿಗೆ ಸಡಿಲಿಕೆ ನೀಡಿ ಕೆಂಪು ವಲಯ ಹೊರತು ಪಡಿಸಿ ಬೇರೆ ಕಡೆಗೆ ಮಾಂಸ ಮಾರಾಟ ಮಾಡಲು ಅವಕಾಶ ನೀಡಲಾಗಿದೆ’ ಎಂದು ಹೇಳುತ್ತಾರೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಗೋವಿಂದ್‌.

ಬೀದರ್‌ ನಗರದಲ್ಲಿ ವಧಾಲಯ ಹಾಗೂ ಮಾಂಸ ಮಾರಾಟಕ್ಕೆ ಅವಕಾಶ ನೀಡಿಲ್ಲ. ನಗರದ ಹೊರ ವಲಯದಲ್ಲಿ ಅಲ್ಲಲ್ಲಿ ಕದ್ದುಮುಚ್ಚಿ ಕುರಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಸ್ವಚ್ಛತೆ ಕಾಯ್ದುಕೊಳ್ಳದಿದ್ದರೆ ಕೆಲ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ತಜ್ಞರು ಕೆಲ ಸಲಹೆಗಳನ್ನು ನೀಡಿದ್ದಾರೆ.

ಪಶು ಪಾಲಕರು ಕೋಳಿ ಅಥವಾ ಆಡುಗಳನ್ನು ಮಾರಾಟ ಮಾಡಲು ಹೊರಗಡೆ ಹೋದರೆ ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಗ್ರಾಹಕರೊಂದಿಗೆ ಅಂತರ ಕಾಯ್ದುಕೊಳ್ಳಬೇಕು. ಪಶು ಪಾಲಕರು, ಮಾರಾಟಗಾರರು ಹಾಗೂ ಮಧ್ಯವರ್ತಿಗಳು ಸ್ಯಾನಿಟೈಸರ್ ಬಳಸಿ ಆಗಾಗ ಕೈಗಳನ್ನು ಸ್ವಚ್ಛಗೊಳಿಸುತ್ತಿರಬೇಕು ಎಂದು ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶಕುಮಾರ ರಾಠೋಡ ಸಲಹೆ ನೀಡಿದ್ದಾರೆ.

ಕೋಳಿ ಅಥವಾ ಆಡುಗಳನ್ನು ಮಾರಾಟ ಮಾಡುವಾಗ ದ್ವಿಚಕ್ರ ವಾಹನ ಅಥವಾ ಇನ್ನಿತರ ವಾಹನಗಳನ್ನು ಬಳಸಿದ್ದರೆ ಅವುಗಳನ್ನು ಕೂಡ ಸಾಬೂನಿನ ನೀರಿನಿಂದ ಸ್ವಚ್ಛಗೊಳಿಸಬೇಕು. ಸಾಧ್ಯವಾದಷ್ಟು ನಗದು ವ್ಯವಹಾರ ಕಡಿಮೆ ಮಾಡಿ ಆನ್‍ಲೈನ್ ಪಾವತಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.