ADVERTISEMENT

ಬಸವಕಲ್ಯಾಣ: ಸೇತುವೆಗೆ ತಡೆಗೋಡೆ ಇಲ್ಲದೆ ತೊಂದರೆ

ಕೊಳವೆಗಳು ಚಿಕ್ಕದಾಗಿರುವುದರಿಂದ ಚರಂಡಿ ಮತ್ತು ಮಳೆ ನೀರು ಸರಾಗವಾಗಿ ಸಾಗದೆ ಸಂಕಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 7:14 IST
Last Updated 3 ಆಗಸ್ಟ್ 2025, 7:14 IST
ರವೀಂದ್ರ ಬೋರೋಳೆ
ರವೀಂದ್ರ ಬೋರೋಳೆ   

ಬಸವಕಲ್ಯಾಣ: ನಗರದ ಮುಖ್ಯ ರಸ್ತೆಯಲ್ಲಿನ ಕೈಕಾಡಿ ಓಣಿ ಹತ್ತಿರದ ಸೇತುವೆ ಚಿಕ್ಕದಾಗಿರುವ ಕಾರಣ ಚರಂಡಿ ಮತ್ತು ಮಳೆ ನೀರು ಸರಾಗವಾಗಿ ಸಾಗದೆ ತೊಂದರೆ ಆಗುತ್ತಿದೆ. ಇದಕ್ಕೆ ತಡೆಗೋಡೆಯೂ ಇಲ್ಲದ್ದರಿಂದ ವಾಹನಗಳು ಕೆಲಸಲ ಜಾರಿ ನಾಲೆಯೊಳಗೆ ಬಿದ್ದಿವೆ.

ನಾರಾಯಣಪುರ ಕ್ರಾಸ್ ದಿಂದ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಇದಾಗಿದೆ. ಇಲ್ಲಿ ವಾಹನ ದಟ್ಟಣೆಯೂ ಹೆಚ್ಚಿರುತ್ತದೆ. ಆದರೆ, ಹಲವಾರು ಸಲ ಆಗ್ರಹಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರಾತ್ರಿ ಸಮಯದಲ್ಲಿ ಕೆಲಸಲ ದಾರಿ ಕಾಣದೆ ದ್ವಿಚಕ್ರ ವಾಹನಗಳು ಒಳಗೆ ಬಿದ್ದು ಹಲವರಿಗೆ ಗಾಯಗಳಾಗಿದ್ದರೂ ಸಂಬಂಧಿತರು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ.

ರಸ್ತೆಯ ಅಕ್ಕಪಕ್ಕದಲ್ಲಿ ಕೈಕಾಡಿ ಓಣಿ, ತೆಲಂಗ್ ಗಲ್ಲಿ, ಧರ್ಮಪ್ರಕಾಶ ಓಣಿ, ಸತ್ಯನಾರಾಯಣ ಓಣಿ, ಪಾರಧಿ ಗಲ್ಲಿಗಳಿವೆ. ಸೇತುವೆ ಪಕ್ಕದಿಂದಲೇ ತೆಲಂಗ್ ಗಲ್ಲಿಗೆ ಹೋಗುವುದಕ್ಕೆ ಚಿಕ್ಕ ದಾರಿಯಿದೆ. ಸೇತುವೆಯ ಕೊಳವೆಗಳು ಚಿಕ್ಕದಾಗಿರುವ ಕಾರಣ ಎರಡೂ ಭಾಗದಲ್ಲಿ ಯಾವಾಗಲೂ ನೀರು ಸಂಗ್ರಹಗೊಂಡು ಕೆಸರು, ಕೊಚ್ಚೆ ನಿರ್ಮಾಣ ಆಗುತ್ತದೆ. ಆಗಾಗ ಪಾಚಿಗಟ್ಟಿದಂತಾಗಿ ದುರ್ನಾತ ಸೂಸುತ್ತದೆ.

ADVERTISEMENT

ಹೆಚ್ಚಿನ ಮಳೆಯಾದಾಗ ನೀರು ಮುಂದಕ್ಕೆ ಸಾಗದೆ ಹಿಂಬದಿಯಲ್ಲಿನ ಮನೆಗಳ ಅಂಗಳ ತಲಪುತ್ತದೆ. ಕೆಲಸಲ ಮನೆಗಳಲ್ಲಿಯೂ ನುಗ್ಗುತ್ತದೆ. ಹೀಗಾಗಿ ಹಲವಾರು ಸಲ ಬಟ್ಟೆ, ಆಹಾರಧಾನ್ಯ ಹಾಗೂ ಇತರೆ ಸಾಮಗ್ರಿ ಹಾಳಾಗಿರುವುದುಂಟು. ಈ ನೀರು ರಸ್ತೆಯ ಮೇಲಿನಿಂದಲೂ ಹರಿಯುವುದರಿಂದ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ.

ಈ ಸೇತುವೆ ಎತ್ತರಿಸಬೇಕು. ಇದರ ಕಾಮಗಾರಿ ಆರಂಭ ಆಗುವವರೆಗೆ ಇದಕ್ಕೆ ತಡೆಗೋಡೆ ನಿರ್ಮಿಸಬೇಕು. ತೆಲಂಗ ಗಲ್ಲಿ ಮತ್ತು ಸತ್ಯನಾರಾಯಣ ಓಣಿಯಿಂದ ಹೋಗುವ ಮುಖ್ಯ ಕಾಲುವೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಚರಂಡಿ ಮೇಲಿನ ಅತಿಕ್ರಮಣ ತೆರವುಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಅನೇಕ ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ ಎಂದು ಓಣಿ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬಸವಕಲ್ಯಾಣ ನಗರದ ಕೈಕಾಡಿ ಓಣಿ ಹತ್ತಿರದ ಮುಖ್ಯ ಬಸ್ ನಿಲ್ದಾಣದ ರಸ್ತೆಯಲ್ಲಿನ ಸೇತುವೆಗೆ ತಡೆಗೋಡೆ ಇಲ್ಲ
ಚರಂಡಿ ನೀರು ಹರಿಯುವ ಮುಖ್ಯ ಕಾಲುವೆಯ ಮೇಲಿನ ಅತಿಕ್ರಮಣ ತೆರವುಗೊಳಿಸಿದರೆ ಮಳೆಯಲ್ಲಿ ಜೋಪಡಿ ಮನೆಗಳು ಜಲಾವೃತ್ತಗೊಳ್ಳುವುದು ತಪ್ಪುತ್ತದೆ
ರವೀಂದ್ರ ಬೋರೋಳೆ ಸದಸ್ಯ ನಗರಸಭೆ
ಇಳಿಜಾರು ಪ್ರದೇಶದಲ್ಲಿರುವ ಕಾರಣ ನಗರದ ಬಹುಭಾಗದ ನೀರು ಇಲ್ಲಿಗೆ ಹರಿದು ಬರುವುದರಿಂದ ಮುಖ್ಯ ರಸ್ತೆಯಲ್ಲಿನ ಸೇತುವೆ ಎತ್ತರಗೊಳಿಸುವುದು ಅಗತ್ಯ.
-ರಾಮ ಜಾಧವ ಸದಸ್ಯ ನಗರಸಭೆ

ಹಲವಾರು ಸಲ ಮನೆಗಳು ಜಲಾವೃತ್ತ:

ಮುಖ್ಯ ರಸ್ತೆಯ ಪಕ್ಕದಲ್ಲಿರುವ ಕೈಕಾಡಿ ಓಣಿ ತೆಲಂಗ ಗಲ್ಲಿ ಸತ್ಯನಾರಾಯಣ ಓಣಿಯ ಮನೆಗಳು ಅತ್ಯಧಿಕ ಮಳೆ ಸುರಿದಾಗ ಹಲವಾರು ಸಲ ಜಲಾವೃತ್ತಗೊಂಡಿದ್ದವು. ತೆಲಂಗ ಗಲ್ಲಿಯಲ್ಲಿನ ಜೋಪಡಿ ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಸಾಮಗ್ರಿ ಹಾಳಾಗಿತ್ತು. ಶರಣಬಸಪ್ಪ ಕೊಟ್ಟಪ್ಪಗೋಳ ಅವರು ಉಪ ವಿಭಾಗಾಧಿಕಾರಿ ಆಗಿದ್ದಾಗ ಜನರಿಗೆ ಮನೆಯಿಂದ ಹೊರ ಬರಲು ಆಗಿರಲಿಲ್ಲ. ಆದ್ದರಿಂದ ಸ್ವತಃ ಅವರೇ ಇಡೀ ರಾತ್ರಿ ಸ್ಥಳದಲ್ಲಿದ್ದು ಯಂತ್ರಗಳಿಂದ ನೀರು ಖಾಲಿ ಮಾಡಿಸಿದ್ದರು. ಹೀಗಿದ್ದಾಗಲೂ ನಂತರದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.